
ಬೆಂಗಳೂರು: ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಹಾಗೂ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಚಾರಣವನ್ನು ಇಂದಿನಿಂದಲೇ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಚಾರಣಕ್ಕೆ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವ ಈಶ್ವರ ಖಂಡ್ರೆ ಲಿಖಿತ ಸೂಚನೆ ನೀಡಿದ್ದಾರೆ. ಸರಗೂರು ತಾಲೂಕು ಮೊಳೆಯೂರು ವಲಯದ ಹಳೆ ಹೆಗ್ಗೋಡಿಲು ಗ್ರಾಮದ ಬಳಿ ಇಂದು ಬೆಳಗ್ಗೆ ಚೌಡಯ್ಯ ನಾಯ್ಕ (35) ಎಂಬುವವರು ಹುಲಿ ದಾಳಿಯಿಂದ ಮೃತರಾಗಿದ್ದಾರೆ. ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ಮುಂದಿನ ಆದೇಶದವರೆಗೆ ಎರಡೂ ಕಡೆ ಸಫಾರಿ ಬಂದ್ ಮಾಡಲು ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನ ಗ್ರಾಮಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಅಕ್ಟೋಬರ್ 2 ರಂದು ಸಭೆ ನಡೆಸಿದಾ ಹುಲಿ ಸೆರೆಗೆ ಎಲ್ಲ ಸಾಧ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಈ ಹಿನ್ನೆಲೆ ಮುಂದಿನ ಆದೇಶದವರೆಗೆ ಇಂದಿನಿಂದಲೇ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲಾಗಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಯಿಂದ ಮೂರು ಅಮೂಲ್ಯ ಜೀವ ಹಾನಿ ಆಗಿರುವುದು ಅತೀವ ನೋವು ತಂದಿದೆ. ಹುಲಿ ದಾಳಿಯ ನಂತರ ದಿನಾಂಕ 27.10.2025ರಂದು ಬಂಡೀಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಹುಲಿ ಸೆರೆಗೆ ತುರ್ತು ಕ್ರಮ ಕೈಗೊಳ್ಳಲು ಮತ್ತು ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸುವಂತೆ ಸೂಚಿಸಿರುತ್ತೇನೆ. ಇದಾದ ಬಳಿಕ ದಿನಾಂಕ 02.11.2025ರಂದು ಚಾಮರಾಜನಗರದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ. ವೆಂಕಟೇಶ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ರೈತರು, ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಹುಲಿ ಸೆರೆಗೆ ಎಲ್ಲ ಸಾಧ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವುದರ ಜೊತೆಗೆ ಸಫಾರಿ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿರುತ್ತದೆ. ಇದಾದ ಬಳಿಕವೂ ಇಂದು ಮತ್ತೊಂದು ದಾರುಣ ಘಟನೆ ಸಂಭವಿಸಿರುವುದು ಆಘಾತ ತಂದಿದೆ.
ಇದನ್ನೂ ಓದಿ: ಕಬ್ಬಿಗೆ ₹3,500 ನೀಡಲು ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಲಿ: ಸಂಸದ ಬೊಮ್ಮಾಯಿ
ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ರೈತರು ಕಾಡಿನಲ್ಲಿ ನಡೆಯುವ ಸಫಾರಿಯ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ಹೊರ ಬರುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಅಧಿಕಾರಿಗಳು ಸಿಬ್ಬಂದಿಯ ಕೊರತೆ ಇದೆ ಎಂದು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಇಂದಿನಿಂದಲೇ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲು ಮತ್ತು ಮಾನವ. ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಟ್ರಕ್ಕಿಂಗ್ (ಚಾರಣ) ಸ್ಥಗಿತಗೊಳಿಸಲು ಹಾಗೂ ಬಂಡೀಪುರ, ನಾಗರಹೊಳೆ ಸಫಾರಿಯ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಮತ್ತು ವಾಹನ ಚಾಲಕರ ಸಹಿತ ಎಲ್ಲ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲು ಹಾಗೂ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪದೆ ಪದೇ ದಾಳಿ ಮಾಡುತ್ತಿರುವ ಹುಲಿಯನ್ನು ಹಿಡಿಯಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