ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ಕಗ್ಗಾಡಿನಲ್ಲಿ ಅಭಿಯಾನದ ರಾಯಭಾರಿ ರಿಷಬ್ ಶೆಟ್ಟಿ, ಅರಣ್ಯಾಧಿಕಾರಿಗಳು ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ತಂಡ, ಅರಣ್ಯ, ವನ್ಯಜೀವಿಗಳು ಹಾಗೂ ಇಲಾಖೆಗಳ ಕುರಿತು ಜನಜಾಗೃತಿ ಮೂಡಿಸಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಜೊಯಿಡಾ (ಜೂ.05): ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ಕಗ್ಗಾಡಿನಲ್ಲಿ ಅಭಿಯಾನದ ರಾಯಭಾರಿ ರಿಷಬ್ ಶೆಟ್ಟಿ, ಅರಣ್ಯಾಧಿಕಾರಿಗಳು ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ತಂಡ, ಅರಣ್ಯ, ವನ್ಯಜೀವಿಗಳು ಹಾಗೂ ಇಲಾಖೆಗಳ ಕುರಿತು ಜನಜಾಗೃತಿ ಮೂಡಿಸಿದ್ದಾರೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಿದ್ದಲ್ಲದೇ, ಅರಣ್ಯವಾಸಿಗಳ ಜತೆ ಸಂವಾದ ಹಾಗೂ ಸಭೆ ನಡೆಸುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವೂ ನಡೆಸಲಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಆಯೋಜಿಸಲಾಗಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನ ಉತ್ತರಕನ್ನಡ ಜಿಲ್ಲೆಯ ಜೊಯಿಡಾದ ಅರಣ್ಯವಾಸಿಗಳ ಪಾಲಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಅಭಿಯಾನದ ರಾಯಭಾರಿ ಪ್ರಸಿದ್ದ ನಟ ರಿಷಭ್ ಶೆಟ್ಟಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ದಟ್ಟ ಕಾಡಿನೊಳಗೆ ಹೆಜ್ಜೆ ಹಾಕಿ ವನ್ಯಜೀವಿಗಳು, ಅರಣ್ಯದ ಕುರಿತು ಅರಣ್ಯವಾಸಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ಮೂಲಕ ಅರಣ್ಯಾಧಿಕಾರಿಗಳು ಹಾಗೂ ಅರಣ್ಯವಾಸಿಗಳ ನಡುವೆ ಕಾಣುತ್ತಿರುವ ಜಿದ್ದಾಜಿದ್ದಿಗೆ ಉತ್ತಮ ಬಾಂಧವ್ಯದ ಮೂಲಕ ಇತಿಶ್ರೀ ಹಾಡುವ ಉತ್ತಮ ಪ್ರಯತ್ನ ನಡೆಸಲಾಗಿದೆ.
ಅರಣ್ಯಾಧಿಕಾರಿಗಳ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ: ರಿಷಬ್ ಶೆಟ್ಟಿ
ಅಲ್ಲದೇ, ಸ್ಥಳೀಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು, ಅರಣ್ಯ ಇಲಾಖೆಯ ಅಡೆತಡೆ, ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತರುವ ಆಶ್ವಾಸನೆಯನ್ನು ರಿಷಬ್ ಶೆಟ್ಟಿ ನೀಡಿದರು. ಬೆಳಗ್ಗೆ ಜೊಯಿಡಾಡ ಸ್ಥಳಾಂತರಗೊಂಡ ಊರಾದ ಸುಲಾವಳಿಗೆ ಭೇಟಿ ನೀಡಿ, ತೆರವುಗೊಂಡ ಮನೆಯ ಅವಶೇಷಗಳು, ಪಾಳು ಬಿದ್ದ ಕೃಷಿಭೂಮಿಯನ್ನು ವೀಕ್ಷಿಸಿದರು. ನಂತರ ಪಾತಾಗುಡಿ ಶಾಲೆಗೆ ಭೇಟಿ ನೀಡಿದ ರಿಷಬ್ ಅವರನ್ನು ಪುಟಾಣಿಗಳು ಪುಷ್ಪ ನೀಡಿ ಸ್ವಾಗತಿಸಿದರು. ಈ ವೇಳೆ ಪಾತಾಗುಡಿ ಕಳ್ಳಬೇಟೆ ಶಿಬಿರದಲ್ಲಿ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯೊಂದಿಗೆ ರಿಷಬ್ ಸಂವಾದ ನಡೆಸಿದರು.
ಬಳಿಕ ಡೇರಿಯಾದ ಜಯಾನಂದ ಡೇರೇಕರ ನಿವಾಸದಲ್ಲಿ ಸಾಂಪ್ರದಾಯಿಕ ಊಟ ಸವಿದು, ಬಳಿಕ ಸಸಿ ನೆಡಲಾಯಿತು. ಕುಂಬಾರವಾಡದಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಿಷಬ್ ಶೆಟ್ಟಿ, ಮನುಷ್ಯನ ಅತಿಯಾದ ಸ್ವಾರ್ಥ ವಿನಾಶಕ್ಕೆ ಎಡೆ ಮಾಡಿಕೊಡುತ್ತದೆ. ನಮ್ಮಲ್ಲಿ ಸಮಾನತೆ ಅನ್ನೋದು ಪ್ರಕೃತಿಯಲ್ಲಿಯೂ ಇರಬೇಕು. ಮನುಷ್ಯ ಮತ್ತು ಪ್ರಕೃತಿ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಹೋರಾಟ ಮಾಡ್ತಾ ಮಾಡ್ತಾ ಮನುಷ್ಯ ಸಂಘರ್ಷದಲ್ಲಿ ಗೆಲುವನ್ನು ಬಯಸುತ್ತಾನೆ. ಆದರೆ, ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ. ನಮ್ಮ ಮುಂದಿನ ಪೀಳಿಗೆ ಬದುಕುತ್ತದೆ.
