ಜಿಲ್ಲಾಧಿಕಾರಿಗಳ ವಿರುದ್ಧ ಶಾಸಕ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸನಾಂಬೆ ದೇವಿಯ ದರ್ಶನಕ್ಕೆ ಪಾಸ್‌ಗಳನ್ನು ಮಾಡಿದ್ದಕ್ಕೆ ಹಾಗೂ ಹಾಸನಾಂಬ ದರ್ಶನದ ಕುರಿತು ಅವ್ಯವಸ್ಥೆ ಮಾಡಿದ ಡಿಸಿ ವಿರುದ್ಧ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಹಾಸನ (ಅ.31): ಜಿಲ್ಲಾಧಿಕಾರಿ ಒಬ್ಬ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕುತ್ತಾ ಮುಖ್ಯ ಕಾರ್ಯದರ್ಶಿಗಳಿಗೆ ಹೇಳಿ ನಿಮ್ಮನ್ನು ಸಸ್ಪೆಂಡ್ ಮಾಡುಸ್ತಿನಿ ಅಂತ ಬೆದರಿಕೆ ಹಾಕ್ತಾರೆ. ಮುಖ್ಯಕಾರ್ಯದರ್ಶಿಗಳೇ ನಿಮಗೆ ಧಮ್ ಇದ್ದರೆ, ಹಾಸನಾಂಬೆ ದರ್ಶನದ ಅವ್ಯವಸ್ಥೆ ಮಾಡಿದ ಜಿಲ್ಲಾಧಿಕಾರಿ ಬಗ್ಗೆ ತನಿಖೆ ಮಾಡಬೇಕು. ವಿಶೇಷ ಪಾಸ್ ಅಂತ ಕೊಟ್ಟು ಎಂಎಲ್‌ಎಗಳ ಗೌರವವನ್ನು ಗಾಳಿಗೆ ತೂರಿದ್ದಾರೆ. ನಾವೇನಾದರೂ ಇವರನ್ನು ಪಾಸ್ ಕೇಳಲು ಹೋಗಿದ್ದೀವಾ? ನಾನು ಟಿಕೆಟ್ ತಗೊಂಡು ಹೋದೆ. ದೇವಸ್ಥಾನ ಆ ಯಮ್ಮನದ್ದಲ್ವಾ? ಎಂದು ಶಾಸಕ ಹೆಚ್.ಡಿ. ರೇವಣ್ಣ ಕಿಡಿಕಾರಿದರು.
ಹಾಸನಾಂಬೆ ದೇವಿಯ ದರ್ಶನ ಪಡೆದುಕೊಂಡು ಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವರ ದರ್ಶನಕ್ಕೆ ಪಾಸ್‌ಗಳನ್ನು ಮಾಡಲು ಯಾರು ಅಧಿಕಾರ ಕೊಟ್ಟರು. ದಿನಕ್ಕೆ ಎಷ್ಟು ಪ್ರೋಟೋಕಾಲ್ ವಾಹನ ಬಿಟ್ಟಿದ್ದಾರೆ. ಯಾರನ್ನು ಪ್ರೋಟೋಕಾಲ್ ಎಂದು ತೀರ್ಮಾನ ಮಾಡಿದ್ದೀರಿ. ನಾವೆಲ್ಲ ಹೆದರಿ ಓಡಿ ಹೋಗ್ತೇವೆ ಎಂದು ಈ ಡಿಸಿ ತಿಳಿದುಕೊಂಡಿದ್ದಾರೆ. ನನ್ನ ಜೀವನದಲ್ಲಿ ಇಂತಹ ಡಿಸಿಗಳನ್ನು ಎಷ್ಟು ಜನ ನೋಡಿದ್ದೀನಿ. ಈ ದೇವಸ್ಥಾನ ನಂದು, ನನ್ನ ಅಪ್ಪಣೆ ಇಲ್ಲದೆ ಬರಂಗಿಲ್ಲ ಎಂದರೆ ನಾನೇಕೆ ಬರಲಿ. ಅದಕ್ಕೆ ಟಿಕೆಟ್ ತಗೊಂಡು ಜನರ ಸಾಲಿನಲ್ಲಿ ನಿಂತುಕೊಂಡು ದರ್ಶನಕ್ಕೆ ಬಂದಿದ್ದೀನಿ. ನಾನು ಶಾಸಕ, ಮಾಜಿಸಚಿವ ಎಂದು ಬಂದಿಲ್ಲ, ಭಕ್ತನಾಗಿ ಹಾಸನಾಂಬೆ ತಾಯಿ ಪೂಜೆಗಾಗಿ ಬಂದಿದ್ದೀನಿ. ಈ ಜಿಲ್ಲೆಯಲ್ಲಿ ನಡೆಸುತ್ತಿರುವುದರ ಬಗ್ಗೆ ಸಮಗ್ರವಾಗಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇನೆ. ಅವರಿಗೆ ತಾಕತ್ ಇದ್ದರೆ ಮುಖ್ಯ ಕಾರ್ಯದರ್ಶಿಗಳು ತನಿಖೆಗೆ ಆರ್ಡರ್ ಮಾಡ್ತಾರೆ. ಇಲ್ಲವಾದಲ್ಲಿ ಈ ಡಿಸಿಗೆ ಸೆರೆಂಡರ್ ಆಗವ್ರೆ ಅಂಥ ಚಾಲೆಂಜ್ ಮಾಡ್ತಿನಿ. ಮುಖ್ಯಕಾರ್ಯದರ್ಶಿಗಳು ಈ ಜಿಲ್ಲೆಯೊಳಗೆ ಇಂತಹ ಡಿಸಿ ಇಟ್ಟುಕೊಂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ: ಹಾಸನಾಂಬೆ ದರ್ಶನ: ವಿಐಪಿ ಪಾಸ್ ರದ್ದು, ಬಸ್ ಸಂಚಾರವೂ ಸ್ಥಗಿತ!
ಹಾಸನಾಂಬೆ ದರ್ಶನಕ್ಕೆ ನಾವ್ಯಾರು ಪಾಸುಗಳನ್ನು ಮಾಡಿಸಿ ಎಂದು ಹೇಳಿಲ್ಲ. ಡಿಸಿ ಅವರ ಆಫೀಸ್‌ನ ಸಿಬ್ಬಂದಿ ಶಶಿಯವರನ್ನು ನೂಕಿದ್ದಾರೆಂದು, ಒಬ್ಬ ಪೊಲೀಸ್ ಅಧಿಕಾರಿ ಮೇಲೆ ಹರಿಹಾಯ್ದರು. ಪ್ರತಿದಿನ 2 ಜೀಪ್‌ಗಳಲ್ಲಿ ಜನರನ್ನು ಕರೆದುಕೊಂಡು ಬರಲು ಅವನ್ಯಾವನು ಶಶಿ. ನಾವೇನಾದರೂ ಪಾಸು ಕೊಡಿ ಅಂತ ಕೇಳಿದ್ವಾ? ಯಾರನ್ನು ಕೇಳಿ ಪಾಸು ಮಾಡಿದ್ದೀರಿ. ಒಬ್ಬ ಪೊಲೀಸ್ ಆಫೀಸರ್‌ಗೆ ಈ ಹಾಸನಾಂಬ ನನ್ನದು ನನ್ನ ಕೇಳದೆ ಯಾರನ್ನು ಒಳಗಡೆ ಬಿಡಬಾರದು ಅಂತ ಹೇಳಿದ್ಧಾರೆ. ಹಾಸನಾಂಬೆ ಜಿಲ್ಲಾಧಿಕಾರಿಗಳ ಆಸ್ತಿ ಎಂದು ವೈರಲ್ ಆಗಿದೆ. ನನ್ನ ಅಪ್ಪಣೆ ಇಲ್ಲದೆ ಯಾರನ್ನು ಬಿಡಬಾರದು, ರಾಜಕೀಯದವರನ್ನು ಬಿಡಬಾರದು ಎನ್ನುವ ಭಾವನೆ ಡಿಸಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಬ್ಬ ಕಂದಾಯ ಇಲಾಖೆ ಮುಸಲ್ಮಾನ್ ಸಮುದಾಯದ ಅಧಿಕಾರಿಯನ್ನು ಜನರನ್ನು