ಪಂಚಮಸಾಲಿಗೆ ಮೀಸಲು ನೀಡದಂತೆ ಸರ್ಕಾರಕ್ಕೆ ಎಚ್ಚರಿಕೆ

By Kannadaprabha News  |  First Published Oct 24, 2021, 9:20 AM IST

*  ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮಠಾಧೀಶರ ಸಭೆ
*  ಬಲಿಷ್ಠ ವೀರಶೈವರಿಗೆ ಮೀಸಲು ನೀಡಿದರೆ ಹೋರಾಟ: ದ್ವಾರಕಾನಾಥ್‌
*  ಅವಕಾಶ ವಂಚಿತ ಸಮುದಾಯಗಳನ್ನು ಪ್ರತಿನಿಧಿಸುವುದು ನಮ್ಮ ವೇದಿಕೆಯ ಉದ್ದೇಶ


ಬೆಂಗಳೂರು(ಅ.24):  ತಮ್ಮನ್ನು ಹಿಂದುಳಿದ ವರ್ಗಗಳ ಪ್ರವರ್ಗ 2(ಎ)ಗೆ ಸೇರಿಸಬೇಕೆಂದು ಬಲಿಷ್ಠ ವೀರಶೈವ ಪಂಚಮಸಾಲಿ(Panchamasali) ಸಮುದಾಯದವರು ನಡೆಸುತ್ತಿರುವ ಒತ್ತಡಕ್ಕೆ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯಬಾರದು. ಮಣಿದರೆ ಸರ್ಕಾರಕ್ಕೆ ಬಿಸಿ ತಟ್ಟದೆ ಇರುವುದಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ ಎಸ್‌.ದ್ವಾರಕಾನಾಥ್‌(Dr CS Dwarakanath) ಎಚ್ಚರಿಸಿದ್ದಾರೆ.

ಪಂಚಮಸಾಲಿಗಳ ಮೀಸಲು(Reservation) ಹೋರಾಟವನ್ನು ವಿರೋಧಿಸಿ ಪ್ರತಿ ಹೋರಾಟ ರೂಪಿಸಿರುವ ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’ ಶನಿವಾರ ಕುಮಾರಕೃಪ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ರಾಜ್ಯದ(Karnataka) ಅತಿ ಹಿಂದುಳಿದ ಜನಾಂಗದ ಮಠಾಧೀಶರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Latest Videos

undefined

ವೀರಶೈವ ಪಂಚಮಸಾಲಿ ಸಮಾಜದ ಪೀಠಾಧಿಪತಿಗಳು(Swamjiis) ಈ ಹೋರಾಟದ ಮುಂಚೂಣಿಯಲ್ಲಿರುವುದು ದುರದೃಷ್ಟಕರ. ಇವರ ಹಿಂದೆ ಪ್ರಬಲ ಸಮುದಾಯದ ಉದ್ಯಮಿಗಳು, ರಾಜಕಾರಣಿಗಳು(Politicians) ಬಲಿಷ್ಠ ಸಂಘಟಕರಿದ್ದಾರೆ. ಪ್ರವರ್ಗ 1ರಲ್ಲಿರುವ 95 ಹಾಗೂ ಪ್ರವರ್ಗ 2(ಎ)ದಲ್ಲಿರುವ 102 ಸಮುದಾಯಗಳು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ದುರ್ಬಲವಾಗಿವೆ ಎಂಬುದನ್ನು ಮನಗಂಡು ಈ ದಬ್ಬಾಳಿಕೆಗೆ ಮುಂದಾಗಿದ್ದಾರೆ. ಇದಕ್ಕೆ ಮಣಿದರೆ ಸರ್ಕಾರಕ್ಕೆ(Government) ಬಿಸಿ ಮುಟ್ಟಿಸದೇ ಇರುವುದಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಬಲಶಾಲಿಯಾಗಿರುವ ಪಂಚಮಸಾಲಿ ಸಮುದಾಯದಲ್ಲಿ ಭೂಮಾಲಿಕರು, ದೊಡ್ಡಮಟ್ಟದ ಕೃಷಿಕರು, ಮುಂಚೂಣಿ ಕೈಗಾರಿಕೋದ್ಯಮಿಗಳು, ಪ್ರಬಲ ರಾಜಕಾರಣಿಗಳಿದ್ದಾರೆ. ಈ ಸಮುದಾಯದವರನ್ನು ಕುಶಲಕರ್ಮಿ ಹಾಗೂ ಕುಲವೃತ್ತಿಗಳನ್ನು ನಂಬಿ ಬದುಕುತ್ತಿರುವ ಹಿಂದುಳಿದ ಸಮುದಾಯದ ಜತೆ ಸೇರಿಸುವುದು ದೊಡ್ಡ ಅನ್ಯಾಯ ಎಂದರು.

