ಶಕ್ತಿ ಯೋಜನೆ ಬೇಡ ಎನ್ನುವವರು ಸ್ಥಿತಿವಂತರಾಗಿರಬಹುದು. ದೇವರು ಚೆನ್ನಾಗಿಟ್ಟಿರಬಹುದು. ಅವರಿಗೆ ಒಳ್ಳೆಯದಾಗಲಿ ಅಂತವರು ಉಚಿತ ಪ್ರಯಾಣ ಮಾಡುವುದು ಬಿಡಲಿ, ಪ್ರಯಾಣಕ್ಕೆ ಕಾಸಿಲ್ಲದ ಕೋಟ್ಯಂತರ ಮಹಿಳೆಯರಿದ್ದಾರೆ ಅಂತವರಿಗಾಗಿ ನಾವು ಜಾರಿ ಮಾಡಿರುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಉಡುಪಿ (ಅ.31): ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿಗಳು ನಿಲ್ಲುವುದಿಲ್ಲ ಮುಂದಾಲೋಚನೆ ಇಟ್ಟುಕೊಂಡೇ ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದೇವೆ ಎಂದು ಹೇಳುವ ಮೂಲಕ ರದ್ದಾಗುತ್ತದೆ ಎಂಬ ಊಹಾಪೋಹಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರೆ ಎಳೆದರು.
ಇಂದು ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬಡ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಲು ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ದೇಶದಲ್ಲೇ ಪ್ರಥಮ ಬಾರಿಗೆ ಪಂಚ ಗ್ಯಾರಂಟಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಚುನಾವಣಾ ಪೂರ್ವ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಇಂದಿರಾಗಾಂಧಿ ಬದಲು ಸೋನಿಯಾ ಗಾಂಧಿ ಶ್ರದ್ಧಾಂಜಲಿ ಹೇಳಿದ ಖರ್ಗೆ!
ಪಂಚ ಗ್ಯಾರಂಟಿ ಕರ್ನಾಟಕ ಮಾಡೆಲ್:
ಪಂಚ ಗ್ಯಾರಂಟಿಗಳೇ ಕರ್ನಾಟಕ ಮಾಡೆಲ್. ಈ ಮಾದರಿಯನ್ನ ಇಡೀ ದೇಶದಲ್ಲಿ ಯೂಟಿಲೈಸ್ ಮಾಡುತ್ತಿದ್ದಾರೆ. ನಮ್ಮ ಪಕ್ಷ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಗ್ಯಾರಂಟಿ ಯೋಜನೆ ಇಂದು ಕರ್ನಾಟಕ ಮಾಡೆಲ್ ಆಗಿದೆ. ಅದನ್ನ ವಿವಿಧ ರಾಜ್ಯಳಿಗೂ ವಿಸ್ತರಿಸಿದ್ದೇವೆ. ಶಕ್ತಿ ಯೋಜನೆ ಬಗ್ಗೆ ಯಾವುದೇ ಗೊಂದಲ ಬೇಡ. ಡಿಕೆ ಶಿವಕುಮಾರ್ ಅವರನ್ನು ನಾವು ಇವತ್ತು ನೋಡುತ್ತಿಲ್ಲ. ಅವರು ಅಧ್ಯಕ್ಷರಾದಾಗ ಕೋವಿಡ್ ಇತ್ತು. ರಾಜ್ಯದಲ್ಲಿ ಓಡಾಡುವಾಗ ಬಹಳಷ್ಟು ಮಹಿಳೆಯರು ಬೆಲೆ ಏರಿಕೆ ಬಗ್ಗೆ ದೂರಿದ್ದರು. ಈ ಬಗ್ಗೆ ಏನಾದರೂ ಮಾಡಬೇಕು ಎಂದು ಡಿಕೆ ಶಿವಕುಮಾರ ಯೋಚಿಸಿದ್ದರು. ಬೆಲೆ ಏರಿಕೆ ಕಡಿಮೆ ಮಾಡಲು ಗ್ಯಾರಂಟಿ ಯೋಜನೆ ಜಾರಿ ತರುವ ಬಗ್ಗೆ ಮೊದಲು ಯೋಚನೆ ಮಾಡಿದವರೇ ಡಿಕೆ ಶಿವಕುಮಾರ ಅವರು. ಅಂದು ಮಹಿಳೆಯರ ಜೊತೆ ಚರ್ಚೆ, ಸಂವಾದ ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದರು.
