ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ: 5 ಜನ ಸಾವು

By Kannadaprabha NewsFirst Published Oct 25, 2021, 6:11 AM IST
Highlights

*  ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ
*  ನೀರಲ್ಲಿ ಮುಳುಗಿದ ಉಪ್ಪಿನಕಾಯಿ ಕಾರ್ಖಾನೆ
*  ಸಿಡಿಲು ಬಡಿದು 3, ಮನೆ ಚಾವಣಿ ಕುಸಿದು 1 ಸಾವು
 

ಬೆಂಗಳೂರು(ಅ.25):  ರಾಜ್ಯದಲ್ಲಿ(Karnataka) ಭಾರಿ ಮಳೆ ಮುಂದುವರೆದಿದ್ದು, ಐದು ಮಂದಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ಮೂವರು, ಮನೆ ಕುಸಿದು ಒಬ್ಬ ಹಾಗೂ ನೀರಿನಲ್ಲಿ ಕೊಚ್ಚಿಹೋಗಿ ಇನ್ನೊಬ್ಬ ಸಾವನ್ನಪ್ಪಿದ್ದಾರೆ. ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಭಾನುವಾರದ ಬಿರುಮಳೆಗೆ ವಿವಿಧೆಡೆ ಮನೆಯ ಗೋಡೆಗಳು ಕುಸಿದಿವೆ. ಕೋಲಾರದಲ್ಲಿ(Kolar) ಉಪ್ಪಿನಕಾಯಿ ಕಾರ್ಖಾನೆಗೆ ನೀರು ನುಗ್ಗಿ 4 ಕೋಟಿಗೂ ಅಧಿಕ ನಷ್ಟವಾಗಿದೆ. ಚಿಕ್ಕಬಳ್ಳಾಪುರದಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆಗೆ(Rain) ಹಲವು ಕೆರೆಗಳು(Lake) ಕೋಡಿ ಬಿದ್ದಿವೆ. ಬಳ್ಳಾರಿ, ವಿಜಯನಗರ, ಚಿಕ್ಕಮಗಳೂರು, ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ ಭಾನುವಾರ ಕೆಲವೆಡೆ ಸಾಧಾರಣ ಮಳೆಯಾಗಿದೆ.

ರಾಜ್ಯದ ಹಲವೆಡೆ ಭಾರೀ ಮಳೆ: ಸಿಡಿಲಿಗೆ ನಾಲ್ಕು ಬಲಿ

ಸಿಡಿಲಿಗೆ ಮೂರು ಬಲಿ:

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿಯಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು(Lightning Strike) ಸೊನ್ನದ್‌ ಕೆ.ಮಲ್ಲಿಕಾರ್ಜುನಪ್ಪ (40), ಇವರ ಪುತ್ರ ಮೈಲಾರಿ (12), ಉಪ್ಪಾರ ಹನುಮಂತಪ್ಪ (40) ಮೃತಪಟ್ಟಿದ್ದಾರೆ(Death). ಮೆಕ್ಕೆಜೋಳ ತೆರವಾದ ಹೊಲದಲ್ಲಿ ಕುರಿ(Sheep) ಮೇಯಿಸುತ್ತಿದ್ದರು. ಸಂಜೆ 4ಕ್ಕೆ ಗುಡುಗು, ಸಿಡಿಲಿನೊಂದಿಗೆ ಮಳೆ ಶುರುವಾಗಿತ್ತು. ಇವರು ಮಳೆಯಿಂದ ರಕ್ಷಣೆ ಪಡೆಯಲು ಹೊಲದ ದಿಬ್ಬದ ಹತ್ತಿರ ನಿಂತಿರುವಾಗ ಸಿಡಿಲು ಅಪ್ಪಳಿಸಿದೆ. ಎರಡೂ ಕುರಿಗಳು ಮೃತಪಟ್ಟಿವೆ.

ಹಳ್ಳದಲ್ಲಿ ಕೊಚ್ಚಿ ಹೋದ ರೈತ:

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ರೈತ ಬುಡ್ನೆಸಾಬ ಅಗಸಿಮುಂದಿನ (65) ಶನಿವಾರ ಸಂಜೆ ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ. ಚಾಕ್ರಿ ಹಳ್ಳವನ್ನು ಬುಡ್ನೇಸಾಬ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಎತ್ತು ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಎತ್ತುಗಳು ಈಜಿ ದಡ ಸೇರಿ ಮನೆ ತಲುಪಿವೆ. ಪೊದೆಯಲ್ಲಿ ರೈತನ(Farmer) ಶವ ಸಿಕ್ಕಿದೆ.(Deadbody)

ಚಾವಣಿ ಕುಸಿದು ಸಾವು:

ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕುಂಬಳಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ, ಚಾವಣಿ ಕುಸಿದು ರಾಮಕೃಷ್ಣ (55) ಸಾವನ್ನಪ್ಪಿದ್ದಾರೆ. ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಚಾವಣಿ ಸೇರಿದಂತೆ ಗೋಡೆ ಕುಸಿದಿದೆ. ಮನೆಯಲ್ಲಿ ಮಲಗಿದ್ದ ರಾಮಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಂಬಂಧಿಕರ ಮನೆಗೆ ಹೋದ ತಂದೆ ಮಗನಿಗೆ ನೈಸ್ ರೋಡ್ ನಲ್ಲಿ ಕಾದಿತ್ತು ಸಿಡಿಲಿನ ಮೃತ್ಯು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯೊಂದಿಗೆ ಮಿಂಚು-ಗುಡುಗು ಅಬ್ಬರವೂ ಇತ್ತು. ಅಂಕೋಲಾ, ಕುಮಟಾ, ಹೊನ್ನಾವರ, ಜೋಯಿಡಾಗಳಲ್ಲಿ ಭಾನುವಾರ ನಸುಕಿನಲ್ಲಿ ಮಳೆಯಾಗಿದೆ. ಭತ್ತ ತೆನೆ ಬಿಡುವ ಹಂತದಲ್ಲಿದ್ದು ಮಳೆಯಿಂದ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.