ಬಿಡುತ್ತಿದ್ದೀಯಾ ಎಂದು ನೂಕಿ ಹೊಡೆಯುತ್ತಾರೆ. ಅಲ್ಪಸಂಖ್ಯಾತರಿಗೆ ಯಾವ ರೀತಿ ರಕ್ಷಣೆ ಇದೆ ಈ ಜಿಲ್ಲೆಯ ಒಳಗೆ. ಅವನಿಂದ ದೂರು ತೆಗೆದುಕೊಳ್ಳಬೇಕು. ನಮ್ಮ ತೋಟದ ಹುಡುಗರು ವಿವಿಐಪಿ ಪಾಸ್ ಪಡೆದು ಹಾಸನಾಂಬ ದೇವರ ಬಂದಿದ್ದರು. ಸುಮಾರು 6 ಗಂಟೆಗಳ ಕಾಲ ಕಾದರೂ ಒಳಗೆ ಬಿಡಲಿಲ್ಲ. ಇನ್ನು ಅಲ್ಲಿರುವ ಎಸ್‌ಪಿಗೆ ಫೋನ್ ಕೊಡು ಎಂದರೂ ನನ್ನ ಫೋನ್ ಪಡೆಯಲಿಲ್ಲ. ಒಂದು ಕಡೆ ಎಸ್ಪಿ, ಇನ್ನೊಂದು ಕಡೆ ಡಿಸಿ ದೇವರ ದರ್ಶನಕ್ಕೆ ತಡೆ ಒಡ್ಡುತ್ತಿದ್ದಾರೆ. ಇನ್ನು ಶಾಸಕ ಹುಲ್ಲಹಳ್ಳಿ ಸುರೇಶ್ ಸೇರಿ ಇಲ್ಲಿ ಯಾವ ಶಾಸಕರಿಗೂ ಬೆಲೆ ಇಲ್ಲ. ಆದರೆ,ಪೊಲೀಸರು ಮಾತ್ರ ಎರಡು ಜೀಪ್‌ಗಳನ್ನು ತಮ್ಮವರನ್ನು ಕರೆದುಕೊಂಡು ಬರುತ್ತಿದ್ದಾರೆ. ಡಿಸಿಯವರು 4 ಜೀಪ್‌ನಲ್ಲಿ ಐಬಿಯಿಂದ ಜನರನ್ನು ಕರೆದುಕೊಂಡು ಬರುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಹಾಸನಾಂಬೆ ದರ್ಶನದ ವೇಳೆ ಡಿಸಿಗೆ ಆವಾಜ್ ಹಾಕಿದ ಸಿಪಿಐ, 'ಡಿಸ್ಮಿಸ್ ಮಾಡಿಸ್ತೀನಿ' ಎಂದ ಜಿಲ್ಲಾಧಿಕಾರಿ!
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು 40 ವರ್ಷಗಳ ಕಾಲ ರಾಜಕಾರಣ ಮಾಡಿರುವ ಜಿಲ್ಲೆ ಇದು. ಆದರೆ, ಇಲ್ಲಿ ಡಿಸಿ ನನ್ನದು, ನನ್ನತ್ವ ಎನ್ನುವ ಅಹಂ ಭಾವನೆಯನ್ನು ತೋರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರು ಇಲ್ಲ ಎಂದುಕೊಂಡಿದ್ದಾರೆ. ದರ್ಶನಕ್ಕೆ 2.5 ಲಕ್ಷ ವಿಐಪಿ ಪಾಸ್‌ಗಳನ್ನು ಯಾಕೆ ಕೊಟ್ಟಿದ್ದೀರಿ. ಪಾಸ್ಗಳನ್ನು ಕೊಡುವ ಬಗ್ಗೆ ಸ್ಥಳೀಯ ಎಂಎಲ್‌ಎಗೆ ಕೇಳಿದ್ದೀರಾ? ಸ್ವತಃ ಎಂಎಲ್‌ಎಗಳು ದೇವರ ದರ್ಶನಕ್ಕೆ ಎರಡೆರಡು ಕಿಲೋಮೀಟರ್ ನಡೆಯಬೇಕು ಎಂದು ಶಾಸಕ ರೇವಣ್ಣ ಕಿಡಿಕಾರಿದರು.