ಈಗಲೇ ನಮಗೆ ಬೇಕಾಗಿರುವಂತ ಕಾಡಿನ ಭಾಗ 33 ಶೇಕಡಾ ಇರಬೇಕಿತ್ತಾದ್ರೂ ಈಗ ಕೇವಲ 22 ರಷ್ಟು ಉಳಿದಿರುವುದರಿಂದ ಕಾಡನ್ನು ರಕ್ಷಿಸಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಅವರು, ಇಲ್ಲಿಯ ಪ್ರಕೃತಿ ಸೌಂದರ್ಯ ನೋಡಿದರೆ ಎಂಥವರಿಗೂ ಖುಷಿಯಾಗುತ್ತದೆ. ಆದರೆ, ಇಂತಹ ಕಾಡಿನ ನಡುವೆ ಜೀವನ ಮಾಡುವುದು ಒಂದು ಸವಾಲು. ಅಂತಹ ಸವಾಲಿನ ನಡುವೆ ನೀವು ಬದುಕುತ್ತಾ, ನಿಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದೀರಿ. ಆ ಕಾರಣಕ್ಕೆ ಸಮಸ್ತ ಕನ್ನಡಿಗರ ಪರವಾಗಿ ನಾನು ನಿಮಗೊಂದು ಧನ್ಯವಾದವನ್ನು ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕಾಳಿ ಹುಲಿ ಯೋಜನಾ ನಿರ್ದೇಶಕ ಬಾಲಚಂದ್ರ , ಸಿಪಿಐ ಮಹಾಂತೇಶ ಹೊಸಪೇಟೆ, ಕುಂಬಾರವಾಡ ಗ್ರಾಮ ಪಂಚಾಯತ ಅಧ್ಯಕ್ಷೆ ವಿಜಯಲಕ್ಷ್ಮಿ ಡೇರೆಕರ್, ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಅಮರಾಕ್ಷರ್ ವಿ.ಎಂ. ಮತ್ತು ಲಿಂಗಾಣಿ ಇವರುಗಳು ಇಲಾಖೆಯ ವಿವಿಧ ಉದ್ದೇಶಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಅತ್ಯುತ್ತಮ ಅರಣ್ಯ ಸ್ನೇಹಿ ಪಂಚಾಯತ್ ಪ್ರಶಸ್ತಿಯನ್ನು ಕಾತೇಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯಲಕ್ಣ್ಮೀ ಡೇರೇಕರ್ ಅವರಿಗೆ ನೀಡಲಾಯಿತು. ಕುಂಬಾರವಾಡದಲ್ಲಿ ಸಾರ್ವಜನಿಕ ಸಭೆ ನಡೆಸಿ ವಲಯ ಅರಣ್ಯಾಧಿಕಾರಿ ಕಚೇರಿ ಬಳಿ ರಿಷಭ್ ಸಸಿ ನೆಟ್ಟರು.
ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ, ವಿವಿಧ ಶಾಲೆಗಳ ಶಿಕ್ಷಕರಿಗೆ ಪಾರಿತೋಷಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ ಪ್ರದರ್ಶನ ಎಲ್ಲರ ಮನ ಸೆಳೆಯಿತು. ಕನ್ನಡಪ್ರಭದ ಪುರವಣಿ ಸಂಪಾದಕ ಜೋಗಿ, ಸಹಾಯಕ ಸಂಪಾದಕ ವಿನೋದಕುಮಾರ ನಾಯ್ಕ, ದಾಂಡೇಲಿ ಎಸಿಎಪ್ ಶಾಂಭಾಜಿ, ಕುಂಬಾರವಾಡ ಆರ್ ಎಫ್ ಓ ಶಶಿಗೌಡ ಪಾಟೀಲ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶ್ವಸಂಸ್ಥೆಯಲ್ಲಿ ಮೊಳಗಲಿದೆ ರಿಷಬ್ ಶೆಟ್ಟಿ ಕನ್ನಡ ಭಾಷಣ: ಕಾಂತಾರ ಚಿತ್ರ, ಪರಿಸರದ ಬಗ್ಗೆ ನುಡಿ!
ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದದಲ್ಲಿ ಮೂಲಸೌಕರ್ಯಕ್ಕೆ ಅರಣ್ಯ ಇಲಾಖೆಯ ಅಡ್ಡಿ, ಅರಣ್ಯವಾಸಿಗಳು ಬೆಳೆಯುವ ಬೆಳೆಗಳಿಗೆ ಉತ್ತಮ ಮಾರುಕಟ್ಟೆಯ ಅಗತ್ಯ ಮುಂತಾದ ಹಲವು ಬೇಡಿಕೆಗಳು ಕೇಳಿ ಬಂತು. ಇದಕ್ಕೆ ಉತ್ತರಿಸಿದ ರಿಷಬ್ ಶೆಟ್ಟಿ, ಇತರ ಜಿಲ್ಲೆಗಳನ್ನು ಉದಾಹರಣೆಯಾಗಿ ನೀಡಿದರಲ್ಲದೇ, ಸಮಸ್ಯೆ ಪರಿಹಾರದ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಒಟ್ಟಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಜೊಯಿಡಾದಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಅರಣ್ಯವಾಸಿಗಳ ಪಾಲಿಗೆ ಆಶಾಕಿರಣವಾಗಿ ಮೂಡಿಬಂತು.