ಪತ್ನಿಯ ನಡತೆಯ ಕುರಿತು ಸಂಶಯ ಪಟ್ಟು ತನ್ನ ಮಗುವಿಗೆ ಎರಡನೇ ಬಾರಿ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು (ಡಿ.11): ಪತ್ನಿಯ ನಡತೆಯ ಕುರಿತು ಸಂಶಯ ಪಟ್ಟು ತನ್ನ ಮಗುವಿಗೆ ಎರಡನೇ ಬಾರಿ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣದಲ್ಲಿ ದಂಪತಿ ಈಗಾಗಲೇ ವಿಚ್ಛೇದನ ಪ್ರಕ್ರಿಯೆಯಲ್ಲಿರುವುದರಿಂದ ಪತ್ನಿಯ ವ್ಯಭಿಚಾರವನ್ನು ಹೇಗಾದರೂ ಸಾಬೀತು ಪಡಿಸಿ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಬಾಧ್ಯತೆಯಿಂದ ಪತಿ ನುಣುಚಿಕೊಳ್ಳುವ ತಂತ್ರವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ಡಿಎನ್‌ಎ ಮಾದರಿ ಪರೀಕ್ಷೆಗೊಳಪಡಿಸಬೇಕಾಗಿತ್ತು. ಆದರೆ, ಅವರ ಅಧೀನದ ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ. ಹೀಗಾಗಿ ಮತ್ತೊಂದು ಬಾರಿ ಡಿಎನ್‌ಎ ಪರೀಕ್ಷೆಗೊಳಪಡಿಸಬೇಕು. ಡಿಎನ್‌ಎ ಮಾದರಿಗಳನ್ನು ಎರಡನೇ ಬಾರಿಗೆ ಎಫ್‌ಎಸ್‌ಎಲ… ಪರೀಕ್ಷೆಗಾಗಿ ಹೈದ್ರಾಬಾದ್‌ಗೆ ರವಾನಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಮನವಿಯನ್ನು ತಿರಸ್ಕರಿ ಸಿಅರ್ಜಿಯನ್ನು ವಜಾಗೊಳಿಸಿದೆ.
ಆ್ಯಪ್ ನೆಪ ಹೇಳಿ ರಾಗಿ ಖರೀದಿಸದ ಸರ್ಕಾರ: ಚಾಟಿ ಬೀಸಿದ ಹೈಕೋರ್ಟ್
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅರ್ಹ ವೈದ್ಯರಿಂದ ಪರೀಕ್ಷೆಗೊಳಪಡಿಸಿ, ಅದರ ನಿರ್ದೇಶಕರು ಅನುಮೋದಿಸಿರುತ್ತಾರೆ. ಹೀಗಾಗಿ ಎರಡನೇ ಬಾರಿಗೆ ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕಾದ ಅಗತ್ಯ ಉದ್ಭವಿಸುವುದಿಲ್ಲ. ಅಲ್ಲದೆ, ಸರ್ಕಾರಿ ಆಸ್ಪತ್ರೆ ಅಥವಾ ಪ್ರಯೋಗಾಲಯದಿಂದ ಬರುವ ವರದಿಗಳು ಫಲಿತಾಂಶವನ್ನು ಅನುಮಾನದಿಂದ ನೋಡುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಫಲಿತಾಂಶ ಅರ್ಜಿದಾರರ ವಿರುದ್ಧವಿದೆ ಎಂಬ ಕಾರಣಕ್ಕೆ ಅವರ ಆರೋಪಗಳನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಜತೆಗೆ, ಈ ಅರ್ಜಿಯನ್ನು ಪುರಸ್ಕರಿಸಿದಲ್ಲಿ, ತಮ್ಮ ಪರವಾಗಿ ಫಲಿತಾಂಶ ಬರುವರೆಗೂ ಪತಿ ಮತ್ತೆ ಮತ್ತೆ ಅರ್ಜಿ ಸಲ್ಲಿಸುವ ಸಾಧ್ಯತೆಯಿರಲಿದೆ. ಹೇಗಾದರೂ ಪತ್ನಿಯ ವಿರುದ್ಧ ಸಂಶಯವನ್ನು ಸಾಬೀತು ಪಡಿಸಲು ಮತ್ತು ಹೆಂಡತಿ ಮತ್ತು ಮಗುವನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಬಯಸುತ್ತಿದ್ದು, ಅರ್ಜಿಯನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರದ ಕೆಂಗೇರಿ ಹೋಬಳಿಯ ಅಗರ ಗ್ರಾಮದ ನಿವಾಸಿಯಾಗಿರುವ ಅರ್ಜಿದಾರರು 2010ರ ಮೇ ತಿಂಗಳಲ್ಲಿ ವಿವಾಹವಾಗಿದ್ದು, 2011ರ ಸೆಪ್ಟಂಬರ್ ತಿಂಗಳಿನಲ್ಲಿ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ನಡುವೆ ಉಂಟಾದ ಕೌಟುಂಬಿಕ ಕಾರಣದಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಮಗುವಿನ ಪಿತೃತ್ವ ಋುಜುವಾತು ಪಡಿಸಲು ಡಿಎನ್‌ಎ ಪರೀಕ್ಷೆ ನಡೆಸುವುದಕ್ಕಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದರಂತೆ ಪತ್ನಿಯ ಒಪ್ಪಿಗೆಯ ಮೇರೆಗೆ ಅರ್ಜಿಯನ್ನು ಅಂಗೀಕರಿಸಿದ್ದ ನ್ಯಾಯಾಲಯ ರಕ್ತದ ಮಾದರಿಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು.
ಲಂಚ ಕೇಳಿದ್ರೆ ತಪ್ಪಲ್ಲ, ಅದನ್ನು ಸ್ವೀಕರಿಸಿದರೆ ತಪ್ಪು: ಹೈಕೋರ್ಟ್
ಈ ಪರೀಕ್ಷೆಯಲ್ಲಿ ಅರ್ಜಿದಾರರು ಮಗುವಿನ ತಂದೆ ಎಂಬುದು ಸಾಬೀತಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅರ್ಜಿದಾರರು, ಕೋರ್ಟ್ ನಿರ್ದೇಶನದ ಮೇರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ಡಿಎನ್‌ಎ ಮಾದರಿ ಪರೀಕ್ಷೆಗೊಳಪಡಿಸಬೇಕಾಗಿತ್ತು. ಆದರೆ, ಅವರ ಅಧೀನದ ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ. ಹೀಗಾಗಿ ಮತ್ತೊಂದು ಬಾರಿ ಡಿಎನ್‌ಎ ಪರೀಕ್ಷೆಗೊಳಪಡಿಸಬೇಕು ಎಂದು ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್ ಮೆಟ್ಟಿಲೇರಿದ್ದರು.