Money Declaration ಸರ್ಕಾರಿ ನೌಕರರು ತಮ್ಮಲ್ಲಿನ ಹಣ ಘೋಷಿಸುವುದು ಕಡ್ಡಾಯ, ಹೆಚ್ಚಿದ್ದರೆ ಅಕ್ರಮ ಸಂಪಾದನೆ!

Published : Feb 08, 2022, 03:00 AM IST
Money Declaration ಸರ್ಕಾರಿ ನೌಕರರು ತಮ್ಮಲ್ಲಿನ ಹಣ ಘೋಷಿಸುವುದು ಕಡ್ಡಾಯ, ಹೆಚ್ಚಿದ್ದರೆ ಅಕ್ರಮ ಸಂಪಾದನೆ!

ಸಾರಾಂಶ

ನಗದು ಘೋಷಣೆ ಲೆಡ್ಜರ್‌ ನಿರ್ವಹಣೆಗೆ ಸುತ್ತೋಲೆ ಘೋಷಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಇದ್ದರೆ ಅಕ್ರಮ ಸಂಪಾದನೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು(ಫೆ.08):  ಹೈಕೋರ್ಟ್‌(High court) ನಿದೇಶನದ ಅನ್ವಯ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ನೌಕರರ(Government Employee) ‘ನಗದು ಘೋಷಣೆ ವಹಿ’ (ಲೆಡ್ಜರ್‌) ನಿರ್ವಹಣೆ ಮಾಡುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆ ಅನ್ವಯ ನೌಕರರು ಕಚೇರಿಗೆ ಆಗಮಿಸಿದ ತಕ್ಷಣ ತಮ್ಮೊಂದಿಗೆ ತಂದಿರುವ ವೈಯಕ್ತಿಕ ಹಣವನ್ನು ‘ನಗದು ಘೋಷಣೆ(Declare Money) ವಹಿಯಲ್ಲಿ’ (ಲೆಡ್ಜರ್‌) ಘೋಷಿಸಿ ಅಧಿಕೃತ ಸಹಿ ಹಾಕಬೇಕು. ಒಂದು ವೇಳೆ ಕರ್ತವ್ಯದ ಸಮಯದಲ್ಲಿ ನೌಕರರ ಬಳಿ ಘೋಷಿಸಿದ ಮೊತ್ತಕ್ಕಿಂತ ಹೆಚ್ಚು ಹಣ ದೊರೆತರೆ ಅದು ಅಕ್ರಮ ಸಂಪಾದನೆ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

BDA Corruption : ಕಾರ್ನರ್‌ ಸೈಟ್‌ಗಾಗಿ ಎಂತೆಂಥಾ ಗೋಲ್‌ ಮಾಲ್‌.. ನಿಪುಣರೇ ಬೆಚ್ಚಬೇಕು!

ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿ ಈಗಾಗಲೇ ಪ್ರತಿ ಕಚೇರಿಯಲ್ಲೂ ‘ನಗದು ಘೋಷಣೆ ವಹಿ’ ನಿರ್ವಹಣೆ ಮಾಡುವುದು ಕಡ್ಡಾಯ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಈ ಲೆಡ್ಜರ್‌ನ್ನು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಲೋಕಾಯುಕ್ತ(lokayukta) ಅಥವಾ ಭ್ರಷ್ಟಾಚಾರ ನಿಗ್ರಹ ದಳದ(anti corruption bureau) ಅಧಿಕಾರಿಗಳು ದಾಳಿ ನಡೆಸಿ ನೌಕರರ ಬಳಿ ನಗದು ವಶಪಡಿಸಿಕೊಂಡರೆ ಅದು ವೈಯಕ್ತಿಕ ಹಣವೋ ಅಥವಾ ಲಂಚದ ಹಣವೋ ತಿಳಿಯುತ್ತಿರಲಿಲ್ಲ.

ಇದೇ ರೀತಿಯ ಪ್ರಕರಣ ಒಂದರ ವಿಚಾರಣೆ ವೇಳೆ 2021ರ ನ.10 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ ಹೈಕೋರ್ಟ್‌, ಮೂರು ತಿಂಗಳ ಒಳಗಾಗಿ ಹೊಸ ಸುತ್ತೋಲೆ ಹೊರಡಿಸಿ ನಿಯಮ ಅನುಷ್ಠಾನಗೊಳಿಸಬೇಕು. ಇದನ್ನು ನಿರ್ಲಕ್ಷಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು.

