
ಬೆಂಗಳೂರು (ಸೆ.27) : ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಗುಹೆಯಲ್ಲಿ ವಾಸವಾಗಿದ್ದ ರಷ್ಯಾ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರು ಸ್ವದೇಶಕ್ಕೆ ವಾಪಸಾಗಲು ಅಗತ್ಯ ಪ್ರಯಾಣ ದಾಖಲೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಮಹಿಳೆಯ ಪತಿ ರಷ್ಯಾ ನಿವಾಸಿ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ಕೇಂದ್ರ ಸರ್ಕಾರಕ್ಕೆ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ಗುಹೆಯಲ್ಲಿ ತಂಗಿದ್ದ ಮಹಿಳೆ ಮತ್ತು ಆಕೆಯ ಪುತ್ರಿಯರು ರಷ್ಯಾದಿಂದ ಭಾರತಕ್ಕೆ ಬಂದು ವೀಸಾ ಅವಧಿ ಮೀರಿ ನೆಲೆಸಿದ್ದಾರೆ. ಹಾಗಾಗಿ ಪ್ರಕರಣ ಕುರಿತು ರಷ್ಯಾ ಸರ್ಕಾರಕ್ಕೆ ಎಲ್ಲಾ ವಿವರ ಒದಗಿಸಬೇಕು. ಜತೆಗೆ, ಮಹಿಳೆ ಸಹ ತನ್ನ ಮಕ್ಕಳ ಜೊತೆ ರಷ್ಯಾಗೆ ಹಿಂತಿರುಗಲು ಅನುಮತಿಸಲು ವಿನಂತಿಸಿದ್ದಾರೆ. ಮತ್ತೊಂದೆಡೆ ಅವರನ್ನು ಕರೆತರಲು ರಷ್ಯಾ ಸರ್ಕಾರ ಕೂಡ ಅಧಿಕಾರಿಗಳಿಗೆ ಸೂಚಿಸಿದೆ. ಆದ್ದರಿಂದ ತಾಯಿ, ಮಕ್ಕಳನ್ನು ಶೀಘ್ರ ರಷ್ಯಾಗೆ ವಾಪಸ್ ಕಳಿಸಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ದಾಖಲೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪೀಠ ಸೂಚಿಸಿದೆ.
ಇದನ್ನೂ ಓದಿ: ಗೋಕರ್ಣ ಗುಹೆಯಲ್ಲಿ ಸಿಕ್ಕ ರಷ್ಯಾ ಕುಟುಂಬ ಗಡೀಪಾರಿಗೆ ಹೈಕೋರ್ಟ್‌ನಿಂದ ತಡೆ
ಪ್ರಕರಣವೇನು?:
ನೀನಾ ಕುಟಿನಾ ತನ್ನ ಪತಿ, ಮಕ್ಕಳ ಜತೆ 2016ರಲ್ಲಿ ವ್ಯಾಪಾರ ವೀಸಾ ಪಡೆದು ರಷ್ಯಾದಿಂದ ಭಾರತಕ್ಕೆ ಬಂದು ಗೋವಾದಲ್ಲಿ ನೆಲೆಸಿದ್ದರು. ಅವರ ವೀಸಾ ಅವಧಿ 2016ರ ಅ.18ರಿಂದ 2017ರ ಏಪ್ರಿಲ್‌ವರೆಗೆ ಇತ್ತು. ವೀಸಾ ಅವಧಿ ಮೀರಿ ಅವರು ಭಾರತದಲ್ಲಿ ನೆಲೆಸಿದ್ದರು. ಹಿಂದೂ ಧರ್ಮ ಹಾಗೂ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಆಕರ್ಷಿತರಾಗಿದ್ದ ಕುಟಿನಾ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ರಾಮತೀರ್ಥ ಬೆಟ್ಟದಲ್ಲಿರುವ ಗುಹೆಯಲ್ಲಿ ನೆಲೆಸಿದ್ದರು.
2025ರ ಜು.11ರಂದು ಪೊಲೀಸ್ ಗಸ್ತು ವೇಳೆ ತಾಯಿ-ಮಕ್ಕಳು ಗುಹೆಯಲ್ಲಿ ಪತ್ತೆಯಾಗಿದ್ದರು. ಅವರನ್ನು ನಂತರ ತುಮಕೂರಿನ ವಿದೇಶಿಯರ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಸುದ್ದಿ ತಿಳಿದು ಭಾರತಕ್ಕೆ ಆಗಮಿಸಿದ್ದ ಪತಿ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೈನ್, ತನ್ನ ಪುತ್ರಿಯರನ್ನು ಭಾರತದಿಂದ ಬೇರೆ ಯಾವುದೇ ದೇಶಕ್ಕೆ ದಿಢೀರ್ ಗಡೀಪಾರು ಮಾಡಬಾರದು. ತನ್ನ ಸುಪರ್ದಿಗೆ ಒಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