ಅರಸು ನನಗೆ ಸೂಟ್‌ಕೇಸ್‌ ಕೊಡಲು ಬಂದಿದ್ದರು!: ಗೌಡರ ಸ್ಫೋಟಕ ಹೇಳಿಕೆ

By Web DeskFirst Published Nov 18, 2018, 7:43 AM IST
Highlights

"ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ಹಗರಣ ಬಯಲಿಗೆಳೆಯದಂತೆ ಸೂಟ್‌ಕೇಸ್‌ ಆಮಿಷವೊಡ್ಡಿದ್ದರು. ನಿಮಗೆ 1.3 ಲಕ್ಷ ಸಾಲವಿದೆ; 4 ಗಂಡು, 2 ಹೆಣ್ಣು ಮಕ್ಕಳಿದ್ದಾರೆ; ಅವರ ಕಷ್ಟ-ಸುಖ ನೋಡಿಕೊಳ್ಳಬೇಕು ಎಂದಿದ್ದರು" ಎಚ್. ಡಿ ದೇವೇಗೌಡ

ಬೆಂಗಳೂರು[ನ.18]: ದೇವ​ರಾಜ ಅರಸು ಶ್ರೇಷ್ಠ ವ್ಯಕ್ತಿ. ಅಂತಹ ವ್ಯಕ್ತಿ ಮತ್ತೆ ಹುಟ್ಟಿಬರಲು ಸಾಧ್ಯ​ವಿಲ್ಲ. ಅರಸು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ನಾನು ಪ್ರತಿ​ಪಕ್ಷ ನಾಯ​ಕ​ನಾ​ಗಿದ್ದೆ. ಒಂದು ಬಾರಿ ಅರಸು ಅವರು ತಮ್ಮ ವಿರು​ದ್ಧದ ಆರೋ​ಪ​ಗ​ಳನ್ನು ಬಯ​ಲಿ​ಗೆ​ಳೆ​ಯ​ದಂತೆ ಕಪಾ​ಟಿ​ನ​ಲ್ಲಿ​ರುವ ಸೂಟ್‌​ಕೇಸ್‌ ತೋರಿಸಿ ಆಮಿಷ ಒಡ್ಡಿ​ದ್ದರು. ನಾನು ಬಗ್ಗ​ಲಿಲ್ಲ. ನನ್ನ ಈ ಪ್ರಾಮಾ​ಣಿಕ ಹಟವನ್ನು ಅರಸು ಮುಕ್ತ ಮನ​ಸ್ಸಿ​ನಿಂದ ಶ್ಲಾಘಿಸಿದ್ದಾರೆ. ಹೀಗೆ ನಾಡಿನ ಶ್ರೇಷ್ಠ ಮುಖ್ಯ​ಮಂತ್ರಿ ಎಂದೇ ಖ್ಯಾತ​ರಾದ ದೇವ​ರಾಜ ಅರಸು ಅವರು ತಮಗೆ ಸೂಟ್‌​ಕೇಸ್‌ ನೀಡಲು ಬಂದಿ​ದ್ದರು ಎಂಬ ರಹ​ಸ್ಯ​ವನ್ನು ಬಿಚ್ಚಿ​ಟ್ಟಿದ್ದು ಜೆಡಿ​ಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇ​ಗೌ​ಡ.

"

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ ಮತ್ತು ರಾಜಕೀಯ ಜೀವನವನ್ನು ಮೆಲುಕು ಹಾಕಿದ್ದಾರೆ. ವಿಶೇ​ಷ​ವಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ನಾಡಿಗೆ ನೀಡಿದ ಕೊಡು​ಗೆ​ಯನ್ನು ಮುಕ್ತಕಂಠದಿಂದ ಹೊಗ​ಳಿ​ದರು. ನಾಡಿಗಾಗಿ ದೇವರಾಜು ಅರಸು ಅವರ ಕೆಲಸಗಳನ್ನು ಮತ್ತೊಬ್ಬ ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ತಮಗಾಗಿ ಏನನ್ನೂ ಮಾಡಿಕೊಳ್ಳದ ಅವರು, ತಮ್ಮ ಜೀವನವನ್ನೇ ಬಡವರಿಗಾಗಿ ಮುಡಿಪಾಗಿಟ್ಟಿದ್ದರು ಎಂದು ಹೇಳಿ​ದ್ದಾರೆ.

