ಗ್ರಾಮ ಪಂಚಾಯತ್ ಚುನಾವಣೆ : ಮತದಾರರಿಗೆ ಮಾಸ್ಕ್ ಕಡ್ಡಾಯ

By Kannadaprabha NewsFirst Published Sep 4, 2020, 8:32 AM IST
Highlights

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕೋವಿಡ್‌-19 ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಂಡು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಚರಣಾ ವಿಧಾನಗಳನ್ನು (ಎಸ್‌ಒಪಿ) ಪ್ರಕಟಿಸಿದೆ.

ಬೆಂಗಳೂರು (ಸೆ.04):  ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಸಜ್ಜಾಗಿರುವ ರಾಜ್ಯ ಚುನಾವಣಾ ಆಯೋಗ, ಕೋವಿಡ್‌-19 ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಂಡು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಚರಣಾ ವಿಧಾನಗಳನ್ನು (ಎಸ್‌ಒಪಿ) ಪ್ರಕಟಿಸಿದೆ.

ರಾಜ್ಯದ 5,800 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ತಜ್ಞರ ಜತೆ ನಡೆಸಿದ ಸಭೆಯಲ್ಲಿ ವ್ಯಕ್ತವಾದ ಸಲಹೆಗಳ ಆಧಾರದ ಮೇಲೆ ಎಸ್‌ಓಪಿ ಅನ್ನು ರಚಿಸಿದೆ.

ಕೊರೋನಾದಿಂದ 11 ದಿನದ ಅಂತರದಲ್ಲಿ ಇಬ್ಬರು ಸಹೋದರರ ಕಳೆದುಕೊಂಡ ಹಿರಿಯ ನಟ ...

ಮತದಾರರು ಸೇರಿ ಚುನಾವಣೆಯಲ್ಲಿ ನಿರತರಾಗಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಥರ್ಮಲ್‌ ಸ್ಯಾನರ್‌ನಿಂದ ಪರೀಕ್ಷಿಸಿಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚುನಾವಣಾ ದಾಸ್ತಾನು ಕೊಠಡಿಯಲ್ಲಿ ಸುರಕ್ಷತೆ ಕಾಪಾಡಬೇಕು. ಚುನಾವಣೆಗೆ ಸಂಬಂಧಿಸಿದ ಫಾರಂಗಳು, ಕವರ್‌ಗಳು ಇತ್ಯಾದಿಗಳನ್ನು ಸೋಂಕು ರಹಿತ ಮಾಡಿದ ಕೊಠಡಿಯಲ್ಲಿಡಬೇಕು. ಚುನಾವಣಾಧಿಕಾರಿಗಳಿಗೆ ತಂಡಗಳನ್ನು ರಚಿಸಿ ಪ್ರತ್ಯೇಕವಾಗಿ ತರಬೇತಿ ನೀಡಬೇಕು. ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸುವ ವೇಳೆ ತಮ್ಮ ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಂಡು ಮುಖಕ್ಕೆ ಮಾಸ್ಕ್‌ ಮತ್ತು ಕೈಗಳಿಗೆ ಗ್ಲೌಸ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಕೋವಿಡ್‌-19 ಪಾಸಿಟಿವ್‌ ಇರುವ ವ್ಯಕ್ತಿಯ ನಾಮಪತ್ರವನ್ನು ಸಲ್ಲಿಸಲು ಇಚ್ಛಿಸಿದ್ದಲ್ಲಿ ಅಂತಹ ವ್ಯಕ್ತಿಗಳು ಸೂಚಕರ ಮೂಲಕ ನಾಮಪತ್ರ ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮ ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಂಡಿರಬೇಕು. ಮಾಸ್ಕ್‌ ಧರಿಸಿರಬೇಕು ಎಂದು ಆಯೋಗ ಸೂಚನೆ ನೀಡಿದೆ.

ಪ್ರಚಾರದಲ್ಲಿ ಅಂತರ:

ಗ್ರಾಮ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿ ಬಹಳ ಚಿಕ್ಕದಿರುವುದರಿಂದ ಗರಿಷ್ಠ ಐದು ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಬಹುದು. ಧ್ವನಿವರ್ಧಕ ಬಳಸುವಂತಿಲ್ಲ. ಆದರೆ ಅಭ್ಯರ್ಥಿಗಳು ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದೆ.

