
ಬೆಂಗಳೂರು (ನ.07): ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸುವ ಕುರಿತ ವಿಚಾರಣೆಯನ್ನು ಮತ್ತೆ ನ.13ಕ್ಕೆ ಹೈಕೋರ್ಟ್ ಮುಂದೂಡಿದೆ. ಇಂದು ಶುಕ್ರವಾರ ನಡೆದ ವಿಚಾರಣೆಯಲ್ಲಿ ಪಥ ಸಂಚಲನಕ್ಕೆ ಅರ್ಜಿ ಹಾಕಿದ ಎಲ್ಲಾ 11 ಸಂಘಟನೆಗಳಿಗೂ ಪರಿಗಣಿಸಲು ಅಡ್ವೋಕೇಟ್ ಜನರಲ್ ವಾದಿಸಿದ್ದಾರೆ. ಅನುಮತಿ ಕೋರಿದ್ದ ಆರ್‌ಎಸ್‌ಎಸ್ ನ.13 ಅಥವಾ 16ಕ್ಕೆ ಪಥ ಸಂಚಲನ ಅನುಮತಿ ಕೋರಿತ್ತು. ಆದರೆ ನ.5ರ ಸಭೆಯ ಚರ್ಚೆ ಫಲಪ್ರದ ಆಗಿದೆ, ಷರತ್ತು ಇತ್ಯಾದಿಗಳ ಬಗ್ಗೆ ನಿರ್ಣಯ ಮಾಡೋದಿದೆ. ಹೀಗಾಗಿ ಇನ್ನೂ 1 ವಾರ ಅವಕಾಶವನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕೋರಿದ್ದರು.
ಇವರ ವಾದಕ್ಕೆ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಆಕ್ಷೇಪಿಸಿದರು. ವಾದ, ಪ್ರತಿವಾದ ಅಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂಜಿಎಸ್ ಕಮಲ ಅವರು ಸದರಿ ಪ್ರಕರಣದಲ್ಲಿ ವಿಚಾರಣೆ ನ.13ಕ್ಕೆ ಮುಂದೂಡಿ ಆದೇಶವನ್ನು ಹೊರಡಿಸಿದರು. ನೀವು ಎರಡು ದಿನಾಂಕ ಕೊಟ್ಟಿದ್ದೀರಿ. ನ.13 ಹಾಗೂ ನ.16, ಹೀಗಾಗಿ ನ.13ಕ್ಕೆ ಮತ್ತೆ ಸೇರೋಣ, ಅಲ್ಲಿನ ವಾದ ಆಲಿಸಿ ನಿರ್ಣಯ ಕೊಡುವೆ ಎಂದ ನ್ಯಾಯಮೂರ್ತಿ ಎಂಜಿಎಸ್ ಕಮಲ ತಿಳಿಸಿದರು. ಇನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನಿಂದ ಹಾಜರಾಗಿದ್ದರು.
ನ.13 ಅಥವಾ 16ರಂದು ಪಥಸಂಚಲನ ನಡೆಸಲು ಉದ್ದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಪಥಸಂಚಲನದಲ್ಲಿ ಚಿತ್ತಾಪುರ ತಾಲೂಕು ಆರ್‌ಎಸ್‌ಎಸ್ ಸ್ವಯಂ ಸೇವಕರು ಮಾತ್ರ ಭಾಗವಹಿಸುತ್ತಾರೆ. ನೆರೆಯ ತಾಲೂಕಿನವರು ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಪಥಸಂಚಲನದಲ್ಲಿ 600ರಿಂದ 850 ಸ್ವಯಂ ಸೇವಕರು ಮಾತ್ರ ಗಣವೇಷದಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ನಡೆಸುವ ನಾಲ್ಕು ಸಾಲಿನ ಬದಲು ಮೂರು ಸಾಲಿನಲ್ಲೇ ಮೂರು ಕಿ.ಮೀ. ಪಥಸಂಚಲನ ನಡೆಸಲಾಗುತ್ತದೆ. ಪಥ ಸಂಚಲ ಸುಮಾರು 37ರಿಂದ 45 ನಿಮಿಷದೊಳಗೆ ಪೂರ್ಣಗೊಳ್ಳಲಿದೆ. ಈ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