Percentage Politics: 'ಪರ್ಸೆಂಟೇಜ್ ಪಿತಾಮಹರೇ ಕಾಂಗ್ರೆಸ್‌ನವರು, ಅವರಿಗೇನ್ರಿ ನೈತಿಕತೆ ಇದೆ.'?

ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸುತ್ತೋಲೆ:
ಕೋರ್ಟ್‌ ಆದೇಶದ ಅನ್ವಯ ಸುತ್ತೋಲೆ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ಪ್ರತಿ ಇಲಾಖೆ, ನಿಗಮ, ಸಂಸ್ಥೆಗಳು ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಕಚೇರಿಗಳಲ್ಲೂ ನೌಕರರ ವೈಯಕ್ತಿಕ ನಗದನ್ನು ಗಮನಿಸಲು ‘ನಗದು ಘೋಷಣೆ ವಹಿ’ ನಿರ್ವಹಣೆ ಮಾಡಬೇಕು. ಹಾಜರಾತಿ ಪುಸ್ತಕದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಸಮಯದಲ್ಲೇ ಕಚೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯಲ್ಲಿ ತನ್ನ ಸಹಿಯೊಂದಿಗೆ ಘೋಷಿಸಬೇಕು ಎಂದು ತಿಳಿಸಿದ್ದಾರೆ.

ಇನ್ನು ನಗದು ಘೋಷಣೆ ವಹಿಯನ್ನು ಕಚೇರಿಯ ವೇಳೆಯ ಎಲ್ಲಾ ಸಮಯದಲ್ಲೂ ಯಾವುದೇ ಉನ್ನತ ಅಧಿಕಾರಿಗಳು ಮುಕ್ತವಾಗಿ ತಪಾಸಣೆ ನಡೆಸಬಹುದು. ಯಾವುದೇ ನೌಕರರು ನಗದು ಘೋಷಣೆ ವಹಿಯಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡು ಬಂದರೆ ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ. ಅಂತಹ ಹೆಚ್ಚುವರಿ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗುತ್ತದೆ.

ಈ ನಗದು ಘೋಷಣೆ ವಹಿಯು ಸಂಬಂಧಪಟ್ಟವಿಭಾಗ ಅಥವಾ ಶಾಖೆಯ ಬಿ-ದರ್ಜೆ ಅಧಿಕಾರಿಯ ವಶದಲ್ಲಿರಬೇಕು. ಆ ಅಧಿಕಾರಿಯು ನೌಕರರು ನಮೂದಿಸಿರುವ ವಿವರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?
ಶ್ರೀರಂಗಪಟ್ಟಣ ಪುರಸಭೆ ಕಿರಿಯ ಎಂಜಿನಿಯರ್‌ ಶಿವ ಎಂಬುವವರ ಮೇಲೆ 2014ರಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ನಗದು ಹಣ ವಶಪಡಿಸಿಕೊಂಡಿದ್ದರು. ಇದು ಲಂಚದ ಹಣ ಎಂದು ಚಾಜ್‌ರ್‍ ಶೀಟ್‌ ಸಲ್ಲಿಸಿದ್ದರು. ಆದರೆ, ಶಿವ ಅವರ ಪರ ವಕೀಲರು ಅದು ಶಿವ ಅವರ ವೈಯಕ್ತಿಕ ಹಣ ಎಂದು ವಾದಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಧೀಶರು ಇಲಾಖಾ ತನಿಖೆಗೆ ಆದೇಶ ಮಾಡಿದ್ದರು. ಶಿವ ಅವರು ಹೈಕೋರ್ಟ್‌ ಮೊರೆ ಹೋಗಿ ಇಲಾಖಾ ವಿಚಾರಣೆ ರದ್ದುಪಡಿಸುವಂತೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ‘ನಗದು ಘೋಷಣೆ ವಹಿ’ ನಿರ್ವಹಣೆಗೆ ಆದೇಶಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್