
ಕಲಬುರಗಿ (ಸೆ.27): ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಅದರಲ್ಲೂ 'ಉತ್ತರ ಒಳನಾಡಿನ' ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತವು ಶುಕ್ರವಾರ (ಸೆ.27) ಮತ್ತು ಶನಿವಾರ (ಸೆ.28) ಎರಡು ದಿನಗಳ ಕಾಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳ ಕಾಲ ಕಲಬುರಗಿ ಜಿಲ್ಲೆಯಲ್ಲಿ 'ಆರೆಂಜ್ ಅಲರ್ಟ್' ಘೋಷಿಸಿರುವ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಡಿಡಿಪಿಐ (DDPI) ಈ ಆದೇಶ ಹೊರಡಿಸಿದ್ದಾರೆ. ದಸರಾ ಹಬ್ಬದ ರಜೆ ಇದ್ದರೂ, ಕೆಲವು ಶಾಲಾ ಆಡಳಿತ ಮಂಡಳಿಗಳು ವಿನಾಯಿತಿ ಪಡೆದು ತರಗತಿಗಳನ್ನು ನಡೆಸುತ್ತಿದ್ದವು. ಮುಂಜಾಗ್ರತಾ ಕ್ರಮವಾಗಿ, ಭಾರೀ ಮಳೆಯಿಂದ ಯಾವುದೇ ಅನಾಹುತವಾಗದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಜಾ ಅವಧಿಯಲ್ಲಿ ನಷ್ಟವಾದ ಪಾಠ ಬೋಧನೆಯನ್ನು ಮುಂದಿನ ರಜಾ ದಿನಗಳಂದು ಸರಿದೂಗಿಸಲು ಸಂಬಂಧಪಟ್ಟ ಶಾಲಾ ಆಡಳಿತಗಳಿಗೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಉತ್ತಮ ಮಳೆ ಮುನ್ಸೂಚನೆ ಮುಂದುವರಿದಿದ್ದು, ಒಳನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಈ ಭಾಗದಲ್ಲಿ ಗರಿಷ್ಠ 200 ಮಿಲಿ ಮೀಟರ್‌ವರೆಗೂ ಮಳೆ ನಿರೀಕ್ಷೆಯಿದೆ. ಈ ಕಾರಣದಿಂದಾಗಿ ಒಳನಾಡು ಮತ್ತು ಕರಾವಳಿ ಭಾಗದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ಯಾದಗಿರಿಯಲ್ಲಿ ಇಂದು ಮತ್ತು ನಾಳೆ (ಸೆ. 28) ಎರಡೂ ದಿನಗಳ ಕಾಲ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ನಿರೀಕ್ಷೆಯಿದ್ದು, 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಇದೇ ಅವಧಿಯಲ್ಲಿ ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಸಹ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೂ ಎಚ್ಚರಿಕೆ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಭಾರೀ ಮಳೆ ಮುನ್ಸೂಚನೆ ಇದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಸೆಪ್ಟೆಂಬರ್ 29ರಂದು ಮಳೆಯ ಅಬ್ಬರ ಕೊಂಚ ತಗ್ಗುವ ಸಾಧ್ಯತೆ ಇದ್ದು, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಸೆಪ್ಟೆಂಬರ್ 29 ಮತ್ತು 30ರ ಹೊತ್ತಿಗೆ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗುವ ಲಕ್ಷಣಗಳಿವೆ.
ಆದರೆ, ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ, ಅಂದರೆ ಅಕ್ಟೋಬರ್ 1 ರಿಂದ 3 ರವರೆಗೆ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮತ್ತೆ ಮಳೆ ಸಕ್ರಿಯವಾಗುವ ಲಕ್ಷಣಗಳು ಕಂಡುಬಂದಿವೆ. ಈ 3 ದಿನಗಳ ಕಾಲ ಕರಾವಳಿ ಭಾಗಕ್ಕೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಒಟ್ಟಾರೆಯಾಗಿ, ಮುಂದಿನ ಒಂದು ವಾರಗಳ ಕಾಲ ರಾಜ್ಯದ ಜನರು ಮಳೆರಾಯನ ಆರ್ಭಟಕ್ಕೆ ಸಿದ್ಧರಾಗಿ, ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