ನೇಮಕಾತಿಯಲ್ಲಿ ಅಕ್ರಮ ಆರೋಪ: ಸಿಎಂ ಕಚೇರಿ ಎದುರು ಸ್ಟಾಫ್‌ ನರ್ಸ್‌ಗಳ ಕಣ್ಣೀರು

By Kannadaprabha NewsFirst Published Sep 4, 2020, 8:24 AM IST
Highlights

ಬಿ.ಎಸ್‌.ಯಡಿಯೂರಪ್ಪ  ಭೇಟಿಗಾಗಿ ಗೃಹ ಕಚೇರಿ ಬಳಿ ಬಂದಿದ್ದ ಸುಮಾರು 20 ಮಂದಿ ಸ್ಟಾಫ್ಟ್‌ ನರ್ಸ್‌ಗಳು| ಈ ಸ್ಟಾಫ್ಟ್‌ ನರ್ಸ್‌ಗಳನ್ನ ಗೇಟ್‌ ಬಳಿಯ ತಡೆದು ಮುಖ್ಯಮಂತ್ರಿ ಭೇಟಿಗೆ ಅವಕಾಶ ನಿರಾಕರಿಸಿದ ಪೊಲೀಸರು| ಕೋವಿಡ್‌ ವಾರಿಯರ್‌ಗಳ ಜೊತೆ ನಾವಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಈಗ ಸಿಎಂ ಭೇಟಿಗೆ ಅವಕಾಶ ನೀಡದೆ ರಸ್ತೆಯಲ್ಲಿ ನಿಲ್ಲಿಸಿದ್ದಾರೆ ಎಂದು ಕಣ್ಣೀರಿಟ್ಟು ಗೋಳಾಡಿದ ಸ್ಟಾಫ್‌ ನರ್ಸ್‌ಗಳು|

ಬೆಂಗಳೂರು(ಸೆ.04): ಸ್ಟಾಫ್‌ ನರ್ಸ್‌ ನೇಮಕಾತಿಯಲ್ಲಿ ಅಕ್ರಮವಾಗಿ ನಡೆದಿದೆ ಎಂದು ಆರೋಪಿಸಿ ಗುತ್ತಿಗೆ ಆಧಾರಿತ ಸ್ಟಾಫ್‌ ನರ್ಸ್‌ಗಳು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಕಣ್ಣೀರಿಟ್ಟ ಘಟನೆ ಗುರುವಾರ ಜರುಗಿದೆ. 

ಸುಮಾರು 20 ಮಂದಿ ಸ್ಟಾಫ್ಟ್‌ ನರ್ಸ್‌ಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಭೇಟಿಗಾಗಿ ಗೃಹ ಕಚೇರಿ ಬಳಿ ಬಂದಿದ್ದರು. ಈ ವೇಳೆ ಅವರನ್ನು ಗೇಟ್‌ ಬಳಿಯ ತಡೆದ ಪೊಲೀಸರು ಮುಖ್ಯಮಂತ್ರಿ ಭೇಟಿಗೆ ಅವಕಾಶ ನಿರಾಕರಿಸಿದರು. ಇದರಿಂದ ಭಾವುಕಾರದ ಸ್ಟಾಫ್‌ ನರ್ಸ್‌ಗಳು, ಕೋವಿಡ್‌ ವಾರಿಯರ್‌ಗಳ ಜೊತೆ ನಾವಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಈಗ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡದೆ ರಸ್ತೆಯಲ್ಲಿ ನಿಲ್ಲಿಸಿದ್ದಾರೆ ಎಂದು ಕಣ್ಣೀರಿಟ್ಟು ಗೋಳಾಡಿದರು.

ಸ್ಟಾಫ್‌ ನರ್ಸ್‌ ಬೇಡಿಕೆ ಈಡೇರಿಕೆಗೆ ಕ್ರಮ: ಡಾ. ಕೆ.ಸುಧಾಕರ್‌ ಭರವಸೆ

ಆರೋಗ್ಯ ಇಲಾಖೆ ಅಡಿ ಕಳೆದ 15-20 ವರ್ಷಗಳಿಂದ ಗುತ್ತಿಗೆ ಆಧಾರದಡಿ 889 ಮಂದಿ ಸ್ಟಾಫ್‌ ನರ್ಸ್‌ಗಳು ರಾಜ್ಯದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಹೋಬಳಿ, ಜಿಲ್ಲಾಸ್ಪತ್ರೆಗಳಲ್ಲಿ ದುಡಿಯುತ್ತಿದ್ದೇವೆ. ಸರ್ಕಾರ 2017ರಲ್ಲಿ ಈ 889 ಮಂದಿಯ ವಿಶೇಷ ನೇರ ನೇಮಕಾತಿಗೆ ಮುಂದಾಗಿತ್ತು. ಈ ವೇಳೆ ನಾವೆಲ್ಲ ಅರ್ಜಿ ಸಲ್ಲಿಸಿದ್ದವು. ಕಳೆದ ಎರಡು ತಿಂಗಳ ಹಿಂದೆ ಪ್ರಕಟವಾದ ನೇಮಕಾತಿ ಪಟ್ಟಿಯಲ್ಲಿ 85 ಮಂದಿ ಹೆಸರು ಕೈ ಬಿಡಲಾಗಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ನರ್ಸಿಂಗ್‌ ಮುಗಿಸಿದವರನ್ನೂ ನೇಮಕಾತಿಗೆ ಪರಿಗಣಿಸಿ ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ದಶಕಗಳಿಂದ ದುಡಿದ ಸ್ಟಾಫ್‌ ನರ್ಸ್‌ಗಳಿಗೆ ಅನ್ಯಾಯವಾಗಿದೆ. ಈ ಸಂಬಂಧ ಆರೋಗ್ಯ ಸಚಿವ, ಆರೋಗ್ಯ ಇಲಾಖೆ ಆಯುಕ್ತ ಸೇರಿದಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ನೇಮಕಾತಿ ಕಾನೂನು ಬಾಹಿರವಾಗಿದ್ದು, ಅಕ್ರಮ ನಡೆದಿದೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ನೊಂದ ಸ್ಟಾಫ್‌ ನರ್ಸ್‌ಗಳು ಒತ್ತಾಯಿಸಿದರು. 
 

click me!