Karnataka Caste Census: 'ಜಾತಿ ಪತ್ರ ತಂದುಕೊಡಿ, ಸಾಲಮನ್ನಾ ಮಾಡ್ಸಿ' ಶಿಕ್ಷಕರಿಗೆ ಹೊಸ ತಲೆನೋವು!

Kannadaprabha News, Ravi Janekal |   | Kannada Prabha
Published : Sep 27, 2025, 12:44 PM IST
Dharwad social survey challenges

ಸಾರಾಂಶ

Dharwad social survey challenges: ಧಾರವಾಡದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ಗಣತಿದಾರರು ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದ ಬಳಲುತ್ತಿದ್ದಾರೆ. ಇದರೊಂದಿಗೆ, ‘ಸಾಲಮನ್ನಾ ಮಾಡಿಸಿ, ಜಾತಿ ಪ್ರಮಾಣಪತ್ರ ಕೊಡಿಸಿ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ (ಸೆ.27) : ‘ಜಾತಿ ಪ್ರಮಾಣ ಪತ್ರ ತಂದುಕೊಡಿ, ಸಾಲಮನ್ನಾ ಮಾಡಿಸಿ...!’ ಇದು ಸೆ.22ರಿಂದ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಗಣತಿದಾರರಿಗೆ ಕುಟುಂಬಸ್ಥರು ಕೇಳುತ್ತಿರುವ ಪ್ರಶ್ನೆಗಳು.

ಆರಂಭದ ದಿನದಿಂದಲೂ ಗಣತಿದಾರರು ಸರ್ವರ್‌ ಸಮಸ್ಯೆ, ತಾಂತ್ರಿಕ ದೋಷಗಳಿಂದ ರೋಸಿ ಹೋಗಿದ್ದಾರೆ. ಇದರ ನಡುವೆ ಈಗ ಸಮೀಕ್ಷೆಗೆ ತೆರಳಿದ ವೇಳೆ ಕುಟುಂಬ ಸದಸ್ಯರ ವಿಚಿತ್ರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರದಾಡುತ್ತಿದ್ದಾರೆ.

ಗಣತಿದಾರರು ಸೇರಿದಂತೆ ಜನರಿಗೆ ಅರಿವಿನ ಕೊರತೆ, ಗೊಂದಲಮಯ ಪ್ರಶ್ನೆ ಮತ್ತು ಪದೇ ಪದೇ ತಾಂತ್ರಿಕ ದೋಷಗಳಿಂದಾಗಿ ಗಣತಿಗೆ ಈಗಾಗಲೇ ಹಲವು ಅಡೆತಡೆ ಎದುರಾಗಿದೆ. ಪ್ರಾರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಗಣತಿದಾರರು ಹಲವಾರು ಸಮಸ್ಯೆ ಎದುರಿಸಿದ್ದಾರೆ. ಸರ್ವರ್‌ ಸಮಸ್ಯೆಯಿಂದ ಡೇಟಾ ಅಪ್‌ಲೋಡ್ ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ವಿಶಿಷ್ಠ ಮನೆಯ ಐಡಿ (ಯುಎಚ್‌ಐಡಿ) ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಮತ್ತು ಸಮೀಕ್ಷಾ ಕಾಲಂಗಳು ಓಪನ್‌ ಆಗುತ್ತಿಲ್ಲ. ಹೀಗಾಗಿ, ಗಣತಿದಾರರು ಹತಾಶರಾಗುತ್ತಿದ್ದಾರೆ. ಇದರ ನಡುವೆ ಕುಟುಂಬಸ್ಥರ ಪ್ರಶ್ನೆಗಳಿಂದ ಗಣತಿದಾರರು ದಿಗ್ಭ್ರಾಂತರಾಗಿದ್ದಾರೆ.

ಇದನ್ನೂ ಓದಿ: ಹೊಸ ರಾಜಕೀಯ ಪಕ್ಷ ಕಟ್ಟಲು ಎಷ್ಟು ಹಣ ಬೇಕು? ಕನಿಷ್ಟ ಎಷ್ಟು ಕಾರ್ಯಕರ್ತರಿರಬೇಕು?

ಸಾಲ ಮನ್ನಾ ಮಾಡಿಸಿಕೊಡಿ:

ಸಮೀಕ್ಷೆ ವೇಳೆ ಅನೇಕರು ಜಾತಿ ಅಥವಾ ಉಪ-ಜಾತಿಯ ವಿವರ ಬಹಿರಂಗಪಡಿಸಲು ನಿರಾಕರಿಸುತ್ತಿದ್ದಾರೆ. ಕೆಲವರು ನಾವು ನಮ್ಮ ಜಾತಿಯನ್ನು ಏಕೆ ಬಹಿರಂಗಪಡಿಸಬೇಕು? ಎಂದು ಗಣತಿದಾರರನ್ನು ಕೇಳುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಾತಿ ಪ್ರಮಾಣಪತ್ರ ಅಪ್‌ಲೋಡ್ ಮಾಡಬೇಕಾದ ಹಿಂದುಳಿದ ಸಮುದಾಯಗಳ ಜನರು, ನೀವೇ ನಮಗೆ ಪ್ರಮಾಣಪತ್ರ ವ್ಯವಸ್ಥೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಅದೇ ರೀತಿ ಸಾಲಗಳ ಬಗ್ಗೆ ಗಣಿತದಾರರ ಪ್ರಶ್ನೆಗೆ, ಅನೇಕರು ನಾವು ಬಡವರು, ಸಿಕ್ಕಾಪಟ್ಟೆ ಸಾಲ ಮಾಡಿದ್ದೇವೆ. ಸಾಲಮನ್ನಾ ಮಾಡುತ್ತೀರಾ? ಎಂದು ಕೇಳಿರುವ ಅನೇಕ ಉದಾಹರಣೆಗಳಿವೆ. ಇನ್ನು, ಜಾತಿ ಆಧಾರಿತ ತಾರತಮ್ಯದ ಕುರಿತಾದ ಪ್ರಶ್ನೆಗಳಿಗೆ ಗಣತಿದಾರರು ಸುಸ್ತಾಗಿ ಹೋಗುತ್ತಿದ್ದಾರೆ.