ಗೋಡೆ ಕುಸಿತ:

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ 3 ಮಣ್ಣಿನ ಮನೆಗಳು ಕುಸಿದಿವೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಮಳೆಗೆ ಮನೆ ಕುಸಿದು ಬಿದ್ದಿದೆ.

ಉಪ್ಪಿನಕಾಯಿ ಕಾರ್ಖಾನೆಗೆ ನುಗ್ಗಿದ ನೀರು:

ಕೋಲಾರ ಜಿಲ್ಲೆಯ ನರಸಾಪುರದ ಕೈಗಾರಿಕಾ ಪ್ರಾಂಗಣದ ಸುತ್ತಮುತ್ತ ಶನಿವಾರ ಮಧ್ಯರಾತ್ರಿಯ ನಂತರ ಸುರಿದ ಮಳೆಗೆ ಕೋಲ್‌ಮನ್‌ ಉಪ್ಪಿನಕಾಯಿ ಕಾರ್ಖಾನೆಗೆ ನೀರು ನುಗ್ಗಿ ಸುಮಾರು .4 ಕೋಟಿ ನಷ್ಟಉಂಟಾಗಿದೆ. ಇಲ್ಲಿ ತಯಾರಿಸುವ ಉಪ್ಪಿನಕಾಯಿ ವಿದೇಶಗಳಿಗೆ ರಫ್ತಾಗುತ್ತದೆ. ಮಳೆಯ ನೀರು ಕಾರ್ಖಾನೆಯ ಗೋಡೆಗೆ ಅಪ್ಪಳಿಸಿರುವುದರಿಂದ ಗೋಡೆಗಳು ಕುಸಿದಿವೆ. ಕಾರ್ಖಾನೆ(Factory) ಒಳಗೂ ನೀರು 5 ಅಡಿ ನಿಂತಿದೆ. ಎಲ್ಲ ಯಂತ್ರಗಳೂ ನೀರಿನಲ್ಲಿ ಮುಳುಗಿವೆ.

ಚಿಕ್ಕಬಳ್ಳಾಪುರ ತತ್ತರ:

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ನಗರದ ಹೊರ ವಲಯದ ರಂಗಸ್ಥಳ ಸಮೀಪ ಇರುವ ರಂಗಧಾಮ ಕೆರೆ ಮಳೆಗೆ ತುಂಬಿ ಕೋಡಿ ಹರಿದಿದೆ. ಇದರಿಂದ ಪ್ರತಿಷ್ಠಿತ ಡಿವೈಎನ್‌ ಸಿಟಿಗೆ ನುಗ್ಗಿ ಜನರ ನಿದ್ದೆಗೆಡಿಸಿದೆ. ಗೌರಿಬಿದನೂರು ರಸ್ತೆಯಲ್ಲಿ ಬರೋಬ್ಬರಿ 1 ಕಿ.ಮೀ.ನಷ್ಟುರಸ್ತೆಯೇ ಜಲಾವೃತಗೊಂಡಿತ್ತು. ಚಿಕ್ಕಬಳ್ಳಾಪುರದ ನಗರದ ಜೈಭೀಮ್‌ ನಗರ, ಸುಮಾರು 300ಕ್ಕೂ ಹೆಚ್ಚು ಮನೆಗಳು ಪ್ರದೇಶದಲ್ಲಿದ್ದು ಮಳೆ ನೀರು ನುಗ್ಗಿದೆ.

ಕೋಡಿ ಬಿದ್ದ ಕೆರೆಗಳು:

ಚಿತ್ರದುರ್ಗ ಜಿಲ್ಲಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಾರೀಕೆರೆ ಗ್ರಾಮದ ಕೆರೆ ಭಾನುವಾರ ಮುಂಜಾನೆ ಕೋಡಿ ಬಿದ್ದಿದೆ. ಇದರಿಂದ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಭರ್ಗಾವತಿ ಕೆರೆ, ಗೌರಮ್ಮನ ಕೆರೆ ತುಂಬಿ ಕೋಡಿ ಬಿದ್ದು ಜನರಲ್ಲಿ ಮಂದಹಾಸ ಮೂಡಿದರೆ ಕೆಲ ಮನೆಗಳಿಗೆ ನೀರು ತುಂಬಿ ನಾಗರಿಕರು ತತ್ತರಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ 20 ಕೇಜಿ ಆಲಿಕಲ್ಲು

ಕೊಪ್ಪಳ ಜಿಲ್ಲೆಯ ಕಲವೆಡೆ ಶನಿವಾರ ರಾತ್ರಿ ಹಾಗೂ ಭಾನುವಾರ ಭಾರಿ ಮಳೆ ಸುರಿದಿದೆ. ಯಲುಬರ್ಗಾ ತಾಲೂಕಿನ ಮುದ್ಲೂರು ಹಾಗೂ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಬೃಹತ್‌ ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಸುಮಾರು 20 ಕೇಜಿ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಜನರು ಆತಂಕಗೊಂಡಿದ್ದಾರೆ. ಮಳೆಯ ಅಬ್ಬರಕ್ಕೆ ಮರ-ಗಿಡಗಳು ಧರೆಗುರುಳಿವೆ. ಕಟಾವಿಗೆ ಬಂದಿರುವ ಭತ್ತ ನೆಲಕಚ್ಚಿದೆ.
 

click me!