* ನಿರಂತರ ಮಳೆಯಿಂದಾಗಿ ಆಗುಂಬೆ ಘಾಟ್ ಬಳಿ ಗುಡ್ಡ ಕುಸಿತ
* ಆಗುಂಬೆ ಘಾಟ್ ಮಾರ್ಗ ಸಂಪೂರ್ಣ ಬಂದ್
* ಗುಡ್ಡ ಕುಸಿತದ ಪ್ರದೇಶಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
ಶಿವಮೊಗ್ಗ, (ಜುಲೈ.10): ಆಗುಂಬೆ ಘಾಟ್ ನ ಗುಡ್ಡ ಕುಸಿತದ ಪ್ರದೇಶಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ರಾಷ್ಟ್ರೀಯ ಹೆದ್ದಾರಿ, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗೆ ಭೇಟಿ ನೀಡಿದರು. ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಭೂ ಕುಸಿತವಾಗಿರುವ ಸ್ಥಳದಲ್ಲಿ ಧರೆಗೆ ಉರುಳಿದ ಬಾರಿ ಗಾತ್ರದ ಮರ ಮತ್ತು ಮಣ್ಣಿನ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಶೀಘ್ರ ಗತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಸದ್ಯ ಆಗುಂಬೆ ಘಾಟ್ ಮಾರ್ಗ ಸಂಪೂರ್ಣ ಬಂದ್ ಆಗಿದ್ದು ತಾತ್ಕಾಲಿಕವಾಗಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಮಾರ್ಗವಾಗಿ ಸೋಮೇಶ್ವರ ಕಡೆಗೆ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಅತಿವೃಷ್ಟಿ ಹಾನಿ ಎದುರಿಸಲು ಜಿಲ್ಲಾಡಳಿತದಿಂದ ಕಟ್ಟೆಚ್ಚರ, ಡಿಸಿ ಡಾ.ಸೆಲ್ವಮಣಿ
ಆಗುಂಬೆ ಘಾಟ್ ನ ಮಾರ್ಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತದ ಸಂಭವದ ಹಿನ್ನೆಲೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು ಶಿವಮೊಗ್ಗದಿಂದ ಉಡುಪಿ ಜಿಲ್ಲೆಗೆ ಹುಲಿಕಲ್ ಘಾಟ್ ಮೂಲಕ ಬದಲಿ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ಆಗುಂಬೆ ಘಾಟ್ ಪರಿಶೀಲನೆ ಬಳಿಕ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿ , ಆಗುಂಬೆ ಘಾಟ್ ನಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಸರ್ವೆ ಕಾರ್ಯ ನಡೆಸಿ ರಸ್ತೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಒಂದು ವರ್ಷದೊಳಗೆ ಗುಡ್ಡ ಕುಸಿತದ ಸಂಭವವಿರುವ ಘಟ್ಟದ ರಸ್ತೆಯ ಸಮಸ್ಯೆ ಬಗೆಹರಿಸಲು ಕಾಮಗಾರಿ ನಡೆಸಲಾಗುತ್ತದೆ ಎಂದಿದ್ದಾರೆ.
ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ: ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗೆ ಸೇರಿರುವ ಆಗುಂಬೆ ಘಾಟಿಯಲ್ಲಿ ಇಂದು ಮುಂಜಾನೆ ಗುಡ್ಡಕುಸಿದಿದೆ. ಗುಡ್ಡಕುಸಿತದಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸೋಮೇಶ್ವರದಿಂದ ಬರುವ ನೂರನೇ ತಿರುವಿನಲ್ಲಿ ಇಂದು ಬೆಳ್ಳಂಬೆಳಿಗ್ಗೆನೇ ಗುಡ್ಡ ಕುಸಿತವಾಗಿದೆ. ಸಧ್ಯಕ್ಕೆ ರಸ್ತೆಯ ಮೇಲಿನ ಸಂಚಾರ ಅಸ್ತವ್ಯಸ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ 169 ಎ ಉಡುಪಿ ಶಿವಮೊಗ್ಗ ಆಗುಂಬೆ ಹನ್ನೊಂದನೇ ತಿರುವಿನಲ್ಲಿ ಗುಡ್ಡ ಕುಸಿದು ಮರವೊಂದು ಬುಡಸಮೇತ ಬಿದ್ದಿದ್ದು ಇದರಿಂದ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ.
ರಸ್ತೆಯಲ್ಲಿ ಬಿದ್ದ ಬಾರಿ ಗಾತ್ರದ ಮರವನ್ನು ತೆರವು ಮಾಡುವುದಕ್ಕೆ ಸಾಕಷ್ಟು ಸಮಯ ಬೇಕಾಗಿದೆ. ಇದರಿಂದಾಗಿ ಎಮರ್ಜೆನ್ಸಿ ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸುವ ಅನಿವಾರ್ಯತೆ ಎದುರಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಮರವನ್ನು ತೆರವು ಕಾರ್ಯಕೈಗೊಳ್ಳ ಬೇಕಾಗಿದೆ. ಇಂದು ಬೆಳಗ್ಗೆ 5.30ವೇಳೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಅ ನವೀನ್ ರಾಜ್ ಇತರ ಅಧಿಕಾರಿಗಳು ಆಗುಂಬೆ ಘಾಟಿ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮರವನ್ನು ತೆರವು ಮಾಡುವಲ್ಲಿ ವಿಳಂಬಗತಿ ಅನುಸರಿಸಿರುವುದು ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ದಿಂದ ಉಡುಪಿ, ಮಂಗಳೂರು ಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ನಲ್ಲಿ ಕೂಡಲೇ ಮಣ್ಣು ಕುಸಿತ ದಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳ ಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬದಲಿ ಸಂಚಾರಿ ವ್ಯವಸ್ಥೆ
ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಗುಡ್ಡಕುಸಿತ ಉಂಟಾಗಿರುವ ಹಿನ್ನೆಲೆ ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾಹಿತಿ ನೀಡಿದ್ದಾರೆ.
ಭೂ ಕುಸಿತದ ಮಣ್ಣು ಮತ್ತು ಮರ ತೆರವುಗೊಳಿಸುವ ಕಾರ್ಯಾಚರಣೆ ಮಾಡಲಾಗುತ್ತಿದೆ ಈ ಹಿನ್ನೆಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಜುಲೈ 12ರ ಮುಂಜಾನೆ 8ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಆ ಬಳಿಕ ಜುಲೈ 30ರವರೆಗೆ ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿ ಕೊಡಲಾಗುವುದು.
ಬದಲಿ ಮಾರ್ಗ ಗಳು
1. ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ - ಕಾರ್ಕಳ- ಮಂಗಳೂರು
2. ತೀರ್ಥಹಳ್ಳಿ-ಆಗುಂಬೆ - ಶೃಂಗೇರಿ- ಕಾರ್ಕಳ- ಮಂಗಳೂರು,
3. ತೀರ್ಥಹಳ್ಳಿ-ಮಾಸ್ತಿಕಟ್ಟೆ- ಕುಂದಾಪುರ ಮಾರ್ಗ
ಈ ಮಾರ್ಗಗಳನ್ನು ವಾಹನ ಸಂಚಾರಕ್ಕೆ ಬಳಸುವಂತೆ ವಾಹನ ಚಾಲಕರಿಗೆ ಡಿಸಿ ಸೂಚನೆ ನೀಡಿದ್ದಾರೆ