ನಾನು ವಿರೋಧ ಪಕ್ಷದಲ್ಲಿದ್ದ ವೇಳೆ ತಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಸಾಬೀತುಪಡಿಸಿದರೆ ರಾಜೀನಾಮೆ ಕೊಡುತ್ತೇನೆ ಎಂದು ಅರಸು ಹೇಳಿದ್ದರು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಷ್ಟುಬಲ ವಿರೋಧ ಪಕ್ಷದಲ್ಲಿರಲಿಲ್ಲ. ಆದರೂ ಪದೇ ಪದೇ ಆ ಸವಾಲನ್ನು ಹಾಕುತ್ತಿದ್ದರು. ಪ್ರಾಮಾಣಿಕವಾಗಿದ್ದ ದೇವರಾಜ ಅರಸು ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವುದು ಸುಲಭವಾಗಿರಲಿಲ್ಲ. ಏಕೆಂದರೆ, ಅವರು ಅಷ್ಟುನಿಷ್ಕಳಂಕವಾಗಿದ್ದರು. ಹೀಗಿರುವಾಗ ಅವರ ಹೆಣ್ಣು ಮಕ್ಕಳಿಗೆ ನಿವೇಶನ ನೀಡಿರುವ ವಿಚಾರದಲ್ಲಿ ಅಕ್ರಮ ನಡೆದಿರುವ ಸುಳಿವನ್ನು ನಾನು ಪತ್ತೆ ಹಚ್ಚಿದಾಗ ಅರಸು ಅವರೇ ದಿಗ್ಭ್ರಮೆಗೊಂಡಿದ್ದರು.

ಭ್ರಷ್ಟಾಚಾರ, ಸ್ವಜನಪಕ್ಷಪಾತ ಸಾಬೀತುಪಡಿಸಿದರೆ ತಾವು ರಾಜೀನಾಮೆ ನೀಡುವುದಾಗಿ ಅರಸು ಅವರು ನಾನು ವಿರೋಧ ಪಕ್ಷದಲ್ಲಿದ್ದಾಗ ಪದೇ ಪದೇ ಹೇಳುತ್ತಿದ್ದರು. ಪ್ರಾಮಾಣಿಕರಾಗಿದ್ದ ದೇವರಾಜ ಅರಸು ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವುದು ಸುಲಭವಾಗಿರಲಿಲ್ಲ. ಹೀಗಿರುವಾಗ ಅವರ ಹೆಣ್ಣು ಮಕ್ಕಳಿಗೆ ನಿವೇಶನ ನೀಡಿರುವ ವಿಚಾರದಲ್ಲಿ ಅಕ್ರಮ ನಡೆದಿರುವ ಸುಳಿವನ್ನು ನಾನು ಪತ್ತೆ ಹಚ್ಚಿದ್ದೆ. ಒಮ್ಮೆ ನನ್ನನ್ನು ಭೇಟಿಯಾಗಿದ್ದ ಅವರು ನನ್ನ ಸಾಲ, ಕುಟುಂಬ ಸ್ಥಿತಿ ಹೇಳಿ ಸೂಟ್‌ಕೇಸ್‌ ತೆಗೆದುಕೊಳ್ಳುವಂತೆ ಹೇಳಿದ್ದರು. ನಾನು ಕೈಮುಗಿದು ಬೇಡ ಎಂದಿದ್ದೆ.

- ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಒಮ್ಮೆ ನನ್ನನ್ನು ಭೇಟಿ​ಯಾ​ದಾಗ ನನಗೆ ಇದ್ದ 1.3 ಲಕ್ಷ ರು. ಸಾಲದ ವಿಚಾರ ಪ್ರಸ್ತಾ​ಪಿ​ಸಿ​ದರು. ಮೂರು ಜನ ಗಂಡು ಮಕ್ಕಳು ಹಾಗೂ 2 ಹೆಣ್ಣು ಮಕ್ಕ​ಳನ್ನು ಹೊಂದಿ​ದ್ದೀರಾ. ಅವರ ಕಷ್ಟಸುಖ​ವನ್ನು ನೀವು ನೋಡ​ಬೇಕು ಎನ್ನುತ್ತಾ ಮರದ ಕಪಾಟೊಂದನ್ನು ತೆಗೆದು ಅದ​ರಲ್ಲಿದ್ದ ಸೂಟ್‌ ಕೇಸ್‌ ತೋರಿಸಿ, ಅದನ್ನು ತೆಗೆ​ದುಕೊಳ್ಳಿ ಎಂದರು. ಆದರೆ, ಅದನ್ನು ಸಾರಾಸಗಟಾಗಿ ತಿರಸ್ಕರಿಸಿ ಕೈ ಮುಗಿದು ಬೇಡವೆಂದು ಹೇಳಿದೆ ಎಂದು ದೇವೇಗೌ​ಡ ಹೇಳಿದ್ದಾರೆ.

