Police Medal: ಕರ್ನಾಟಕ ಪೊಲೀಸ್ ದೇಶದ ನಂಬರ್ 1 ಪೊಲೀಸ್ ಪಡೆಯಾಗಿದೆ: ಸಿಎಂ ಬೊಮ್ಮಾಯಿ‌

By Sathish Kumar KHFirst Published Dec 11, 2022, 12:16 PM IST
Highlights

ಪೊಲೀಸ್ ಸೇವೆ ಒಂದು ವಿಶಿಷ್ಟವಾದ ಸೇವೆಯಾಗಿದೆ. ಕುಟುಂಬದ ಬಹುತೇಕ ಕಾರ್ಯಕ್ರಮಗಳಿಂದ ದೂರವಿದ್ದು, ಒತ್ತಡದಿಂದ ಕೆಲಸ ಮಾಡುವ ಹುದ್ದೆಯಾಗಿದೆ. ನಮ್ಮ ರಾಜ್ಯದ ಕರ್ನಾಟಕ ಪೊಲೀಸ್ ಪಡೆ ದೇಶದ ನಂಬರ್ 1 ಪೊಲೀಸ್ ಪಡೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಡಿ.11) : ಪೊಲೀಸ್ ಸೇವೆ ಒಂದು ವಿಶಿಷ್ಟವಾದ ಸೇವೆಯಾಗಿದೆ. ಇಡೀ ಬದಕನ್ನು ಬದಲಾವಣೆ ಮಾಡುವ ಸೇವೆಯಾಗಿದೆ. ನಮ್ಮ ಕರ್ನಾಟಕ ಪೊಲೀಸ್ ದೇಶದ ನಂಬರ್ 1 ಪೊಲೀಸ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿರುವ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ ಸಮಾರಂಭ - 2022ರಲ್ಲಿ ಪಾಲ್ಗೊಂಡು ಮಾತನಾಡಿದರು. ಪೊಲೀಸರು ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಿಲ್ಲ. ಪ್ರತಿನಿತ್ಯ ಕುಟುಂಬ ಸೇರಿ ಜೀವನದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹತ್ತು ಹಲವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರಿ. ಜೊತೆಗೆ ಸಮಾಜದ ಒತ್ತಡವೂ ಪೊಲೀಸರ ಮೇಲಿದೆ. ನಮ್ಮ ರಾಜ್ಯದ ಪೊಲೀಸ್ ಪಡೆ ನಂಬರ್ 1 ಸ್ಥಾನದಲ್ಲಿದ್ದು, ಎಲ್ಲ ಪೊಲೀದರು ಕೂಡ ಪದಕಕ್ಕೆ ಅರ್ಹಹರಿದ್ದೀರಿ ಎಂದು ಹೇಳಿದರು.

Chitradurga News: ಹೊಸದುರ್ಗದಲ್ಲಿ ಪೊಲೀಸ್‌ ಠಾಣೆಗೆ ವೀರಶೈವರ ಮುತ್ತಿಗೆ

ತಂತ್ರಜ್ಞಾನ ಹೆಚ್ಚಳಕ್ಕೆ ಸಿದ್ಧತೆ ಮಾಡಿಕೊಳ್ಳಿ: ರಾಜ್ಯ ಮತ್ತು ದೇಶದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಈಗಿರುವ ತಂತ್ರಜ್ಞಾನದ ಜೊತೆಗೆ, ಹೆಚ್ಚಿನ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಅದಕ್ಕೆ ಬೇಕಿರುವ ಎಲ್ಲಾ ನೆರವನ್ನು ರಾಜ್ಯ ಸರ್ಕಾರ ನೀಡಲಿದೆ. ಸೈಬರ್ ಕ್ರೈಂ ಗಳನ್ನ ಎದುರಿಸಲು ಅಗತಯವಿರುವ ಎಲ್ಲ ತಂತ್ರಜ್ಞಾನ ಅಳವಡಿಸಿಕೊಂಡು ಇದನ್ನು ನಿಯಂತ್ರಣ ಮಾಡಬೇಕು. ಸಾರ್ವಜನಿಕರು ಪ್ರತಿನಿತ್ಯ ಆನ್‌ಲೈನ್‌ ಮೂಲಕ ಮೋಸ ಹೋಗುವುದನ್ನು ತಪ್ಪಿಸಬೇಕು. ಎಲ್ಲ ಸೈಬರ್‌ ಕ್ರೈಂ ಅಪರಾಧಿಗಳ ಪತ್ತೆಹಚ್ಚಬೇಕು. ಇದಕ್ಕಾಗಿ ಎಲ್ಲ ಪೊಲೀಸರಿಗೂ ತಂತ್ರಜ್ಞಾನ ಟ್ರೈನಿಂಗ್ ನೀಡಬೇಕು ಎಂದು ಸೂಚನೆ ನೀಡಿದರು.

