ಹಾಸನಾಂಬೆ ದರ್ಶನ: ವಿಐಪಿ ಪಾಸ್ ರದ್ದು, ಬಸ್ ಸಂಚಾರವೂ ಸ್ಥಗಿತ!

By Sathish Kumar KH  |  First Published Oct 31, 2024, 4:02 PM IST

ಹಾಸನಾಂಬೆ ದೇವಿಯ ದರ್ಶನಕ್ಕೆ ನೀಡಲಾಗಿದ್ದ ವಿಐಪಿ ಪಾಸ್‌ಗಳನ್ನು ರದ್ದುಗೊಳಿಸಲಾಗಿದೆ. ಭಕ್ತಾದಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ವಿಶೇಷ ಬಸ್‌ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.


ಹಾಸನ (ಅ.31): ದಕ್ಷಿಣ ಭಾರತದಲ್ಲಿ ವರ್ಷದಲ್ಲಿ ದೀಪಾವಳಿ ಹಬ್ಬದ ವೇಳೆ ಕೇವಲ ಒಂದು ವಾರಗಳ ಕಾಲ ದೇವಾಲಯದ ಬಾಗಿಲು ತೆರೆದು ದರ್ಶನ ನೀಡುವ ತಾಯಿ ಹಾಸನದ ಹಾಸನಾಂಬೆ ದೇವರ ದರ್ಶನಕ್ಕೆ ಜಿಲ್ಲಾಡಳಿತದಿಂದ ನೀಡಲಾಗಿದ್ದ ಎಲ್ಲ ಮಾದರಿಯ ವಿಐಪಿ, ವಿವಿಐಪಿ ಪಾಸುಗಳನ್ನು ರದ್ದುಗೊಳಿಸಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಆದೇಶ ಹೊರಡಿಸಲಾಗಿದೆ.

ಹಾಸನಾಂಬ ದೇವಸ್ಥಾನದಲ್ಲಿ ಗುರುವಾರ ವಿಪರೀತವಾಗಿ ಜನಸಂಖ್ಯೆ ಸೇರಿದೆ. ದೇವರ ದರ್ಶನಕ್ಕೆ ಬಂದು ಬೆಳಗ್ಗೆಯಿಂದ ಕಿಲೋಮೀಟರ್‌ಗಟ್ಟೆಲೆ ಸರತಿ ಸಾಲಿನಲ್ಲಿ ನಿಂತಿರುವ ಜನರು ಗಾಳಿ, ಮಳೆಯನ್ನೂ ಲೆಕ್ಕಿಸದೇ ಗಂಟೆಗಟ್ಟಲೇ ಕಾಯುತ್ತಿದ್ದಾರೆ. ಆದರೆ, ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನರಿಗಿಂತ ಹೆಚ್ಚಿನ ಜನರು ಪಾಸ್‌ಗಳನ್ನು ತೋರಿಸಿ ನೇರವಾಗಿ ದೇವಸ್ಥಾನದೊಳಗೆ ಹೋಗುತ್ತಿದ್ದಾರೆ. ಪಾಸ್ ತೋರಿಸಿದವರನ್ನೆಲ್ಲಾ ಒಳಗೆ ಬಿಟ್ಟರೆ ಧರ್ಮದರ್ಶನ ಮಾಡಲು ಬಂದ ಭಕ್ತಾದಿಗಳು ಎಲ್ಲಿಗೆ ಹೋಗಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಜನರು ಕೆಂಡ ಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಾಸ್‌ಗಳನ್ನು ರದ್ದುಗೊಳಿಸಿ ಹಾಸನಾಂಬೆ ದೇವಾಲಯ ಆಡಳಿತ ಅಧಿಕಾರಿ ಮಾರುತಿ ಆದೇಶ ಹೊರಡಿಸಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಹಾಸನಾಂಬೆ ದರ್ಶನದ ವೇಳೆ ಡಿಸಿಗೆ ಆವಾಜ್‌ ಹಾಕಿದ ಸಿಪಿಐ, 'ಡಿಸ್ಮಿಸ್‌ ಮಾಡಿಸ್ತೀನಿ' ಎಂದ ಜಿಲ್ಲಾಧಿಕಾರಿ!

