ಆನೇಕಲ್ ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಿಯ ಜಾತ್ರೆಯಲ್ಲಿ ತೇರು ಬಿದ್ದ ದುರಂತದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಜಸ್ವ ನಿರೀಕ್ಷಕ ಪ್ರಶಾಂತ್ ಮತ್ತು ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಡಿ. ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿಸಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಮಾ.27): ಆನೇಕಲ್ ತಾಲ್ಲೂಕು ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವದ ತೇರು ಬಿದ್ದಿರುವ ಘಟನೆಯ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕ ಪ್ರಶಾಂತ್ ಹಾಗೂ ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಡಿ. ಅವರನ್ನು ಇಲಾಖೆ ವಿಚಾರಣೆ ಬಾಕಿ ಉಳಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಐತಿಹಾಸಿಕ ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಮಾರ್ಚ್ 22 ರಂದು ಬರೋಬ್ಬರಿ 100 ಅಡಿ ಎತ್ತರದ ತೇರು ಬಿದ್ದ ಘಟನೆಯಲ್ಲಿ ಇಬ್ಬರು (1 ಗಂಡು ಮತ್ತು 1 ಹೆಣ್ಣು) ಮೃತಪಟ್ಟಿದ್ದಾರೆ. ಜೊತೆಗೆ, 8 ಮಂದಿ ತೀರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆ ತಡೆಯಲು ಸ್ಥಳದಲ್ಲಿದ್ದ ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ವಿಫಲರಾಗಿದ್ದಾರೆ ಎಂದು ಆನೇಕಲ್ ತಾಲ್ಲೂಕು ತಹಸೀಲ್ದಾರ್ ನೀಡಿದ್ದ ವರದಿಯ ಆಧಾರದ ಮೇಲೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: ಆನೇಕಲ್‌ನಲ್ಲಿ ಮದ್ದೂರಮ್ಮ ಜಾತ್ರೆಯ 100 ಅಡಿ ಎತ್ತರದ ರಥ ಬಿದ್ದ ರಹಸ್ಯ ಬಿಚ್ಚಿಟ್ಟ ಸ್ಥಳೀಯರು!
ಸರ್ಜಾಪುರ ಹೋಬಳಿಯ ಹುನ್ನೂರು ವೃತ್ತದ ರಾಜಸ್ವ ನಿರೀಕ್ಷಕ ಪ್ರಶಾಂತ್ ಹಾಗೂ ಹುಸ್ಕೂರು ವೃತ್ತದ ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿರುವ ಜಿಲ್ಲಾಧಿಕಾರಿಗಳು, ಅಮಾನತುಗೊಂಡಿರುವ ಪ್ರಶಾಂತ್ ಅವರನ್ನು ಬೆಂಗಳೂರು ಪೂರ್ವ ತಾಲ್ಲೂಕು ಕೆ.ಆರ್.ಪುರ ವೃತ್ತಕ್ಕೂ ಹಾಗೂ ಕಾರ್ತಿಕ್ ಡಿ. ಅವರನ್ನು ಮಾರತ್ತಹಳ್ಳಿ ಹೋಬಳಿಯ ಎಚ್ಎಎಲ್ ಸ್ಯಾನಿಟರಿ ಬೋರ್ಡ್ ವೃತ್ತಕ್ಕೆ ಸ್ಥಳ ನಿಯುಕ್ತಿಗೊಳಿಸಿದ್ದಾರೆ. ಇವರಿಬ್ಬರೂ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಕಾರ್ಯ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: 'ಜಸ್ಟೀಸ್ ಫಾರ್ ಸೌಜನ್ಯ' ಫಲಕ ಪ್ರದರ್ಶನ ಕಾರಣವೇ?