Booster Dose: 3ನೇ ಡೋಸ್‌ ಪಡೆದಿದ್ದು ಬರೀ 15% ಜನ!

By Govindaraj S  |  First Published Jul 10, 2022, 11:48 AM IST

ರಾಜ್ಯದಲ್ಲಿ ಕೊರೋನಾ ಲಸಿಕೆಯ ಮುನ್ನೆಚ್ಚರಿಕಾ (ಮೂರನೇ) ಡೋಸ್‌ಗೆ ಅರ್ಹತೆ ಪಡೆದವರ ಪೈಕಿ ಶೇ.15ರಷ್ಟು ಮಂದಿ ಮಾತ್ರವೇ ಲಸಿಕೆ ಪಡೆದಿದ್ದು, ಬರೋಬ್ಬರಿ 1.3 ಕೋಟಿ ಮಂದಿ (ಶೇ.85 ರಷ್ಟು) ದೂರ ಉಳಿದಿದ್ದಾರೆ!


ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಜು.10): ರಾಜ್ಯದಲ್ಲಿ ಕೊರೋನಾ ಲಸಿಕೆಯ ಮುನ್ನೆಚ್ಚರಿಕಾ (ಮೂರನೇ) ಡೋಸ್‌ಗೆ ಅರ್ಹತೆ ಪಡೆದವರ ಪೈಕಿ ಶೇ.15ರಷ್ಟು ಮಂದಿ ಮಾತ್ರವೇ ಲಸಿಕೆ ಪಡೆದಿದ್ದು, ಬರೋಬ್ಬರಿ 1.3 ಕೋಟಿ ಮಂದಿ (ಶೇ.85 ರಷ್ಟು) ದೂರ ಉಳಿದಿದ್ದಾರೆ! ಉಚಿತವಾಗಿ ಮೂರನೇ ಡೋಸ್‌ ನೀಡಿದರೂ ಶೇ.30ರಷ್ಟು ಆರೋಗ್ಯ ಕಾರ್ಯಕರ್ತರು, ಶೇ.40ರಷ್ಟು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಹೊಸ ಪ್ರಕರಣಗಳು ಏರಿಕೆಯಾಗುತ್ತಿದ್ದು, ಒಮಿಕ್ರೋನ್‌ ರೂಪಾಂತರಿಯ ಉಪತಳಿಗಳು ಪತ್ತೆಯಾಗಿವೆ. ಈ ನಡುವೆ ಮುನ್ನೆಚ್ಚರಿಕಾ ಡೋಸ್‌ ಅಭಿಯಾನ ಮಂಕಾಗಿರುವುದು ಆತಂಕ ಮೂಡಿಸಿದೆ.

Tap to resize

Latest Videos

ಸದ್ಯ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ1.6 ಕೋಟಿ ಜನರು ಮೂರನೇ ಡೋಸ್‌ಗೆ ಅರ್ಹರಿದ್ದಾರೆ. ಆದರೆ, ಈವರೆಗೂ 26 ಲಕ್ಷ ಮಂದಿ (ಶೇ.15ರಷ್ಟು) ಮಾತ್ರವೇ ಮೂರನೇ ಡೋಸ್‌ ಪಡೆದಿದ್ದಾರೆ. 1.34 ಕೋಟಿ ಮಂದಿ ಎರಡನೇ ಡೋಸ್‌ ಪಡೆದು ಒಂಬತ್ತು ತಿಂಗಳು ಪೂರ್ಣಗೊಂಡಿದ್ದರೂ ಮೂರನೇ ಡೋಸ್‌ ಪಡೆದಿಲ್ಲ. ಅಲ್ಲದೇ, 6.5 ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ 4.71 ಲಕ್ಷ ಮಂದಿ, 7.1 ಲಕ್ಷ ಮುಂಚೂಣಿ ಕಾರ್ಯಕರ್ತರ ಪೈಕಿ 4.4 ಲಕ್ಷ ಮಂದಿ ಮಾತ್ರ ಮೂರನೇ ಡೋಸ್‌ ಪಡೆದಿದ್ದು, ಈ ಎರಡೂ ವಲಯದಲ್ಲಿ ಐದು ಲಕ್ಷ ಮಂದಿ ಇಂದಿಗೂ ಮೂರನೇ ಡೋಸ್‌ನಿಂದ ದೂರ ಉಳಿದಿದ್ದಾರೆ.

ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್‌ ಡೋಸ್‌..!