ವಲಯಕ್ಕೆರಡು ಫ್ಲೋರೆನ್ಸಿಕ್‌ ಲ್ಯಾಬ್ ಆರಂಭಿಸಿ: ರಾಜ್ಯದಲ್ಲಿ ಫ್ಳೋರೆನ್ಸಿಕ್ ಲ್ಯಾಬ್ ಗಳ ಕೊರತೆಯಿದ್ದು, ಅವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಕನಿಷ್ಠ ಒಂದು ಪ್ರಾದೇಶಿಕ ವಿಭಾಗಕ್ಕೆ (ರೀಜನ್)ಗೆ ಎರಡು ಫ್ಲೋರೆನ್ಸಿಕ್ ಲ್ಯಾಬ್ ಗಳನ್ನು ತೆರಯಬೇಕು. ಆಗ ಮಾತ್ರ ಅಪಾರಧ ಕೃತ್ಯಗಳನ್ನ ತಡೆಯಲು ಸಾಧ್ಯವಾಗಲಿದೆ. ನೀವು ಇದನ್ನ ಗಂಭೀರವಾಗಿ ಪರಿಗಣಿಸಿ ಫ್ಲೋರೆನ್ಸಿಕ್ ಲ್ಯಾಬ್ ತೆರೆಯಲು ಸಿದ್ದತೆ ಮಾಡಿಕೊಳ್ಳಿ. ಇದಕ್ಕೆ ಅನುದಾನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದರು.

ಬೆಂಗಳೂರು ವಾಹನ ಸವಾರರೇ ಎಚ್ಚರ: ಇನ್ಮುಂದೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದರೆ ದಂಡ ಫಿಕ್ಸ್

ಪೊಲೀಸ್‌ ನೇಮಕಾತಿ ಅಕ್ರಮ ತಡೆಗೆ ಕಾನೂನು ಬದಲಾವಣೆ: ರಾಜ್ಯದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಆಗುತ್ತಿರುವ ಅಪರಾಧವನ್ನು ಸಂಪೂರ್ಣವನ್ನು ನಿಯಂತ್ರಣ ಮಾಡಲು ಇನ್ನಷ್ಟು ಕಠಿಣ ಕ್ರಮವಾಗಬೇಕು. ಅದಕ್ಕೆ ಕಾನೂನು ಬದಲಾವಣೆ ಬೇಕಾದರೂ ಮಾಡಿಕೊಳ್ಳಿ ಅಥವಾ ತಂತ್ರಜ್ಞಾನವನ್ನಾದರೂ ಬದಲಾವಣೆ ಮಾಡಿಕೊಳ್ಳಿ ಇದಕ್ಕೆ ನನ್ನ ಸಮ್ಮತಿಯಿದೆ. ಒಟ್ಟಾರೆ, ಪೊಲೀಸ್‌ ನೇಮಕಾತಿಯ ಹಗರಣ ಸಂಪೂರ್ಣ ನಿಲ್ಲಲೇಬೇಕು. ಪೊಲೀಸ್ ನೇಮಕಾತಿಯಲ್ಲಿಯೇ ಅನ್ಯಾಯವಾದರೆ, ಒಳ್ಳೆಯ ಪೊಲೀಸ್‌ ಪಡೆಯನ್ನು ನಾವು ಹೇಗೆ ನಿರ್ಮಾಣ ಮಾಡಲಿ ಸಾಧ್ಯವಾಗುತ್ತದೆ. ನಮ್ಮ ಇಲಾಖೆಯಲ್ಲಿಯೇ ನೇಮಕಾತಿ ಸೆಲ್‌ ಇಟ್ಟುಕೊಂಡು, ಬೇರೆ ಇಲಾಖೆಯರ ಅಪರಾಧವನ್ನು ಪತ್ತೆ ಮಾಡಲು ಹೇಗೆ ಸಾಧ್ಯ. ನಮ್ಮ ಪೊಲೀಸ್‌ ಇಲಾಖೆಯಲ್ಲಿ ನೇಮಕಾತಿ ಅಕ್ರಮ ನಡೆದಲ್ಲಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಧ್ಯಮ ಹಂತದ ಪೊಲೀಸ್‌ ಟ್ರೈನಿಂಗ್‌ ಉತ್ತಮವಾಗಿಲ್ಲ: ರಾಜ್ಯದಲ್ಲಿ ಕೆಳ ಹಂತದಲ್ಲಿ ನೇಮಕವಾಗುವ ಪೊಲೀಸ್‌ ಕಾನ್ಸ್‌ಸ್ಟೇಬಲ್, ಡಿಎಆರ್ ಮತ್ತು ರಿಸರ್ವ್ ಪೊಲೀಸ್‌ ನೇಮಕಾತಿ ಮತ್ತು ಅವರ ತರಬೇತಿ ಕಠಿಣ ಮತ್ತು ಉತ್ತಮವಾಗಿದೆ. ಇನ್ನು ಕೇಂದ್ರ ಸರ್ಕಾರದ ನೇಮಕಾತಿಯಿಂದ ಆಯ್ಕೆಯಾಗಿ ಬರುವ ಐಪಿಎಸ್‌ ಅಧಿಕಾರಿಗಳ ತರಬೇತಿಯೂ ಅತ್ಯುತ್ತಮವಾಗಿದೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ನಡೆಯುವ ಪೊಲೀಸರ ನೇಮಕಾತಿ ಮತ್ತು ತರಬೇತಿ (ಪಿಎಸ್ಐ) ಹಂತವೇ ಆಶಿಸ್ತಿನಿಂದ ಕೂಡಿದೆ. ಈ ಮಿಡಲ್‌ ಹಂತದಲ್ಲಿ  ಟ್ರೈನಿಂಗ್‌ ಇನ್ನಷ್ಟು ಶಿಸ್ತಿನಿಂದ ನಡೆಯಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪದಕ ಪ್ರದಾನ ಮಾಡಿದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ,  ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್ ಉಪಸ್ಥಿತರಿದ್ದರು.

click me!