ದಶಪಥ ರಸ್ತೆ ಉದ್ಘಾಟನೆಗೆಂದೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ 120 ಎಕ್ರೆ ವಿಶಾಲ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 2 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಮದ್ದೂರಿನಲ್ಲಿ ಮೋದಿ ಮೆಗಾ ರೋಡ್ ಶೋ ನಡೆಸಲೂ ಉದ್ದೇಶಿಸಲಾಗಿದ್ದು, ಈ ಕುರಿತು ಪ್ರಧಾನಿ ಕಾರ್ಯಾಲಯದಿಂದ ಅನುಮತಿ ನಿರೀಕ್ಷಿಸಲಾಗುತ್ತಿದೆ.
ಮಂಡ್ಯ/ಬೆಂಗಳೂರು(ಫೆ.25): ಸುಮಾರು 8 ಸಾವಿರ ಕೋಟಿಗೂ ಅಧಿಕ ವೆಚ್ಚದ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾ.11ರಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್ ಹೆದ್ದಾರಿಯಾಗಿದೆ.
ದಶಪಥ ರಸ್ತೆ ಉದ್ಘಾಟನೆಗೆಂದೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ 120 ಎಕ್ರೆ ವಿಶಾಲ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 2 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಮದ್ದೂರಿನಲ್ಲಿ ಮೋದಿ ಮೆಗಾ ರೋಡ್ ಶೋ ನಡೆಸಲೂ ಉದ್ದೇಶಿಸಲಾಗಿದ್ದು, ಈ ಕುರಿತು ಪ್ರಧಾನಿ ಕಾರ್ಯಾಲಯದಿಂದ ಅನುಮತಿ ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಗೆ ಬಾಲಗಂಗಾಧರ ಶ್ರೀ ಹೆಸರಿಡಿ
ಮಂಡ್ಯಕ್ಕಿದು ಮೊದಲ ಭೇಟಿ:
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪದೇ ಪದೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ಆಗಮಿಸುತ್ತಿರುವುದು ಇದೇ ಮೊದಲು. ಜೆಡಿಎಸ್ ಭದ್ರಕೋಟೆಯಾದ ಮಂಡ್ಯಕ್ಕೆ ಕಳೆದ ವರ್ಷ ಡಿ.30ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲ ಬಾರಿ ಭೇಟಿ ನೀಡಿದ್ದರು. ಇದೀಗ ಮೋದಿ ಆಗಮನದೊಂದಿಗೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಬಿಜೆಪಿ ಯತ್ನ ಆರಂಭಿಸಿದೆ. ಮೋದಿ ಅವರ ವರ್ಚಸ್ಸು ಮುಂದಿಟ್ಟುಕೊಂಡು ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಗತ್ಯ ರಣತಂತ್ರವನ್ನು ಬಿಜೆಪಿ ಸಿದ್ಧಪಡಿಸುತ್ತಿದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಅಮಿತ್ ಶಾ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದು, ಆ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿಯನ್ನು ಸೇರಿಸಿದ್ದ ಬಿಜೆಪಿ ಮುಖಂಡರು, ಮೋದಿ ಕಾರ್ಯಕ್ರಮಕ್ಕೆ ಇದರ ಮೂರು ಪಟ್ಟು ಜನರನ್ನು ಕರೆತಂದು ಶಕ್ತಿ ಪ್ರದರ್ಶನಕ್ಕೆ ಯೋಜನೆ ರೂಪಿಸಿದ್ದಾರೆ.
Bengaluru Mysuru Highway: ಬೆಂಗ್ಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 800 ಕೋಟಿ ಲೂಟಿ: ಮಂಜುನಾಥ್
ಐಐಟಿ ಕ್ಯಾಂಪಸ್ ಉದ್ಘಾಟನೆ:
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಐಐಟಿ ಧಾರವಾಡ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ.
ಮೋದಿ ಸಮ್ಮುಖ ಸುಮಲತಾ ಬಿಜೆಪಿಗೆ?
ಮಂಡ್ಯದ ಮದ್ದೂರಿನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಪ್ರಕ್ರಿಯೆ ಅಂತಿಮ ಘಟ್ಟತಲುಪಿದೆ. ಮೋದಿ ಸಮ್ಮುಖದಲ್ಲೇ ಪಕ್ಷ ಸೇರಬೇಕು ಎನ್ನುವುದು ಸುಮಲತಾ ಅವರ ಆಸೆ. ಅದರಂತೆ ಅಂದೇ ಮೋದಿ ನೇತೃತ್ವದಲ್ಲಿ ಕೇಸರಿ ಪಾಳಯ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.