ಸಂದೇಶಕ್ಕೆ ನಿರ್ಲಕ್ಷ್ಯ: ಮುನ್ನೆಚ್ಚರಿಕಾ ಡೋಸ್‌ ಪಡೆಯುವಂತೆ ಈ ಮೊದಲು ನೋಂದಣಿ ಮಾಡಿದ ಮೊಬೈಲ್‌ ನಂಬರ್‌ಗೆ ಒಂದು ತಿಂಗಳಿಂದ ರಾಜ್ಯದ ಒಂದು ಕೋಟಿಗೂ ಅಧಿಕ ಮಂದಿಗೆ ಸಂದೇಶ ಬಂದಿದ್ದು, ಈ ಪೈಕಿ ಬಹುತೇಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಗ್ರಾಮೀಣ ಭಾಗಕ್ಕೆ ತಲುಪದ ಡೋಸ್‌: ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೊದಲೆರಡು ಡೋಸ್‌ ಲಸಿಕೆ ಉಚಿತವಾಗಿ ಲಭ್ಯವಿದ್ದ ಕಾರಣ ಎಲ್ಲರೂ ಲಸಿಕೆ ಪಡೆದಿದ್ದರು. ಸದ್ಯ ಮೂರನೇ ಡೋಸ್‌ಗೆ ಖಾಸಗಿ ಆಸ್ಪತ್ರೆ ಹುಡುಕಿಕೊಂಡು ನಗರಕ್ಕೆ ಹೋಗಬೇಕಿದೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಬಂದು ಮೂರನೇ ಡೋಸ್‌ ಲಸಿಕೆ ಕೊಡುತ್ತಾರೆಯೇ ಎಂದು ಕೇಳಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ಗ್ರಾಮೀಣ ಭಾಗದ ಆರೋಗ್ಯ ಸಿಬ್ಬಂದಿ.

ಹಿಂದೇಟಿಗೆ ಕಾರಣಗಳೇನು?
*ಮೂರನೇ ಡೋಸ್‌ಗೆ 225 ರು. ಶುಲ್ಕ ನಿಗದಿಪಡಿಸಿರುವುದು
*ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲ; ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಬೇಕು
*ಸೀಮಿತ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ, ನಗರ ಭಾಗಕ್ಕೆ ಸೀಮಿತ
*ಕೊರೋನಾ ಸೋಂಕಿನ ಸಾವು-ನೋವು ತಗ್ಗಿರುವುದು
*ಭವಿಷ್ಯದಲ್ಲಿ ಅಡ್ಡಪರಿಣಾಮ ಬೀರಲಿದೆ ಎಂಬ ಆತಂಕ
*ಮುಂದೆ ಉಚಿತವಾಗಿ ನೀಡಬಹುದು ಎಂಬ ನಿರೀಕ್ಷೆ
*ಸೋಂಕು ಭಾರೀ ಹೆಚ್ಚಾದರೆ ಲಸಿಕೆ ಪಡೆಯೋಣ ಎಂಬ ನಿರ್ಲಕ್ಷ್ಯ

ರಾಜ್ಯದಲ್ಲಿ 11 ಕೋಟಿ ಡೋಸ್‌ ಲಸಿಕೆ: ಮಹತ್ವದ ಮೈಲಿಗಲ್ಲು ದಾಟಿದ ಕೋವಿಡ್‌ ವ್ಯಾಕ್ಸಿನ್‌ ಅಭಿಯಾನ

ಬೂಸ್ಟರ್‌ (2ನೇ) ಡೋಸ್‌ ಲಸಿಕೆ ಸಾಮರ್ಥ್ಯ ಕೇವಲ ಒಂಬತ್ತು ತಿಂಗಳಾಗಿದೆ. ಹೀಗಾಗಿ, ಕೊರೋನಾ ವೈರಾಣು ವಿರುದ್ಧ ರೋಗನಿರೋಧಕ ಶಕ್ತಿ ಉತ್ಪತ್ತಿ ಮಾಡುವ ಜೀವಕೋಶಗಳಿಗೆ ಒಂಬತ್ತು ತಿಂಗಳ ಬಳಿಕ ಮತ್ತೊಂದು ಡೋಸ್‌ ಲಸಿಕೆ ಅವಶ್ಯಕತೆ ಇದೆ. ಸದ್ಯ ಕಾಣಿಸಿಕೊಂಡಿರುವ ಉಪತಳಿಗಳಾದ ಬಿಎ4, ಬಿಎ5 ಸಾಕಷ್ಟುತೀವ್ರವಾಗಿದ್ದು, ಶ್ವಾಸಕೋಶಕ್ಕೆ ದಾಳಿ ಮಾಡಬಹುದು. ಹೀಗಾಗಿ, ಮುನ್ನೆಚ್ಚರಿಕಾ ಡೋಸ್‌ ಅವಶ್ಯಕವಾಗಿದೆ.
-ಡಾ.ವಿಶಾಲ್‌ ರಾವ್‌, ಕೊರೋನಾ ವೈರಾಣು ವಂಶವಾಹಿ ತಜ್ಞರು

click me!