IAS vs IPS: ಡಿ.ರೂಪಾ, ರೋಹಿಣಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ

By Kannadaprabha News  |  First Published Feb 25, 2023, 6:42 AM IST

ಹಿರಿಯ ಮಹಿಳಾ ಅಧಿಕಾರಿಗಳ ಕಿತ್ತಾಟ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಇಲಾಖಾ ವಿಚಾರಣೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. 


ಬೆಂಗಳೂರು (ಫೆ.25): ಹಿರಿಯ ಮಹಿಳಾ ಅಧಿಕಾರಿಗಳ ಕಿತ್ತಾಟ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಇಲಾಖಾ ವಿಚಾರಣೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಅವರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಫೋಟೋಗಳು ಸಿವಿಲ್‌ ಸೇವಾ ನಿಯಮಾವಳಿಯ ಉಲ್ಲಂಘನೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಇಲಾಖಾ ವಿಚಾರಣೆಗೆ ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ಮಹಿಳಾ ಅಧಿಕಾರಿಗಳ ಕಿತ್ತಾಟದಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಇಬ್ಬರು ಅಧಿಕಾರಿಗಳ ಆರೋಪ-ಪ್ರತ್ಯಾರೋಪ ಸಾರ್ವಜನಿಕ ಚರ್ಚೆಗೊಳಗಾಗಿದೆ. ಅಲ್ಲದೇ, ತೀವ್ರ ಟೀಕೆಗೂ ಗುರಿಯಾಗಿದೆ. ಇಬ್ಬರ ಕಿತ್ತಾಟ ಸರ್ಕಾರವು ಮುಜುಗರಕ್ಕೊಳಗಾಗುವಂತೆ ಮಾಡಿದೆ. ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದರ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳು ವೈರಲ್‌ ಆಗಿವೆ. ಇದು ಸರ್ಕಾರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

Tap to resize

Latest Videos

ರೋಹಿಣಿ ವರ್ಸಸ್‌ ರೂಪಾಗೆ ಕೋರ್ಟ್‌ ಬ್ರೇಕ್‌: ಆಕ್ಷೇಪಾರ್ಹ, ಮಾನಹಾನಿ ಹೇಳಿಕೆ ನೀಡದಂತೆ ಇಬ್ಬರಿಗೂ ತಾಕೀತು

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮುಖ್ಯಕಾರ್ಯದರ್ಶಿಗಳು ವಿಚಾರಣೆಗೆ ಆದೇಶ ನೀಡಿದ್ದಾರೆ ಎಂದು ಹೇಳಲಾಗಿದೆ. ಡಿ.ರೂಪಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋಗಳ ಕುರಿತು ವಿಚಾರಣೆ ನಡೆಸಿದರೆ, ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಬಾಹಿರವಾಗಿ ಈಜುಕೊಳ ನಿರ್ಮಾಣ ಆರೋಪ, ಪಾರಂಪರಿಕ ಕಟ್ಟಡ ನಿಯಮಾವಳಿ ಉಲ್ಲಂಘನೆ, ಬ್ಯಾಗ್‌ ಖರೀದಿ ಪ್ರಕರಣದ ಬಗ್ಗೆಯೂ ಇಲಾಖಾ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.

ರೂಪಾ ವಿರುದ್ಧ ರೋಹಿಣಿ ಕೋರ್ಟ್‌ಗೆ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಅವರ ಜಟಾಪಟಿ ಈಗ ಕೋರ್ಟ್‌ ಮೆಟ್ಟಿಲೇರಿದ್ದು, ತಮ್ಮ ವಿರುದ್ಧ ಮಾನಹಾನಿಕಾರ ಸುದ್ದಿ ಪ್ರಸಾರ ಮಾಡದಂತೆ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಹಾಗೂ ಮಾಧ್ಯಮಗಳ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸುವಂತೆ ಕೋರಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಇದಕ್ಕೂ ಮುನ್ನ ರೋಹಿಣಿ ಪರ ವಕೀಲರು ವಾದ ಮಂಡಿಸಿ, ‘ಸೈಬರ್‌ ವಿಭಾಗದ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ರೂಪಾ, ರೋಹಿಣಿ ಅವರ ಮೊಬೈಲ್‌ನಲ್ಲಿನ ಮಾಹಿತಿಯನ್ನು ಪಡೆದುಕೊಂಡಿರುವುದು ಕಾನೂನುಬಾಹಿರವಾಗಿ ಕ್ರಮವಾಗಿದೆ. ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಸಾಧ್ಯತೆಯಿದೆ. ಅಲ್ಲದೇ ರೋಹಿಣಿ ಅವರ ಖಾಸಗಿ ಫೋಟೊ, ಮೊಬೈಲ್‌ ನಂಬರ್‌ನ್ನು ರೂಪಾ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ’ ಎಂದು ದೂರಿದರು.

8 ವರ್ಷ​ದಿಂದ ರೋಹಿಣಿ ನನ್ನ ಮನೆಯವರ ಹಿಂದೆ ಬಿದ್ದಿ​ದ್ದಾರೆ: ರೂಪಾ ಆಡಿಯೋ?

ಅದಕ್ಕೆ ನ್ಯಾಯಪೀಠ, ‘ಈ ಕುರಿತು ರೂಪಾ ಅವರ ವಿರುದ್ಧ ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಿತ್ತಲ್ಲವೇ?’ ಎಂದು ಪ್ರಶ್ನಿಸಿದಾಗ ರೋಹಿಣಿ ಪರ ವಕೀಲರು, ‘ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ’ ಎಂದರು. ‘ನಾಗರಿಕ ಸೇವಾ ನಿಯಮಗಳ ಅನುಸಾರ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆಯನ್ನೂ ರೂಪಾ ಪಾಲಿಸುತ್ತಿಲ್ಲ. ಸರ್ಕಾರದ ಸುತ್ತೋಲೆ ಧಿಕ್ಕರಿಸಿ ಹೇಳಿಕೆ ನೀಡುತ್ತಿದ್ದಾರೆ’ಎಂದು ವಿವರಿಸಿದರು.

click me!