ಇದನ್ನೂ ಓದಿ: ವಾಸ್ತುಪ್ರಕಾರ ಮನೆಗೆ ಗೌಡರ ಗೃಹಪ್ರವೇಶ

ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಹೋರಾಟ ನಡೆಸಿದಾಗ ನನ್ನನ್ನು ಜೈಲಿಗೆ ಹಾಕಲಾಗಿತ್ತು. ಈ ವಿಷಯ ತಿಳಿದ ನನ್ನ ತಂದೆ ಅನಾರೋಗ್ಯಕ್ಕೊಳಗಾದರು. ಅವರಿಗೆ ಚಿಕಿತ್ಸೆ ಕೊಡಿಸಲು ದೇವರಾಜ ಅರಸು ತುಂಬಾ ಸಹಕಾರ ಮಾಡಿದರು. ಈ ನಡುವೆ, ನಾನು ಜೈಲಿಗೆ ಹೋಗುತ್ತಿದ್ದಂತೆ ನನಗೆ ಆಪ್ತ ಇರುವಂತಹ ಕೃಷ್ಣಯ್ಯ ಎಂಬ ಅಧಿಕಾರಿಯನ್ನು ವರ್ಗಾಯಿಸಲಾಯಿತು. ಇದನ್ನು ಖಂಡಿಸಿದಾಗ ವರ್ಗಾವಣೆಯನ್ನು ರದ್ದುಗೊಳಿಸಿದರು. ಅಲ್ಲದೇ, ನನಗೆ ಪತ್ರ ಬರೆದು ವರ್ಗಾವಣೆ ರದ್ದುಗೊಳಿಸಿದ ಬಗ್ಗೆ ವಿಷಯ ತಿಳಿಸಿದರು. ಅವರಂತಹ ದೊಡ್ಡ ರಾಜಕಾರಣಿ ಸಿಗುವುದಿಲ್ಲ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ನನ್ನ ಜೀವನವೇ ಪ್ರಾರಬ್ಧ:

ಇಡೀ ನನ್ನ ರಾಜಕೀಯ ಜೀವನವೇ ಪ್ರಾರಬ್ಧವಾಗಿದ್ದು, ಎಂದಿಗೂ ಅಧಿಕಾರಾವಧಿಯನ್ನು ಪೂರ್ಣವಾಗಿ ಅನುಭವಿಸಲಿಲ್ಲ. ನಮ್ಮೆಲ್ಲಾ ಕರ್ಮಗಳು ನಮ್ಮ ಬೆನ್ನ ಹಿಂದೆಯೇ ಬರುತ್ತವೆ ಎಂಬುದಕ್ಕೆ ನನ್ನ ರಾಜಕೀಯ ಜೀವನವೇ ಸಾಕ್ಷಿ. ಒಂದೂವರೆ ವರ್ಷಗಳ ಕಾಲ ಮಾತ್ರ ಮುಖ್ಯಮಂತ್ರಿಯಾದರೆ, ಪ್ರಧಾನಿಯಾಗಿ ಕೇವಲ 10 ತಿಂಗಳು ಮಾತ್ರ ಅಧಿಕಾರ ನಡೆಸಿದ್ದೇನೆ. ನೀರಾವರಿ ಸಚಿವನಾಗಿದ್ದರೂ ಮೂರು ಬಾರಿ ರಾಜೀನಾಮೆ ನೀಡಬೇಕಾಯಿತು. ಪೂರ್ಣಾವಧಿ ಸಚಿವನೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ: 'ಕೈ' ಸ್ಟಾಟರ್ಜಿಗೆ ಸೈ ಅಂತಾರಾ ಗೌಡರು..?

ರಾಜಕೀಯದಲ್ಲಿ ಸಾಕಷ್ಟುಕಷ್ಟಗಳನ್ನು ಅನುಭವಿಸಿದ್ದೇನೆ. ಎಷ್ಟೇ ಕಷ್ಟಅನುಭವಿಸಿದರೂ ರಾಜಕೀಯದಿಂದ ದೂರ ಸರಿಯುವುದಿಲ್ಲ. ಅದು ನನ್ನ ಸ್ವಭಾವವೂ ಅಲ್ಲ. ಶಕ್ತಿ ಇರುವವರೆಗೆ ರಾಜಕೀಯದಲ್ಲಿ ಹೋರಾಟ ನಡೆಸುತ್ತೇನೆ. ಶಕ್ತಿ ಎಂದು ಕುಂದುವುದೋ ಅಂದು ವಿಶ್ರಾಂತಿ ಪಡೆದುಕೊಳ್ಳುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

click me!