ಹಾಸನಾಂಬೆ ದೇಗುಲದ ಆಡಳಿತ ಮಂಡಳಿ ಆದೇಶದಂತೆ ಹಾಲಿ ಸರತಿ ಸಾಲಿನಲ್ಲಿ ನಿಂತಿರೊ ಜನರನ್ನು ಹೊರತುಪಡಿಸಿ ಯಾವುದೇ ಪಾಸ್ ಬಳಸುವಂತಿಲ್ಲ. ಆದರೆ, ಪಾಸ್ ಪಡೆದುಕೊಂಡು ಬಂದವರು ಕೂಡ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವು ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ದುಂಬಾಲು ಬಿದ್ದು ಪಾಸ್‌ಗಳನ್ನು ಪಡೆದುಕೊಂಡು ಬಂದರೆ, ಇಲ್ಲಿ ಒಳಗೆ ಹೋಗಲು ನಿರಾಕರಣೆ ಮಾಡಲಾಗುತ್ತದೆ. ನೀವು ಕೊಟ್ಟ ಪಾಸ್‌ಗೆ ಅನುಮತಿ ಇಲ್ಲವೆಂದರೆ ಈ ಪಾಸ್‌ಗಳನ್ನು ಏನಕ್ಕೆ ಕೊಟ್ಟಿದ್ದೀರಿ ಎಂದು ಕಿಡಿಕಾರಿದ್ದಾರೆ. ವಿವಿಐಪಿ ಪಾಸ್ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿ, ಈಗ ಪ್ರಾಯಶ್ಚಿತ್ತದ ಕ್ರಮವಾಗಿ ಪಾಸ್ ರದ್ದುಗೊಳಿಸುತ್ತಿದ್ದೀರಾ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಬಸ್‌ಗಳ ಸಂಚಾರ ರದ್ದು: ಇನ್ನು ರಾಜ್ಯದ ವಿವಿಧ ಮೂಲೆಗಳಿಂದ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಾಸನಾಂಬೆ ದರ್ಶನಕ್ಕಾಗಿ ವಿಶೇಷ ಬಸ್‌ ಸಂಚಾರ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಇಂದು ಹಾಸನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ಎಲ್ಲ ವಿಶೇಷ ಸಾರಿಗೆ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 500ಕ್ಕೂ ಅಧಿಕ ಬಸ್‌ಗಳನ್ನು ಹಾಸನಕ್ಕೆ ಬಿಡಲಾಗಿತ್ತು. ಇನ್ನು ಇದೀಗ ದೀಪಾವಳಿ ರಜೆ ಹಿನ್ನೆಲೆಯಲ್ಲಿ ಹಾಸನಾಂಬ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾದ ಬೆನ್ನಲ್ಲಿಯೇ ವಿಶೇಷ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 365 ದಿನಗಳಲ್ಲಿ ದೀಪಾವಳಿಗೆ ಮಾತ್ರ ತೆರೆಯುವ ಹಾಸನಾಂಬ ದೇವರ ಬಗ್ಗೆ ನಿಮಗೆಷ್ಟು ಗೊತ್ತು?

ನಿಯಂತ್ರಣ ತಪ್ಪಿದ ಹಾಸನಾಂಬೆ ದರ್ಶನೋತ್ಸವ: ಇನ್ನು ಹಾಸನದಲ್ಲಿ ದೇವಿ ಹಾಸನಾಂಬೆ ದರ್ಶನ ಪಡೆಯಲು ಬಂದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಅಕ್ಷರಶಃ ಹೆಣಗಾಡುತ್ತಿದ್ದಾರೆ. ದರ್ಶನದ ವೇಳೆ ಭಾರಿ ಮಳೆ ಸುರಿಯುತ್ತಿದೆ. ಆದರೆ, ಭಕ್ತರು ಮಾತ್ರೆ ಮಳೆಗೂ ಜಗ್ಗದೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇನ್ನು ಕೆಲವರು ಮಳೆಯ ರಭಸಕ್ಕೆ ತಾಳಲಾರದೇ ಬ್ಯಾರಿಕೇಡ್ ಮುರಿದು ಒಳ ನುಗ್ಗುತ್ತಿದ್ದಾರೆ. ಇದರಿಂದ ಪೊಲೀಸರು ಭಕ್ತರನ್ನು‌ ನಿಯಂತ್ರಿಸಲಾಗದೆ ಪರದಾಡುತ್ತಿದ್ದಾರೆ. ಇದರಿಂದಾಗಿ ಹಾಸನಾಂಬೆ ದರ್ಶನಕ್ಕೆ ನೀಡಲಾಗಿದ್ದ ವಿಶೇಷ ಪಾಸ್‌ಗಳನ್ನು ರದ್ದುಗೊಳಿಸಲಾಗಿದೆ.

click me!