ಮತಕೇಂದ್ರಕ್ಕೆ ಸಿದ್ಧತೆ:  ಮತಗಟ್ಟೆಗೆ ಗರಿಷ್ಠ ಒಂದು ಸಾವಿರ ಮತದಾರರು ಮಾತ್ರ ಇರುವಂತೆ ಮತಗಟ್ಟೆಗಳನ್ನು ಗುರುತಿಸಬೇಕು. ಕೊಠಡಿಯನ್ನು ಮತ್ತು ಅಕ್ಕಪಕ್ಕದ ಕೊಠಡಿಗಳನ್ನು ಶೇ.1ರಷ್ಟುಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣವನ್ನು ಸಿಂಪಡಿಸಿ ಸಿದ್ದಗೊಳಿಸಬೇಕು. ಮತಕೇಂದ್ರದ 200 ಮೀಟರ್‌ ಅಂತರದಲ್ಲಿ ಅಭ್ಯರ್ಥಿಗಳು, ಮತದಾರರಿಗೆ ಗುರುತು ಚೀಟಿ ನೀಡಲು ಸಾಮಾಜಿಕ ಅಂತರ ಕಾಯ್ದುಕೊಂಡು ಟೇಬಲ್‌ಗಳನ್ನು ಹಾಕಿಕೊಳ್ಳಲು ಜಾಗವನ್ನು ಗುರುತಿಸಬೇಕು.

ಮತದಾನದ ಪ್ರಕ್ರಿಯೆ:  ಮತದಾನದ ದಿನದಂದು, ಮತಗಟ್ಟೆಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್‌, ಹ್ಯಾಂಡ್‌ಗ್ಲೌಸ್‌ ಧರಿಸಿರಬೇಕು. ಮತದಾರರು ಸಹ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸರತಿಯಲ್ಲಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮತಕೇಂದ್ರದ ಪ್ರವೇಶ ದ್ವಾರದಲ್ಲಿ ಮತದಾರರ ಜ್ವರ ತಪಾಸಣೆ ಮಾಡಬೇಕು. ಸೊಂಕಿತ ವ್ಯಕ್ತಿಗಳು ಮತ ಚಲಾಯಿಸಲು ಹಕ್ಕುವುಳ್ಳವರಾಗಿದ್ದು, ಆಸ್ಪತ್ರೆಯಲ್ಲಿ ಅಥವಾ ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಗೆ ಅಂಚೆ ಮತಪತ್ರವನ್ನು ನೀಡುವ ಬಗ್ಗೆ ಆಯೋಗವು ಪ್ರತ್ಯೇಕ ಮಾರ್ಗಸೂಚಿ ನೀಡಲಿದೆ.

ಸರಿ​ಯಾದ ಚಿಕಿತ್ಸೆ ಸಿಗು​ತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಸೋಂಕಿತ ಸಾವು

ಮತ ಎಣಿಕೆ ಮೇಲ್ವಿಚಾರಕರನ್ನು ಮತ್ತು ಎಣಿಕೆ ಸಹಾಯಕರನ್ನು ಮೊದಲೇ ನೇಮಕ ಮಾಡಿ ಅವರಿಗೆ ತರಬೇತಿ ಕೋವಿಡ್‌-19ರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಬೆಳಗ್ಗೆ 8 ಗಂಟೆಯೊಳಗೆ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು. ಎಣಿಕೆಯ ನಂತರದ ಸೀಲ್‌ ಮಾಡಲಾದ ಟ್ರಂಕ್‌ಗಳನ್ನು ಉಪಖಜಾನೆ ಅಥವಾ ತಾಲೂಕು ಕಚೇರಿಯ ತಹಶೀಲ್ದಾರ್‌ ಸುಪರ್ದಿಯಲ್ಲಿ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿಡಬೇಕು ಎಂದು ಆಯೋಗತಿಳಿಸಿದೆ.

ವಿಜೇತ ಅಭ್ಯರ್ಥಿಗಳಿಗೆ ದೃಢೀಕರಣ ಪತ್ರವನ್ನು ನೀಡುವಾಗ ಹಸ್ತಲಾಘವ ಮಾಡುವಂತಿಲ್ಲ. ಗುಂಪುಗಳಲ್ಲಿ ವಿಜೇತ ಅಭ್ಯರ್ಥಿಗಳ ವಿಜಯೋತ್ಸವವನ್ನು ಆಚರಿಸುವಂತಿಲ್ಲ ಎಂದು ಆಯೋಗವು ಇದೇ ವೇಳೆ ನಿರ್ದೇಶನ ನೀಡಿದೆ.

click me!