
ವಿಧಾನಸಭೆ (ಸೆ.14) : ರಾಜ್ಯಾದ್ಯಂತ ಮಳೆಯಿಂದ ಹಾನಿಗೊಳಗಾಗಿರುವ ಮೂಲ ಸೌಕರ್ಯ ಪುನರ್ ನಿರ್ಮಾಣ ಕಾರ್ಯಕ್ಕೆ ಎನ್‌ಡಿಆರ್‌ಎಫ್ ಹಣದ ಜೊತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳಿಂದ ತಲಾ 300 ಕೋಟಿ ರು.ಗೂ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಸ್ವಾರಸ್ಯಕರ ಚರ್ಚೆ: ಸಿದ್ದರಾಮಯ್ಯ ಕಿಚಾಯಿಸಿದ ಸಿಎಂ ಬೊಮ್ಮಾಯಿ
ಸದನದಲ್ಲಿ ಸೋಮವಾರ ಪ್ರಶ್ನೋತ್ತರ ಕಲಾಪದ ವೇಳೆ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ರಾಜ್ಯಾದ್ಯಂತ ಹೆಚ್ಚಿನ ಮಳೆಯಾಗಿರುವುದರಿಂದ ಎಲ್ಲೆಡೆ ರಸ್ತೆ, ಸೇತುವೆಗಳು ಸೇರಿದಂತೆ ಮೂಲ ಸೌಕರ್ಯಗಳು ಹಾಳಾಗಿವೆ. ಈ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ.
ಎರಡು ಹಂತದಲ್ಲಿ ಅವುಗಳ ಪುನರ್ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಸ್ಥಳದಲ್ಲಿ ತುಂಬಿರುವ ನೀರನ್ನು ಮೋಟರ್ ಪಂಪ್ ಮೂಲಕ ಹೊರಹಾಕುವುದು. ನಂತರ ಅಗತ್ಯ ಮೂಲಸೌಕರ್ಯವನ್ನು ಪುನರ್ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕೆ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ನಿಧಿಯ ಅನುದಾನದ ಜೊತೆಗೆ ಆರ್‌ಡಿಪಿಆರ್ ಮತ್ತು ಪಿಡ್ಲ್ಯುಡಿ ಇಲಾಖೆಗಳಿಂದ ಒಟ್ಟು 600 ಕೋಟಿ ರು. ಒದಗಿಸಲಾಗಿದೆ ಎಂದರು.
2 ದಿನದಲ್ಲಿ 116 ಕೋಟಿ ರು. ಬೆಳೆಹಾನಿ ಪರಿಹಾರ ಬಿಡುಗಡೆ:
ಮಳೆಯಿಂದಾಗಿ ಸಂಭವಿಸಿರುವ ಬೆಳೆಹಾನಿ ಕುರಿತು ರಾಜ್ಯದ ಕೆಲವೆಡೆ ಸಮೀಕ್ಷೆ ನಡೆಸಲಾಗಿದ್ದು, ಮುಂದಿನ ಎರಡು ದಿನದಲ್ಲಿ 116.38 ಕೋಟಿ ರು. ಬೆಳೆಹಾನಿ ಪರಿಹಾರವನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಸೋಮವಾರ ಅತಿವೃಷ್ಟಿಕುರಿತ ಚರ್ಚೆ ವೇಳೆ ಸರ್ಕಾರವು ಬೆಳೆಹಾನಿ ಕುರಿತು ಸಮೀಕ್ಷೆ ನಡೆಸಿಲ್ಲ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಜಂಟಿಯಾಗಿ ಉತ್ತರ ನೀಡಿದರು.
ಕೆಲವು ಪ್ರದೇಶದಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಕೆಲವೆಡೆ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆ ಕಾರ್ಯ ಮುಗಿದು ವಿವರ ಆಪ್‌ಲೋಡ್ ಆಗುತ್ತಿದ್ದಂತೆ ಪರಿಹಾರ ನೀಡಲಾಗುವುದು. 1.4 ಲಕ್ಷ ರೈತರ ಸಮೀಕ್ಷೆ ನಡೆಸಲಾಗಿದ್ದು, 116 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್-ಬಿಜೆಪಿ ನಡವಿನ ಕಾಳಗದಲ್ಲಿ ಕುಮಾರಸ್ವಾಮಿ ಎಂಟ್ರಿ, ಬೊಮ್ಮಾಯಿ ಸರ್ಕಾರಕ್ಕೆ ಶಾಕ್
ಇದಕ್ಕೆ ಪೂರಕವಾಗಿ ಉತ್ತರ ನೀಡಿದ ಸಚಿವ ಅಶೋಕ್, ಬೆಳೆಹಾನಿ ಕುರಿತು ಸಮೀಕ್ಷೆಯು ಹಂತ ಹಂತವಾಗಿ ನಡೆಸಲಾಗುತ್ತಿದೆ. 116.38 ಕೋಟಿ ರು. ಅನ್ನು ಎರಡು ದಿನದಲ್ಲಿ ಬಿಡುಗಡೆ ಮಾಡಲಾಗುವುದು. ಬೇರೆ ರಾಜ್ಯಗಳ ವಿಪತ್ತು ನಿರ್ವಹಣೆ ನೀಡುವ ಮೊತ್ತದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹೆಚ್ಚಿನ ಪರಿಹಾರ ನಿಡಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