
ವಿಧಾನಸಭೆ (ಜು.11) : ಬಿಜೆಪಿ ಅವಧಿಯ ಭ್ರಷ್ಟಾಚಾರ ಪ್ರಕರಣ, ಆರೋಪಗಳನ್ನು ತನಿಖೆಗೊಳಪಡಿಸಲು ಕ್ರಮ ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಸ್ವಾಗತಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದೇ ರೀತಿ 2013ರಿಂದ ಈವರೆಗಿನ ಭ್ರಷ್ಟಾಚಾರ, ಅಕ್ರಮ ಪ್ರಕರಣಗಳನ್ನೂ ತನಿಖೆಗೊಳಪಡಿಸಲಿ. ಆಗ ಭ್ರಷ್ಟಾಚಾರಕ್ಕೆ ಸಾಂಸ್ಥಿಕ ರೂಪ ನೀಡಿದವರು ಯಾರು ಎಂಬುದು ಬಹಿರಂಗವಾಗುತ್ತದೆ ಎಂದು ಸವಾಲು ಹಾಕಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಳೆದ ಅವಧಿಯ ಹಲವು ಪ್ರಕರಣ, ಆರೋಪಗಳನ್ನು ತನಿಖೆಗೊಳಪಡಿಸಲು ಮುಂದಾಗಿದೆ. ಚಾಜ್‌ರ್‍ಶೀಟ್ ಆಗಿರುವ ಪ್ರಕರಣಗಳನ್ನೂ ಮರುತನಿಖೆಗೆ ಒಳಪಡಿಸಲಾಗುತ್ತಿದೆ. 2013ರಿಂದ 2023ರವರೆಗಿನ ಎಲ್ಲ ಪ್ರಕರಣಗಳನ್ನೂ ತನಿಖೆಗೊಳಪಡಿಸಲಿ. ಅದಕ್ಕಾಗಿ ಆಯೋಗವೊಂದನ್ನು ರಚಿಸಿ. ಸುಮ್ಮನೆ ಹೆದರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಬಜೆಟ್ ವೇಳೆ ಅಪರಿಚಿತ ವ್ಯಕ್ತಿ ಪ್ರವೇಶ: ವಿಧಾನಸೌಧ, ಶಾಸಕರ ಭವನಕ್ಕೆ ಹೈಟೆಕ್ ಭದ್ರತೆ
ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತನಾಡುವವರು ಲೋಕಾಯುಕ್ತವನ್ನು ನಿಷ್ಕಿ್ರಯಗೊಳಿಸಿ, ಎಸಿಬಿ ರಚಿಸಿದರು. ಈಗ ಭ್ರಷ್ಟಾಚಾರ ಸಾಂಸ್ಥಿಕ ರೂಪ ಪಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದಿನ ಅವಧಿಯ ಹಲವು ಪ್ರಕರಣಗಳ ತನಿಖೆಗೆ ಎಸ್‌ಐಟಿ, ಆಯೋಗ ರಚಿಸಲಾಗುತ್ತಿದೆ. ಚಾಜ್‌ರ್‍ಶೀಟ್ ಆಗಿರುವ ಪ್ರಕರಣಗಳನ್ನೂ ತನಿಖೆಗೊಳಪಡಿಸಲಾಗುತ್ತಿದೆ. ಅದು ತಪ್ಪು ಎಂದು ಹೇಳುತ್ತಿಲ್ಲ. ಆದರೆ, ಈ ಮಟ್ಟಿಗೆ ದ್ವೇಷ ಮಾಡುವುದು ಸರಿಯಲ್ಲ ಎಂದರು.
ಎಸಿಬಿ ರಚನೆಯ ಉದ್ದೇಶವೇ ಭ್ರಷ್ಟಾಚಾರ ಪ್ರಕರಣ ಮುಚ್ಚಿಹಾಕಲು ಎಂಬಂತಹ ಅಭಿಪ್ರಾಯವನ್ನು ಹೈಕೋರ್ಚ್ ಹೇಳಿದೆ. ನಿಮ್ಮ ಅವಧಿಯೂ ಸೇರಿದಂತೆ 10 ವರ್ಷಗಳ ಅವಧಿಯಲ್ಲಾಗಿರುವ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೊಳಪಡಿಸಿ. ಅದಕ್ಕಾಗಿ ಪ್ರತ್ಯೇಗ ಆಯೋಗ ರಚಿಸಿ. ಸುಮ್ಮನೆ ‘ವಿಚ್ ಹಂಟಿಂಗ್’ ಮಾಡುವುದನ್ನು ಬಿಡಬೇಕು. ಇನ್ನೊಬ್ಬರ ಮೇಲೆ ಬೆರಳು ಮಾಡಿ ತೋರಿಸುವಾಗ, ಮೂರು ಬೆರಳು ತಮ್ಮತ್ತಲೇ ಇರುತ್ತವೆ ಎಂಬುದನ್ನು ಸರ್ಕಾರ ಅರಿಯಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಅಕ್ಕಿ ಈಗ ಕೇಳೋರಿಲ್ಲ; ಸಿದ್ದರಾಮಯ್ಯ ಕಿಡಿ
ಅಧಿಕಾರಿಗಳಿಂದಲೇ ಹಫ್ತಾ ವಸೂಲಿ:
ರಾಜ್ಯ ಸರ್ಕಾರ ರಚನೆಯಾಗಿ ಎರಡು ತಿಂಗಳಾಗುವುದರೊಳಗೆ ಹಫ್ತಾ ವಸೂಲಿಗೆ ಇಳಿದಿದೆ. ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಮೂಲಕ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಈ ಕುರಿತಂತೆ ಬೀದರ್‌ನ ಆರ್‌ಟಿಒ ನಿರೀಕ್ಷಕ ಪೊಲೀಸರಲ್ಲಿ ದೂರನ್ನು ನೀಡಿದ್ದು, ಆ ಕುರಿತು ಎಫ್‌ಐಆರ್ ಸಹ ದಾಖಲಾಗಿದೆ. ಇದು ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಸರ್ಕಾರವನ್ನು ಪ್ರಶ್ನಿಸುವ ಅಥವಾ ಸರ್ಕಾರಕ್ಕೆ ಧಕ್ಕೆಯಾಗುವಂತಹ ಪ್ರಶ್ನೆಗಳನ್ನು ಕೇಳುವ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಲಾಗುತ್ತಿದೆ. ಮರಳು ದಂಧೆ ತಡೆಯಲು ಮುಂದಾಗುವ ಅಧಿಕಾರಿಯ ಕೊಲೆ ಮಾಡಲಾಗಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