ಕೆಲವು ಗಣತಿದಾರರು ಕುಟುಂಬಗಳ ಸಂಪೂರ್ಣ ವಿವರ ಭರ್ತಿ ಮಾಡುವಲ್ಲಿ ಯಶಸ್ವಿಯಾದರೂ, ಡೇಟಾ ಸಲ್ಲಿಸಲು ಪ್ರಯತ್ನಿಸಿದಾಗ ಸಾಫ್ಟ್‌ವೇರ್ ಸ್ಥಗಿತಗೊಳ್ಳುತ್ತಿದೆ. ಇದರ ಪರಿಣಾಮ ಬೆರಳೆಣಿಕೆಯಷ್ಟು ಮನೆಗಳು ಮಾತ್ರ ಸೇರ್ಪಡೆಗೆ ಸಾಧ್ಯವಾಗುತ್ತಿದೆ ಎಂದು ಗಣತಿದಾರರು ಬೇಸರ ವ್ಯಕ್ತಪಡಿಸುತ್ತಾರೆ. ಕೆಲವು ಗಣತಿದಾರರು ತರಬೇತಿ ಪಡೆದಿದ್ದರೂ ಸಹ, ಸಮೀಕ್ಷಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇತರ ಇಲಾಖೆಗಳಿಂದ ನಿಯೋಜಿತರಾದ ಅನೇಕರಿಗೆ ಇನ್ನೂ ತಮ್ಮ ಗೊತ್ತುಪಡಿಸಿದ ಪ್ರದೇಶಗಳ ಬಗ್ಗೆ ತಿಳಿದಿಲ್ಲ. ಸಮೀಕ್ಷೆ ಮಾಡುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಸಮೀಕ್ಷಾ ಕಾರ್ಯವನ್ನು ತಮ್ಮ ಸ್ವಂತ ಶಾಲೆಯ ವ್ಯಾಪ್ತಿಗೆ ಸೀಮಿತಗೊಳಿಸಬೇಕಿತ್ತು ಎಂಬ ಆಗ್ರಹವನ್ನು ಸಹ ವ್ಯಕ್ತಪಡಿಸಿದ್ದಾರೆ.

ಮುಂದುವರಿದ ಜಾತಿ ಗೊಂದಲ:

ಏತನ್ಮಧ್ಯೆ, ಜಾತಿ ಸಂಘಟನೆಗಳ ನಾಯಕರು, ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಧರ್ಮ, ಜಾತಿ ಮತ್ತು ಉಪಜಾತಿ ಘೋಷಿಸುವ ಬಗ್ಗೆ ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ, ಇದರಿಂದಾಗಿ ಜನರು ಮಾಹಿತಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಹೀಗಾಗಿ, ಸಮೀಕ್ಷೆ ಮಾಡಲು ಗಣಿತದಾರರು ಹತ್ತು ಹಲವು ರೀತಿಯಲ್ಲಿ ಒತ್ತಡಕ್ಕೆ ಒಳಗಾತ್ತಿದ್ದಾರೆ.-

ಇದನ್ನೂ ಓದಿ: ಗಣತಿ ಅವಧಿ ವಿಸ್ತರಣೆ ಇಲ್ಲ : ಆಮೆಗತಿಯಲ್ಲಿ ಜಾತಿ ಗಣತಿಗೆ ಗರಂ

ಗಣತಿದಾರರು ಸಮೀಕ್ಷೆಯ ಉದ್ದೇಶಗಳನ್ನು ಮೊದಲಿಗೆ ಜನರಿಗೆ ಸ್ಪಷ್ಟವಾಗಿ ವಿವರಿಸಬೇಕು. ಈ ಮೂಲಕ ಕುಟುಂಬಗಳಲ್ಲಿ ನಿಧಾನವಾಗಿ ನಂಬಿಕೆ ಬೆಳೆಸಿದರೆ, ಜನರು ಸಹಕರಿಸುತ್ತಾರೆ. ಕಲ್ಯಾಣ ಯೋಜನೆಗಳನ್ನು ರೂಪಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ತೊಂದರೆಗಳನ್ನು ಎದುರಿಸುತ್ತಿರುವ ಗಣತಿದಾರರಿಗಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. ಅವರು ಅದನ್ನು ಆತ್ಮವಿಶ್ವಾಸದಿಂದ ಬಳಸಬೇಕು ಮತ್ತು ಅವರಿಗೆ ನಿಯೋಜಿಸಲಾದ ಕಾರ್ಯವನ್ನು ಪೂರ್ಣಗೊಳಿಸಬೇಕು. ನಾನು ಸಹ ನಿರಂತರವಾಗಿ ಸಮೀಕ್ಷೆಯ ಮೇಲ್ವಿಚಾರಣೆ ಮಾಡುತ್ತಿದ್ದು, ಈವರೆಗೆ 6,800 ಮನೆಗಳ ಡೇಟಾ ಸಂಗ್ರಹಿಸಲಾಗಿದೆ.

- ದಿವ್ಯಪ್ರಭು, ಜಿಲ್ಲಾಧಿಕಾರಿ, ಧಾರವಾಡ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!