ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯಾದ ಕಾರಣ, ಕಾಫಿ ಮತ್ತು ಟೀ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಗಳೂರು ಹೊಟೇಲ್ ಮಾಲೀಕರ ಸಂಘವು ದರವನ್ನು 2-3 ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಬೆಂಗಳೂರು (ಮಾ.27): ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆ, ಕಾಫಿ ಮತ್ತು ಟೀಯ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಎದುರಾಗಿದೆ. ಈ ಬಗ್ಗೆ ಬೆಂಗಳೂರು ಹೊಟೇಲ್ ಮಾಲೀಕರ ಸಂಘವು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, ಒಂದು ಕಪ್ ಕಾಫಿ ಅಥವಾ ಟೀಯ ದರವನ್ನು 2-3 ರೂಪಾಯಿಗಳಷ್ಟು ಹೆಚ್ಚಿಸುವ ತೀರ್ಮಾನಕ್ಕೆ ಬಂದಿದೆ.
ಹೆಚ್ಚುವರಿ ವೆಚ್ಚ ಭರಿಸುವ ಅನಿವಾರ್ಯತೆ:
ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಕಾರ್ಯದರ್ಶಿ ವೀರೇಂದ್ರ ಕಾಮತ್ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ, 'ಬಹುತೇಕ ಹೊಟೇಲ್‌ಗಳಲ್ಲಿ ಕಾಫಿ ಮತ್ತು ಟೀ ತಯಾರಿಸಲು ನಂದಿನಿ ಹಾಲನ್ನೇ ಬಳಸಲಾಗುತ್ತದೆ. ಹಾಲಿನ ದರ ಏರಿಕೆಯಿಂದಾಗಿ ಕಾಫಿ ತಯಾರಿಕೆಯ ಹೆಚ್ಚುವರಿ ವೆಚ್ಚವನ್ನು ಭರಿಸಲು ದರ ಹೆಚ್ಚಿಸುವುದು ಅನಿವಾರ್ಯವಾಗಿದೆ' ಎಂದು ತಿಳಿಸಿದ್ದಾರೆ. ಇದರ ಜೊತೆಗೆ, ಕಾಫಿ ಪುಡಿಯ ದರವೂ ಇತ್ತೀಚೆಗೆ ಏರಿಕೆಯಾಗಿದೆ ಎಂಬುದನ್ನು ಸಂಘದ ಮಾಜಿ ಅಧ್ಯಕ್ಷ ಪಿಸಿ ರಾವ್ ಒಪ್ಪಿಕೊಂಡಿದ್ದಾರೆ. 'ಕಾಫಿ ಪುಡಿಯ ರೇಟ್ ಏರಿದಾಗಲೂ ನಾವು ಸುಮ್ಮನಿದ್ದೆವು, ಆದರೆ ಈಗ ಹಾಲಿನ ದರ ಏರಿಕೆಯೊಂದಿಗೆ ಇದನ್ನು ಮುಂದುವರಿಸುವುದು ಕಷ್ಟವಾಗಿದೆ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ; ಬೆಲೆ ಏರಿಕೆಯ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಬರೆ!
ದಿನಸಿ ಬೆಲೆ ಹೆಚ್ಚಳ ನಡುವೆ ಗ್ರಾಹಕರಿಗೆ ಹೊಸ ಬರೆ:
ದಿನಸಿ ಸಾಮಗ್ರಿಗಳ ದರವೂ ಏರಿಕೆಯಾಗುತ್ತಿರುವುದರಿಂದ ಒಟ್ಟಾರೆ ವೆಚ್ಚದ ಒತ್ತಡ ಹೆಚ್ಚಾಗಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ. "ಈ ಎಲ್ಲಾ ಕಾರಣಗಳಿಂದಾಗಿ ನಾವು ದರ ಹೆಚ್ಚಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿದ್ದೇವೆ' ಎಂದು ವೀರೇಂದ್ರ ಕಾಮತ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಈ ದೇಶ ಧರ್ಮಶಾಲೆಯಲ್ಲ..; ರೋಹಿಂಗ್ಯಾ, ಬಾಂಗ್ಲಾದೇಶಿಗಳಿಗೆ ಅಮಿತ್ ಶಾ ಎಚ್ಚರಿಕೆ!
ಗ್ರಾಹಕರ ಮೇಲೆ ಪರಿಣಾಮ:
ಈ ದರ ಏರಿಕೆಯಿಂದ ಗ್ರಾಹಕರಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇದೆ. ಆದರೆ, ಹೊಟೇಲ್ ಮಾಲೀಕರು ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. 'ನಮಗೂ ಇದು ಖುಷಿಯ ವಿಷಯವಲ್ಲ, ಆದರೆ ವೆಚ್ಚವನ್ನು ಸರಿದೂಗಿಸಲು ಬೇರೆ ದಾರಿ ಇಲ್ಲ' ಎಂದು ಪಿಸಿ ರಾವ್ ಹೇಳಿದ್ದಾರೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (KMF) ರೈತರಿಗೆ ಹೆಚ್ಚಿನ ಪ್ರೊತ್ಸಾಹಧನ ನೀಡುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಿರುವುದಾಗಿ ತಿಳಿಸಿದೆ. ಆದರೆ, ಈ ನಿರ್ಧಾರದ ಪರಿಣಾಮವು ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ ಎಂಬ ಚರ್ಚೆ ಆರಂಭವಾಗಿದೆ.