ಉನ್ನತ ವ್ಯಾಸಂಗ ಮುಂದುವರಿಸಿ ಉದ್ಯೋಗ ಹುಡುಕಿಕೊಳ್ಳುವವರೆಗೆ ಮಗು ಬೇಡ ಎಂದು ಪತ್ನಿಗೆ ಪತಿ ಸಲಹೆ ನೀಡುವುದು ಮಾನಸಿಕ ಕ್ರೌರ್ಯ ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು (ಆ.18): ಉನ್ನತ ವ್ಯಾಸಂಗ ಮುಂದುವರಿಸಿ ಉದ್ಯೋಗ ಹುಡುಕಿಕೊಳ್ಳುವವರೆಗೆ ಮಗು ಬೇಡ ಎಂದು ಪತ್ನಿಗೆ ಪತಿ ಸಲಹೆ ನೀಡುವುದು ಮಾನಸಿಕ ಕ್ರೌರ್ಯ ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಡಾ.ಶಶಿಧರ್ ಸುಬ್ಬಣ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಭಾಕರ್ ಶಾಸ್ತ್ರಿ ಅವರ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಉನ್ನತ ವ್ಯಾಸಂಗ ಮುಗಿಸಿ ಉದ್ಯೋಗ ಹುಡುಕಿಕೊಳ್ಳುವವರೆಗೆ ಮಗು ಮಾಡಿಕೊಳ್ಳುವುದು ಬೇಡ ಮತ್ತು ತಮಿಳು ಭಾಷೆ ಕಲಿಯುವಂತೆ ಸಲಹೆ ನೀಡಿದ ಕಾರಣಕ್ಕೆ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಪ್ರಕರಣದಡಿ ಅರ್ಜಿದಾರರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದು ಮಾಡಿ ಆದೇಶಿಸಿದೆ.
ಪಿಸ್ತೂಲ್ ಇಲ್ಲದೆ ಬರೀ ಗುಂಡು ಇಟ್ಟುಕೊಳ್ಳುವುದು ತಪ್ಪಲ್ಲ: ಹೈಕೋರ್ಟ್
ವಿವಾಹವಾದ ನಂತರ ಮೊದಲ ರಾತ್ರಿಯಲ್ಲೇ ಉನ್ನತ ವ್ಯಾಸಂಗ ಮುಗಿಸು, ಅಲ್ಲಿಯವರೆಗೆ ಮೂರು ವರ್ಷ ಮಗು ಮಾಡಿಕೊಳ್ಳುವುದು ಬೇಡ. ತಮಿಳು ಭಾಷೆ ಕಲಿ ಎಂದು ಪತಿ ತನಗೆ ಒತ್ತಾಯ ಮಾಡುತ್ತಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಮದುವೆಗೆ ಮುನ್ನ ನಡೆದ ಮಾತುಕತೆಯಲ್ಲಿ ವಿವಾಹದ ನಂತರ ಶಿಕ್ಷಣ ಮುಂದುವರಿಸಿ ಸೂಕ್ತ ಉದ್ಯೋಗ ಹುಡುಕುವಂತೆ ಶಶಿಧರ್ ಅವರು ಹೇಳಿದ್ದನ್ನು ಪತ್ನಿ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಇದು ಕೌರ್ಯವಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪತಿ-ಪತ್ನಿ ಚೆನ್ನಾಗಿ ಓದಿಕೊಂಡವರಾಗಿದ್ದಾರೆ. ಮದುವೆಗೆ ಮುನ್ನವೇ ಭವಿಷ್ಯದ ಬಗ್ಗೆ ಸಮಾಲೋಚನೆ ಮಾಡಿದ್ದಾರೆ. ಇದರಿಂದ ಶಿಕ್ಷಣ ಮುಂದುವರಿಸಿ ಉದ್ಯೋಗ ಹುಡುಕಿಕೊಳ್ಳುವಂತೆ ಪತಿ ಏಕಾಏಕಿ ಬಲವಂತವಾಗಿ ಮಾಡಿಲ್ಲ. ಇನ್ನೂ ಕುಟುಂಬದಲ್ಲಿ ಪರಿಣಾಮಕಾರಿ ಸಂವಹನಕ್ಕೆ ಎಲ್ಲರಿಗೂ ತಿಳಿದಿರುವ ತಮಿಳು ಭಾಷೆ ಕಲಿ ಎಂದು ಹೇಳಿರುವುದರಲ್ಲಿ ತಪ್ಪೇ ಇಲ್ಲ. ಕುಟುಂಬದ ದೃಷ್ಟಿಯಿಂದ ಯೋಜನೆಯನ್ನು ಹಾಕಿಕೊಂಡು ಮಗು ಯಾವಾಗ ಮಾಡಿಕೊಳ್ಳಬೇಕೆಂದು ಪತಿ ಹೇಳಿರುವುದು ಕಿರುಕುಳ ಅಥವಾ ಮಾನಸಿಕ ಕ್ರೌರ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ.
ಎಸಿಬಿ ರದ್ದು ಮಾಡಿದ ಕೋರ್ಟ್, ಸಿದ್ಧರಾಮಯ್ಯ ಜನರ ಕ್ಷಮೆ ಕೇಳಲಿ ಎಂದ ರಾಜೀವ್ ಚಂದ್ರಶೇಖರ್!
ಪ್ರಕರಣದ ಹಿನ್ನೆಲೆ: ಮದುವೆಯ ನಂತರ ಪತಿ-ಪತ್ನಿ ಅಮೆರಿಕಾದಲ್ಲಿ ನೆಲೆಸಿದ್ದರು. ಈ ವೇಳೆ ವಿದ್ಯಾಭ್ಯಾಸ ಮುಂದುವರಿಸು ಮತ್ತು ಸೂಕ್ತ ಉದ್ಯೋಗ ಹುಡುಕಿಕೋ. ಇದರಿಂದ ಕುಟುಂಬದ ನಿರ್ವಹಣೆಗೆ ಸಹಾಯಕವಾಗಲಿದೆ ಎಂದು ಪತಿ ನನಗೆ ಬಲವಂತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ದೂರು ನೀಡಿದ್ದರು. ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಆರೋಪದಡಿ ಆರ್ಜಿದಾರರಾದ ಶಶಿಧರ್ ಮತ್ತು ಅವರ ತಾಯಿಗೆ ಶಿಕ್ಷೆ ವಿಧಿಸಿ 2016ರ ಡಿ.1ರಂದು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.