ಮಗು ಹುಟ್ಟುವ ಮುನ್ನವೇ ದತ್ತು ಸ್ವೀಕಾರ ಸಲ್ಲ: ಹೈಕೋರ್ಟ್‌

By Govindaraj SFirst Published Dec 11, 2022, 2:34 PM IST
Highlights

ಮಗು ಜನಿಸುವ ಮೊದಲೇ ಅದನ್ನು ದತ್ತು ನೀಡುವುದು ಮಗುವಿನ ಹಕ್ಕು ಉಲ್ಲಂಘನೆಯಾಗುತ್ತದೆ, ಗರ್ಭದಲ್ಲಿರುವ ಮಗುವಿಗೂ ಮೂಲಭೂತ ಹಕ್ಕುಗಳು ಅನ್ವಯಿಸುತ್ತದೆ ಎಂದು ಹೇಳಿರುವ ಹೈಕೋರ್ಟ್‌, ಜನನ ಪೂರ್ವ ಒಪ್ಪಂದಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. 

ಬೆಂಗಳೂರು (ಡಿ.11): ಮಗು ಜನಿಸುವ ಮೊದಲೇ ಅದನ್ನು ದತ್ತು ನೀಡುವುದು ಮಗುವಿನ ಹಕ್ಕು ಉಲ್ಲಂಘನೆಯಾಗುತ್ತದೆ, ಗರ್ಭದಲ್ಲಿರುವ ಮಗುವಿಗೂ ಮೂಲಭೂತ ಹಕ್ಕುಗಳು ಅನ್ವಯಿಸುತ್ತದೆ ಎಂದು ಹೇಳಿರುವ ಹೈಕೋರ್ಟ್‌, ಜನನ ಪೂರ್ವ ಒಪ್ಪಂದಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಮಾರು 2.9 ವರ್ಷದ ಹೆಣ್ಣು ಮಗುವಿನ ಪೋಷಣೆಯ ಹಕ್ಕು ನೀಡುವಂತೆ ಕೋರಿ ದತ್ತು ಪಡೆದ ಪೋಷಕರು(ಮುಸ್ಲಿಂ) ಮತ್ತು ಮಗುವಿನ ತಂದೆ ತಾಯಿ(ಹಿಂದೂ) ಜಂಟಿಯಾಗಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿತ್ತು. 

ಇದನ್ನು ಪ್ರಶ್ನಿಸಿ ಇಬ್ಬರೂ ಪೋಷಕರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಹೇಮಲೇಖ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ, ಅಧೀನ ನ್ಯಾಯಾಲಯ ಹೊರಡಿಸಿದ ಅದೇಶವನ್ನು ಎತ್ತಿಹಿಡಿದಿದೆ. ಗರ್ಭದಲ್ಲಿರುವ ಮಗುವಿಗೆ ಅದರದೇ ಆದ ಜೀವ ಮತ್ತು ಜೀವನವಿದೆ, ಅದರದ್ದೇ ಆದ ಹಕ್ಕಿದೆ ಎಂಬುದನ್ನು ಕಾನೂನು ಇದನ್ನು ಮಾನ್ಯ ಮಾಡಿದೆ. ಭ್ರೂಣವು ಮಗುವಾಗಿ ಪರಿವರ್ತನೆ ಆಗುತ್ತಿದ್ದಂತೆ ಜೀವಾಂಕುರ ಆಗಿರುತ್ತದೆ. 

ಆ್ಯಪ್‌ ನೆಪ ಹೇಳಿ ರಾಗಿ ಖರೀದಿಸದ ಸರ್ಕಾರ: ಚಾಟಿ ಬೀಸಿದ ಹೈಕೋರ್ಟ್‌

ಇದನ್ನು ಸಹಜ ವ್ಯಕ್ತಿ ಎಂದು ಪರಿಗಣಿಸಲು ಸಾಧ್ಯವಿರದಿದ್ದರೂ ಸಂವಿಧಾನದ 21ನೇ ವಿಧಿ (ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆ)ಅಡಿ ವ್ಯಕ್ತಿ ಎಂದು ಖಚಿತವಾಗಿ ಪರಿಗಣಿಸಬಹುದು. ಆದ್ದರಿಂದ ಜನಿಸಿದ ಮಗು ಮತ್ತು ಜನಿಸದ ಮಗುವನ್ನು ಭಿನ್ನವಾಗಿ ಕಾಣಲು ಕಾರಣವಿಲ್ಲ. ಮಗುವಿಗೆ ಘನತೆ ಮತ್ತು ಗೌರವದಿಂದ ಬದುಕುವ ಎಲ್ಲ ಹಕ್ಕಿದೆ. ಈ ಪ್ರಕರಣದಲ್ಲಿ ತಂದೆ, ತಾಯಿ ಮಗುವಿನ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಮೊಹಮ್ಮದೀಯ ಕಾನೂನಿನ ತತ್ವಗಳ ಅಡಿಯಲ್ಲಿ ಈ ರೀತಿಯ ಒಪ್ಪಂದಕ್ಕೆ ಅವಕಾಶವಿಲ್ಲ. ಮಗುವಿನ ಜೈವಿಕ ತಂದೆ ತಾಯಿ ಹಿಂದೂ ಸಮುದಾಯಕ್ಕೆ ಸೇರಿದವರು. 