ಶಕ್ತಿ ಯೋಜನೆ ಬೇಡ ಎನ್ನುವವರು ಬಳಸುವುದು ಬಿಡಲಿ:
ಡಿಕೆ ಶಿವಕುಮಾರ ಅವರ ಉದ್ದೇಶ ಸ್ಪಷ್ಟವಾಗಿದೆ. ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ. ಯಾವುದೇ ಪರಿಸ್ಥಿತಿ ಬಂದರೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದರು. ಇದೇ ವೇಳೆ 'ಮಹಿಳೆಯರೇ ಶಕ್ತಿ ಯೋಜನೆ ಬೇಡ' ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಒಬ್ಬರು ಇಬ್ಬರು ಮಹಿಳೆಯರು ಹೇಳಿದರೆ ಜನಾದೇಶ ಆಗೋಲ್ಲ. ಲಕ್ಷಾಂತರ ಮಹಿಳೆಯರು ಇದರ ಉಪಯೋಗ ಪಡೆಯುತ್ತಿದ್ದಾರೆ. ಒಬ್ಬರು ಇಬ್ಬರು ಹೇಳ್ತಾ ಇದ್ರೆ ಅವರು ಪ್ರಯಾಣ ಮಾಡುವುದು ಬಿಡಲಿ. ದೇವರು ಅವರನ್ನು ಅನುಕೂಲವಾಗಿಟ್ಟಿರಬಹುದು. ಅಂತವರಿಗೆ ಒಳ್ಳೆಯದಾಗಲಿ. ಆದರೆ ಬಸ್ ಪ್ರಯಾಣಕ್ಕೂ ಕಾಸಿಲ್ಲದ ಕೋಟ್ಯಂತರ ಮಹಿಳೆಯರಿದ್ದಾರೆ. ನಾವು ಅಂತವರನ್ನು ಸಬಲೀಕರಣಕ್ಕಾಗಿ ಈ ಯೋಜನೆ ಜಾರಿ ಮಾಡಿರುವುದು ಹೊರತು ಸ್ಥಿತಿವಂತರು ಪ್ರಯಾಣ ಮಾಡಲಿ ಎಂದಲ್ಲ ಎಂದರು.
ಶಕ್ತಿ ಯೋಜನೆಯಿಂದ ನಿಗಮಕ್ಕೆ ಲಾಭ:
ಇನ್ನು ಶಕ್ತಿ ಯೋಜನೆಯಿಂದಾಗಿ ನಿಗಮಗಳು ನಷ್ಟದಲ್ಲಿವೆ ಎಂಬ ಆರೋಪ ತಳ್ಳಿಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಕ್ತಿ ಯೋಜನೆಯಿಂದ ನಿಗಮಕ್ಕೆ ಯಾವುದೇ ನಷ್ಟವಿಲ್ಲ. ವಾಸ್ತವ ಎಂದರೆ ಶಕ್ತಿ ಯೋಜನೆ ಬರುವ ಮುಂಚೆಯೇ ನಿಗಮಗಳು ತೊಂದರೆಯಲ್ಲಿದ್ದವು. ಶಕ್ತಿ ಯೋಜನೆ ಬಂದ ನಂತರ ನಿಗಮಗಳು ಚೆನ್ನಾಗಿವೆ ಎಂದರು ಇದೇ ವೇಳೆ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಚನ್ನಪಟ್ಟಣ, ಸಂಡೂರು, ಶಿಗ್ಗಾಂವ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಪಕ್ಷ, ಧರ್ಮ, ಭಾಷಾತೀತವಾಗಿ ಸರ್ವೇಜನಃ ಸುಖಿನೋಭವಂತು ಎಂದು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ನಮ್ಮನ್ನು ಜನ ಒಪ್ಪಿದ್ದಾರೆ ಎಂದರು.
ವಕ್ಫ್ ವಿವಾದಕ್ಕೆ ಯಾರೂ ಕಿವಿಗೊಡಬೇಡಿ:
ಇದೇ ವೇಳೆ ವಕ್ಫ್ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಸಿಎಂ ಸಿದ್ದರಾಮಯ್ಯ ನಿನ್ನೆಯೇ ಸ್ಪಷ್ಟಪಡಿಸಿದ್ದಾರೆ. ಒಂದು ಇಂಚು ಜಾಗ ಬಿಟ್ಟು ಕೊಡುವುದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಕಾಗೆ ಕುಳಿತುಕೊಳ್ಳುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಗಿದೆ. ಇಂತಹ ವಿಚಾರಗಳ ಬಗ್ಗೆ ಕಿವಿಗೊಡಬೇಡಿ. ನೋಟಿಸ್ ಹಿಂದೆ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಮ್ಮ ಸರ್ಕಾರ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಕೆಲಸ ಮಾಡುತ್ತಿದೆ. ನಾನು ಕೂಡ ವೈಯಕ್ತಿಕವಾಗಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಯಾವುದೇ ಸಂಘಟನೆ, ಜಾತಿಯನ್ನು ಓಲೈಸುವ ಕೆಲಸ ಆಗಬಾರದು ಎಂದರು.
ಜಾತಿ ಗಣತಿ ವರದಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಜಾತಿ ಗಣತಿ ಬಗ್ಗೆ ಆದಷ್ಟು ಬೇಗ ಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದರು.
ಶಕ್ತಿ ಯೋಜನೆ ಪರಿಷ್ಕರಣೆ: ಡಿ.ಕೆ. ಶಿವಕುಮಾರ್ ಯೂಟರ್ನ್, ಸಾರಿಗೆ ಸಚಿವ ಗರಂ!
ದರ್ಶನ್ ಗೆ ಮಧ್ಯಂತರ ಬೇಲ್:
ಯಾರೇ ಆಗಲಿ ದೇಶದ ಕಾನೂನು, ನೆಲದ ಕಾನೂನು ಬಗ್ಗೆ ನಾನಾಗಲಿ, ಅವರಾಗಲಿ ಗೌರವ ಕೊಡಬೇಕು. ಮಧ್ಯಂತರ ಜಾಮೀನು ಸಿಕ್ಕಿದೆ ದೀಪಾವಳಿ ಹಬ್ಬ ಇದೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.