ಕಾಪ್ಟರ್‌, ವಿಮಾನ, ಐಷಾರಾಮಿ ಕಾರಿಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆ..!

Published : Apr 19, 2023, 02:00 AM IST
ಕಾಪ್ಟರ್‌, ವಿಮಾನ, ಐಷಾರಾಮಿ ಕಾರಿಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆ..!

ಸಾರಾಂಶ

ಈಗಾಗಲೇ ಕೆಲವು ನಾಯಕರು ಚುನಾವಣೆ ಮುಗಿಯುವವರೆಗೆ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಜೊತೆಗೆ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಹೆಲಿಕಾಪ್ಟರ್‌, ಮಿನಿ ಏರ್‌ಕ್ರಾಫ್ಟ್‌ಗಳನ್ನು ಮುಂಗಡ ಕಾಯ್ದಿರಿಸಿದ್ದಾರೆ. 

ಬೆಂಗಳೂರು(ಏ.19): ಸದ್ಯ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಗಳ ರಾಷ್ಟ್ರೀಯ ಹಾಗೂ ಅನ್ಯ ರಾಜ್ಯಗಳ ನಾಯಕರು ಚುನಾವಣಾ ಪ್ರಚಾರಕ್ಕೆ ದಾಂಗುಡಿ ಇಡಲು ಆರಂಭಿಸುತ್ತಿರುವುದರಿಂದ ರಾಜ್ಯದಲ್ಲಿ ಹೆಲಿಕಾಪ್ಟರ್‌, ಮಿನಿ ಏರ್‌ಕ್ರಾಫ್‌್ಟಗಳು ಹಾಗೂ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪ್ರಮುಖ ಪಕ್ಷಗಳ ಘಟಾನುಘಟಿಗಳು ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಮಾಡಲು ಹೆಲಿಕಾಪ್ಟರ್‌ ಮತ್ತಿತರ ವಾಹನಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಕೆಲವು ನಾಯಕರು ಚುನಾವಣೆ ಮುಗಿಯುವವರೆಗೆ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಜೊತೆಗೆ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಹೆಲಿಕಾಪ್ಟರ್‌, ಮಿನಿ ಏರ್‌ಕ್ರಾಫ್ಟ್‌ಗಳನ್ನು ಮುಂಗಡ ಕಾಯ್ದಿರಿಸಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯಗಳ ಏರ್‌ಲೈನ್ಸ್‌ ಸಂಸ್ಥೆಗಳ ಮೂಲಕ ಹೆಲಿಕಾಪ್ಟರ್‌ಗಳನ್ನು ತರಿಸಿಕೊಳ್ಳಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಆಯಕಟ್ಟಿನ ನಗರಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಇರಿಸಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ.

ಬಿಎಸ್‌ವೈ ಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಪ್ರಮಾದ: ಸಮಯಪ್ರಜ್ಞೆ ಮೆರೆದ ಪೈಲಟ್

ಹೊರರಾಜ್ಯದ ಹೆಲಿಕಾಪ್ಟರ್‌ಗಳು:

ರಾಜ್ಯದಲ್ಲಿ ಸದ್ಯ ಜಿಎಂಪಿ ಮತ್ತು ಡೆಕ್ಕನ್‌ ವಿಮಾನಯಾನ ಕಂಪನಿಗಳು ರಾಜಕೀಯ ನಾಯಕರಿಗೆ ಹೆಲಿಕಾಪ್ಟರ್‌ ಬಾಡಿಗೆಗೆ ನೀಡುತ್ತಿವೆ. ರಾಜ್ಯದಲ್ಲಿ ಮಿನಿ ವಿಮಾನಗಳ ಬದಲು ಹೆಲಿಕಾಪ್ಟರ್‌ ಬಳಕೆ ಹೆಚ್ಚಿದೆ. ಆದರೂ, ದೆಹಲಿಯಿಂದ ಬರುವ ನಾಯಕರಿಗೆ ಹೆಲಿಕಾಪ್ಟರ್‌ ಬದಲು ಮಿನಿ ಏರ್‌ಕ್ರಾಫ್‌್ಟಬಳಸಲಾಗುತ್ತಿದೆ. ಹೈದರಾಬಾದ್‌, ದೆಹಲಿ, ಕೋಲ್ಕತಾ, ಕೊಚ್ಚಿ, ರಾಜಸ್ಥಾನ, ಗೋವಾ, ಮಹಾರಾಷ್ಟ್ರಗಳಿಂದಲೂ ಹೆಲಿಕಾಪ್ಟರ್‌ಗಳನ್ನು ತರಿಸಲಾಗಿದೆ. ಈವರೆಗೆ ರಾಜ್ಯಕ್ಕೆ 60ಕ್ಕೂ ಹೆಚ್ಚಿನ ಹೆಲಿಕಾಪ್ಟರ್‌, ಮಿನಿ ಏರ್‌ಕ್ರಾಫ್‌್ಟಗಳನ್ನು ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಡಿಗೆ ಹೆಲಿಕಾಪ್ಟರ್‌ಗಳನ್ನು ಬೆಂಗಳೂರಿನ ಎಚ್‌ಎಎಲ್‌, ಜಕ್ಕೂರು, ವೈಟ್‌ಫೀಲ್ಡ್‌, ಬೀದರ್‌, ಬೆಳಗಾವಿಗಳ ಏರ್‌ಪೋರ್ಚ್‌ ಮತ್ತು ಹೆಲಿಪ್ಯಾಡ್‌ಗಳಲ್ಲಿ ನಿಲುಗಡೆ ಮಾಡಲಾಗಿದೆ. ನಿಲುಗಡೆ ಮಾಡಲಾಗಿರುವ ಹೆಲಿಕಾಪ್ಟರ್‌, ಮಿನಿ ಏರ್‌ಕ್ರಾಫ್‌್ಟಗಳಿಗೆ 8 ಗಂಟೆಯ ಅವಧಿಗೆ 20 ಸಾವಿರ ರು. ಶುಲ್ಕ ನಿಗದಿಗೊಳಿಸಲಾಗಿದೆ. ಮಂಗಳೂರು ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8 ಗಂಟೆಯ ಅವಧಿಗೆ 50 ಸಾವಿರ ರು. ಶುಲ್ಕ ನಿಗದಿಗೊಳಿಸಲಾಗಿದೆ.

ದರ ಹೆಚ್ಚಳ:

ಹೆಲಿಕಾಪ್ಟರ್‌, ಮಿನಿ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಬಾಡಿಗೆ ದರವನ್ನು ಹಾಲಿ ದರಕ್ಕಿಂತ ಶೇ.10ರಷ್ಟುಹೆಚ್ಚಳ ಮಾಡಿವೆ. ಹಾರಾಡುವ ಪ್ರತಿ ಗಂಟೆ ದರವನ್ನೇ ಕಂಪನಿಗಳು ಏರಿಕೆ ಮಾಡಿವೆ. ಬಾಡಿಗೆದಾರರೇ ಹೆಲಿಕಾಪ್ಟರ್‌ ಅಥವಾ ಮಿನಿ ವಿಮಾನ ಹಾರಾಟ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಲ್ಯಾಂಡಿಂಗ್‌ ಮತ್ತು ಟೇಕಾಫ್‌ಗಳು ಹೆಚ್ಚಾದರೂ ಬಾಡಿಗೆ ದರದಲ್ಲಿ ವ್ಯತ್ಯಾಸವಾಗಲಿದೆ. ಆದರೆ, ವಿಮಾನಯಾನ ಕಂಪನಿಗಳು ಕಾಯುವಿಕೆ ಶುಲ್ಕಕ್ಕೆ ವಿನಾಯಿತಿ ನೀಡಿವೆ. ಕಾಯುವಿಕೆ ಅವಧಿಯಲ್ಲಿ ಪೈಲಟ್‌ಗಳ ಊಟೋಪಚಾರದ ವೆಚ್ಚ ಹಾಗೂ ಹೆಲಿಕಾಪ್ಟರ್‌ ಅಥವಾ ವಿಮಾನಗಳ ಪಾರ್ಕಿಂಗ್‌ ಶುಲ್ಕವನ್ನು ಬಾಡಿಗೆದಾರರೇ ಪ್ರತ್ಯೇಕ ಪಾವತಿಸಬೇಕಿದೆ.