ಮಗುವನ್ನು ಮುಸ್ಲಿಂ ಸಮುದಾಯದ ದಂಪತಿಗೆ ದತ್ತು ನೀಡಲಾಗಿದೆ. ಮೊಹಮ್ಮದೀಯ ಕಾನೂನು ದತ್ತನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ, ಮಗುವನ್ನು ಅಕ್ರಮವಾಗಿ ಹಣಕ್ಕಾಗಿ ಹಸ್ತಾಂತರ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ದತ್ತು ನೀಡಿರುವ ಮತ್ತು ದತ್ತು ಸ್ವೀಕರಿಸಿರುವ ಆರೋಪಿಗಳ (ಅರ್ಜಿದಾರರು) ವಿರುದ್ಧ ಉಡುಪಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಡಿಸಿಪಿಯು) ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಈ ದೂರಿನ ವಿಚಾರಣೆ ಕಾರ್ಕಳದ ಪ್ರಧಾನ ಸಿವಿಲ್‌ ಜಡ್ಜ್‌ ಮತ್ತು ನ್ಯಾಯಿಕ ಮ್ಯಾಜಿಸ್ಪ್ರೇಟ್‌ ಮುಂದೆ ನಡೆಯುತ್ತಿದ್ದು ಇದರಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಪ್ರಕಾರ ಪಾಲಕರು ಆರ್ಥಿಕವಾಗಿ ದುರ್ಬಲರಾಗಿದ್ದರೆ, ಆ ಸಂದರ್ಭದಲ್ಲಿ ಮಗುವಿನ ಪೋಷಣೆಯ ಜವಾಬ್ದಾರಿಯನ್ನು ಸರ್ಕಾರಕ್ಕೆ ನೀಡಲು ಅವಕಾಶಗಳಿವೆ. ಒಂದು ವೇಳೆ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಿಗೆ ಮಗುವನ್ನು ಕಳುಹಿಸಿಕೊಡಬಹುದಿತ್ತು. ಸರ್ಕಾರವು ಅನೇಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದ್ದರಿಂದ ಬಡತನದ ಕಾರಣಕ್ಕೆ ಮಗುವನ್ನು ದತ್ತು ನೀಡಲಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಮುಂದೆ ಮಗುವಿನ ಜೈವಿಕ ತಂದೆ, ತಾಯಿ ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗುವ ಇಚ್ಛೆವ್ಯಕ್ತಪಡಿದ್ದಾರೆ. ಒಂದು ವೇಳೆ ಅವರು ಈ ಹೇಳಿಕೆಗೆ ಬದ್ಧರಾಗಿದ್ದರೆ ಅಂತಹ ಮನವಿಯನ್ನು ಪರಿಗಣಿಸಿ ಕಾನೂನಿನ ಪ್ರಕಾರ ಮಕ್ಕಳ ಕಲ್ಯಾಣ ಸಮಿತಿ ಕ್ರಮ ಕೈಗೊಳ್ಳಬಹುದಾಗಿದೆ. ಜತೆಗೆ, ಮಗುವನ್ನು ಬೇರೆಯವರಿಗೆ ಮಾರಾಟ ಮಾಡದಂತೆ ನೋಡಿಕೊಳ್ಳಲು ಅಧಿಕಾರಿಗಳು ದಂಪತಿಯ ಚಟುವಟಿಕೆಗಳನ್ನು ಪರಿಶೀಲಿಸುತ್ತಿರಬೇಕು ಎಂದು ನ್ಯಾಯಪೀಠ ತಿಳಿಸಿದೆ.

Bengaluru: ಚಿಲುಮೆ ಕೇಸಲ್ಲಿ ಅಮಾನತು ಪ್ರಶ್ನಿಸಿ ಹೈಕೋರ್ಟ್‌ಗೆ ಮಾಜಿ ಡೀಸಿ ಅರ್ಜಿ

ಪ್ರಕರಣದ ಹಿನ್ನೆಲೆ: ಮಗುವಿನ ಪೋಷಕರು 2020ರ ಮಾರ್ಟ್‌ 21 ರಂದು ದತ್ತು ಸ್ವೀಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದಾದ ಐದು ದಿನಗಳ ಬಳಿಕ ಅಂದರೆ 2020ರ ಮಾರ್ಟ್‌ 26 ರಂದು ಮಗು ಜನಿಸಿತ್ತು. ಈ ಸಂಬಂಧ ಉಡುಪಿ ಜಿಲ್ಲೆಯ ಡಿಸಿಪಿಯು 2021 ರಲ್ಲಿ ದೂರು ದಾಖಲಿಸಿಕೊಂಡಿತ್ತು. ಅಲ್ಲದೆ, ಮಗುವನ್ನು ವಶಕ್ಕೆ ಪಡೆದು ಮಕ್ಕಳ ಆರೈಕೆ ಘಟಕದ ಸುಪರ್ದಿಗೆ ನೀಡಲಾಗಿತ್ತು. ಈ ನಡುವೆ ದತ್ತು ಪಡೆದ ಪೋಷಕರು ಮಗುವಿನ ಪಾಲನೆಗಾಗಿ ಮಗುವಿನ ಪಾಲಕರು ಎಂದು ಘೋಷಿಸಲು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಗುವಿನ ಜೈವಿಕ ತಂದೆ ಹಾಗೂ ತಾಯಿ ಬೆಂಬಲಿಸಿದ್ದರು. ಆದರೆ, ಜಿಲ್ಲಾ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.

click me!