ಮಾಜಿ ಸಿಎಂಗಳಿಂದ ಪಂಚಮಸಾಲಿಗೆ ಅನ್ಯಾಯ: ಸ್ವಪಕ್ಷದವರ ವಿರುದ್ಧ ಗುಡುಗಿದ ಯತ್ನಾಳ್‌

ಪ್ರತಿ ಹೋರಾಟ ವೇದಿಕೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಂ.ಸಿ ವೇಣುಗೋಪಾಲ್‌ ಮಾತನಾಡಿ, ತಮಗೆ ಎದುರಾಗುತ್ತಿರುವ ಅಪಾಯವನ್ನು ಮನಗಂಡು ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’ ಹೋರಾಟಗಳನ್ನು ಹಮ್ಮಿಕೊಂಡು ರಾಜ್ಯಾದ್ಯಂತ ಪ್ರವಾಸವನ್ನೂ ಮಾಡುತ್ತಿದೆ. ಮುಖ್ಯಮಂತ್ರಿ(Chief Minister), ಸಚಿವರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲ ಪ್ರಮುಖರಿಗೂ ಅಹವಾಲು ನೀಡಲಾಗಿದೆ ಎಂದರು.

ಅವಕಾಶ ವಂಚಿತ ಸಮುದಾಯಗಳನ್ನು ಪ್ರತಿನಿಧಿಸುವುದು ನಮ್ಮ ವೇದಿಕೆಯ ಉದ್ದೇಶವಾಗಿದೆ. ಪ್ರವರ್ಗ 1 ರಲ್ಲಿರುವ 95 ಜಾತಿಗಳು, ಪ್ರವರ್ಗ 2ರಲ್ಲಿರುವ 102 ಜಾತಿಗಳು ಈಗಿರುವ ಮೀಸಲಾತಿಯಲ್ಲೇ ಬಹಳ ಅನ್ಯಾಯವಾಗಿದೆ. ಪಂಚಮಸಾಲಿಗಳ ಬೇಡಿಕೆ ಪರಿಶೀಲಿಸಲು ನೇಮಿಸಿರುವ ನ್ಯಾಯಮೂರ್ತಿ ಸುಭಾಷ್‌ ಅಡಿ ಸಮಿತಿಯು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದೆ. ಪಂಚಮಸಾಲಿಗಳ ಹೋರಾಟ ತಡೆಯದೇ ಇದ್ದರೆ ಅತಿ ಹಿಂದುಳಿದ ಸಮುದಾಯಕ್ಕೆ ಅತ್ಯಂದ ದೊಡ್ಡ ಪೆಟ್ಟು ಬೀಳುತ್ತದೆ. ಹಾಗಾಗಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಒಗ್ಗೂಡಿ ಸರ್ಕಾರದ ಮೇಲೆ ಪ್ರತಿ ಒತ್ತಡ ಹೇರಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಹೊಸದುರ್ಗದ ಚಿನ್ಮೂಲಾದ್ರಿ ಭಗೀರಥ (ಉಪ್ಪಾರ) ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಗಿರಿ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಶಿಮೊಗ್ಗದ ಹುಂಚನಕಟ್ಟೆ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಮಹಾಸ್ವಾಮೀಜಿ ಸೇರಿದಂತೆ ಹಿಂದುಳಿದ ಸಮುದಾಯಗಳ ಹತ್ತಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು, ವೇದಿಕೆಯ ಉಪಾಧ್ಯಕ್ಷ ರಮೇಶ್‌ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

click me!