ಅದರಲ್ಲೂ ವಿವಿಐಪಿ (ಅತಿಗಣ್ಯರು) ಪ್ರಯಾಣಿಸುವ ಹೆಲಿಕಾಪ್ಟರ್‌ಗಳಿಗೆ ದುಬಾರಿ ಬಾಡಿಗೆ ನಿಗದಿಗೊಳಿಸಲಾಗಿದೆ. ಈ ಹೆಲಿಕಾಪ್ಟರ್‌ಗಳನ್ನು ಒಂದು ದಿನ ಮುಂಚಿತವಾಗಿ ಟ್ರಯಲ್‌ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ ಮಾಡಬೇಕಿರುವುದರಿಂದ ಬಾಡಿಗೆ ಏರಿಸಲಾಗಿದೆ.

ಐಷಾರಾಮಿ ಕಾರುಗಳ ಬಳಕೆ ಹೆಚ್ಚಳ

ಗಣ್ಯರು ಹೆಲಿಪ್ಯಾಡ್‌ನಿಂದ ನಿಗದಿತ ಸ್ಥಳಕ್ಕೆ ಪ್ರಯಾಣಿಸಲು ಐಷಾರಾಮಿ ಕಾರುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೀಗಾಗಿ ವಿಮಾನಯಾನ ಕಂಪನಿಗಳು ಹೆಲಿಕಾಪ್ಟರ್‌ ಜತೆಗೆ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡುತ್ತಿದೆ. ಈ ಬಾರಿ ಅಭ್ಯರ್ಥಿಗಳಿಗೆ 10 ಲಕ್ಷ ರು.ಗಳನ್ನು ಮಾತ್ರ ಪ್ರಯಾಣ ಭತ್ಯೆಯನ್ನಾಗಿ ವೆಚ್ಚ ಮಾಡಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ. ಹೀಗಾಗಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳಿಂದ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯದೆ, ಬೇರೆಯವರ ಮೂಲಕ ಕಾರುಗಳನ್ನು ಬಾಡಿಗೆಗೆ ಪಡೆದು, ಹಣ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ.

ಎಲೆಕ್ಷನ್‌: ಕಾಪ್ಟರ್‌ಗಳಿಗೆ ಕರ್ನಾಟಕದಲ್ಲಿ ಭಾರೀ ಬೇಡಿಕೆ..!

ಚುನಾವಣೆಗಾಗಿ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯುವುದು ಹೆಚ್ಚುತ್ತಿದೆ. ಗಣ್ಯ ವ್ಯಕ್ತಿಗಳನ್ನು ಕರೆತರಲು ಐಷಾರಾಮಿ ಕಾರುಗಳನ್ನು ಬಳಸಲಾಗುತ್ತಿದೆ. ಈ ಬಾರಿ ಅಭ್ಯರ್ಥಿಗಳಿಗೆ ಸಾರಿಗೆ ವೆಚ್ಚಕ್ಕೆ ಮಿತಿ ಹೇರಿರುವ ಕಾರಣ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಂದ ಕಾರುಗಳನ್ನು ಕಾಯ್ದಿರಿಸಲಾಗುತ್ತಿದೆ. ಅದರ ಜತೆಗೆ ಹೆಲಿಕಾಪ್ಟರ್‌, ಮಿನಿ ವಿಮಾನಗಳ ಬಳಕೆಯಲ್ಲೂ ಏರಿಕೆಯಾಗಿದೆ ಅಂತ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ. 

ಬಾಡಿಗೆ ಎಷ್ಟು? (ಪ್ರತಿ ಗಂಟೆಗೆ)

2 ಆಸನದ ಕಾಪ್ಟರ್‌: .2.10 ಲಕ್ಷ
4 ಆಸನದ ಕಾಪ್ಟರ್‌: .2.30 ಲಕ್ಷ
6 ಆಸನದ ಮಿನಿ ವಿಮಾನ: .2.60 ಲಕ್ಷ
8 ಆಸನದ ಮಿನಿ ವಿಮಾನ: .3.50 ಲಕ್ಷ
13 ಆಸನದ ಮಿನಿವಿಮಾನ: .4 ಲಕ್ಷ
15 ಆಸನದ ಮಿನಿ ವಿಮಾನ: .5 ಲಕ್ಷ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