
ವಿಧಾನ ಪರಿಷತ್ (ಸೆ.14) ರಾಜ್ಯದ ರೈತ ಸಮುದಾಯ ಬಹುದಿನಗಳ ಬೇಡಿಕೆಯಾದ ‘ಯಶಸ್ವಿನಿ’ ಯೋಜನೆಯನ್ನು ಹಾಲಿ ಇರುವ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸಿ ಬರುವ ಅಕ್ಟೋಬರ್ 2ರಿಂದ ಮರುಜಾರಿಗೊಳಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಕಾಂಗ್ರೆಸ್‌ನ ಪ್ರಕಾಶ್ ಕೆ. ರಾಥೋಡ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಬಜೆಟ್‌ನಲ್ಲಿ 300 ಕೋಟಿ ರು. ಒದಗಿಸುವುದಾಗಿ ಘೋಷಿಸಲಾಗಿದೆ. ಯೋಜನೆಯಡಿ ಸೇರ್ಪಡೆಯಾಗಲು ಸದಸ್ಯತ್ವದ ಮಾನದಂಡ ರೂಪಿಸಲಾಗುತ್ತಿದೆ. ಹೊಸದಾಗಿ ಯಶಸ್ವಿನಿ ಟ್ರಸ್ಟ್ ರಚಿಸುವ ಕಾರ್ಯ, ಯಾವ ಕಾಯಿಲೆಗಳನ್ನು ಹಾಗೂ ಯಾವ್ಯಾವ ಆಸ್ಪತ್ರೆಗಳನ್ನು ಒಳಪಡಿಸುವ ಕಾರ್ಯ ಪ್ರಗತಿ ಹಂತದಲ್ಲಿದೆ. ಅಲ್ಲದೇ ಸಹಕಾರಿ ಬ್ಯಾಂಕುಗಳ ಸದಸ್ಯರನ್ನು ಯೋಜನೆಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ರೈತರ ಅನುಕೂಲತೆಗೆ ಯಶಸ್ವಿನಿ ಯೋಜನೆ ಮರುಜಾರಿ: ಸಚಿವ ಸೋಮಶೇಖರ್
ಯಶಸ್ವಿ ಜಾರಿಗೆ ಸಿದ್ಧತೆ: ಯೋಜನೆ ಮರು ಜಾರಿ ಘೋಷಿಸಿ ಆರು ತಿಂಗಳಾದರೂ ಜಾರಿಗೆ ತಂದಿಲ್ಲ ಎಂಬ ರಾಥೋಡ್ ಅವರ ಆಕ್ಷೇಪವನ್ನು ಒಪ್ಪದ ಸಚಿವರು, ಈ ಹಿಂದೆ ಇದ್ದ ‘ಯಶಸ್ವಿನಿ’ ಯೋಜನೆಯನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ಇರದಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಯೋಜನೆ ಒಂದುಗೂಡಿಸಿ ಜಾರಿಗೆ ತರಲು ಯಶಸ್ವಿನಿ ಯೋಜನೆಯನ್ನು ಆರೋಗ್ಯ ಇಲಾಖೆಗೆ ವಿಲೀನಗೊಳಿಸಿದರು. ಈ ಯೋಜನೆ ಮರು ಜಾರಿಗೆ ತರಬೇಕಾದರೆ ಆರೋಗ್ಯ ಇಲಾಖೆಯಿಂದ ಬೇರ್ಪಡಿಸುವ ಜೊತೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಬೇಕಾಗಿತ್ತು.
ಈಗ ಎರಡು ಇಲಾಖೆಗಳು ಒಪ್ಪಿಗೆ ನೀಡಿವೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಯೋಜನೆ ಇರುವಾಗ ಮತ್ತೊಂದು ಯೋಜನೆ ಜಾರಿಗೆ ತರುವಾಗ ಎಲ್ಲ ರೀತಿಯಿಂದ ಸಮಾಲೋಚಿಸಿ ತರಬೇಕಾಗುತ್ತದೆ. ಹಾಗಾಗಿ ಯೋಜನೆ ಜಾರಿಗೆ ಸ್ವಲ್ಪ ತಡವಾದರೂ ಯಶಸ್ವಿಯಾಗಿ ಜಾರಿಗೆ ತರುತ್ತೇವೆ. ಈಗಾಗಲೇ ಯೋಜನೆಯ ‘ಲೋಗೋ’ ಸಹ ಘೋಷಿಸಲಾಗಿದೆ ಎಂದರು.
ಯಶಸ್ವಿನಿ ಆರೋಗ್ಯ ಯೋಜನೆ ಮರುಜಾರಿ, ದಿನಾಂಕ ಘೋಷಿಸಿದ ಸಚಿವ ಸೋಮಶೇಖರ್
ಸಹಕಾರ ಇಲಾಖೆಯಲ್ಲೇ ಇರಲಿ: ಬಿಜೆಪಿಯ ಎಚ್.ವಿಶ್ವನಾಥ್ ಮಾತನಾಡಿ, ಈ ಯೋಜನೆ ಆರೋಗ್ಯ ಇಲಾಖೆಗೆ ನೀಡಿದರೆ ಹಾಳಾಗಿ ಹೋಗುತ್ತದೆ. ಹಾಗಾಗಿ ಸಹಕಾರಿ ಇಲಾಖೆಯಡಿ ಯಶಸ್ವಿನಿ ಯೋಜನೆಯ ಅನುಷ್ಠಾನವಾಗಲಿ. ಸಿಎಸ್‌ಆರ್ ನಿಧಿ ಮೂಲಕ ಕಾರ್ಪೋರೆಟ್ ಕಂಪನಿಗಳಿಂದ ಒಂದು ಸಾವಿರ ಕೋಟಿ ರು. ಸಂಗ್ರಹಿಸಿ ಆ ಮೂಲಕ ಪರಿಣಾಮಕಾರಿಯಾಗಿ ಯೋಜನೆ ಜಾರಿಗೆ ತನ್ನಿ ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