ಹಿರಿಯ ಯಕ್ಷಗಾನ ಕಲಾವಿದ ಹಾಗೂ ತಾಳಮದ್ದಳೆ ಅರ್ಥಧಾರಿ ಕುಂಬ್ಳೆ ಶ್ರೀಧರ್ ರಾವ್ (76) ಅವರು ಹೃದಯಾಘಾತಕ್ಕೀಡಾಗಿ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪುತ್ತೂರು/ ಉಪ್ಪಿನಂಗಡಿ (ಜು.06): ಹಿರಿಯ ಯಕ್ಷಗಾನ ಕಲಾವಿದ ಹಾಗೂ ತಾಳಮದ್ದಳೆ ಅರ್ಥಧಾರಿ ಕುಂಬ್ಳೆ ಶ್ರೀಧರ್ ರಾವ್ (76) ಅವರು ಹೃದಯಾಘಾತಕ್ಕೀಡಾಗಿ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶ್ರೀಧರ್ ರಾವ್ ಅವರಿಗೆ ಶುಕ್ರವಾರ ಬೆಳಗ್ಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು, ಮನೆಯಲ್ಲಿಯೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು.
ಮೂಲತಃ ಕಾಸರಗೋಡು ಜಿಲ್ಲೆಯ ಕುಂಬಳೆಯವರಾದ ಇವರು ಪುತ್ತೂರು ತಾಲೂಕಿನ ಬೇರಿಕೆ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮೃತರು ನಿವೃತ್ತ ಶಿಕ್ಷಕಿ ಪತ್ನಿ ಸುಲೋಚನಾ, ಪುತ್ರರಾದ ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್ ಮತ್ತು ದೇವಿಪ್ರಸಾದ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾದ್ರೂ ಜೆಡಿಎಸ್ ಬೆಂಬಲ!
6 ದಶಕಕ್ಕೂ ಮಿಕ್ಕಿ ಕಲಾ ಸೇವೆ: ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಆರು ದಶಕಕ್ಕೂ ಮಿಕ್ಕಿ ಕಲಾ ಸೇವೆ ಮಾಡಿದ್ದ ಶ್ರೀಧರ್ ರಾವ್ ಅವರು ಧರ್ಮಸ್ಥಳ ಮೇಳದಲ್ಲಿ ನಿರಂತರ 50 ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿದ್ದರು. ಪುರುಷ ಮತ್ತು ಸ್ತ್ರೀ ವೇಷ ಎರಡರಲ್ಲೂ ಪ್ರಸಿದ್ಧರಾಗಿದ್ದರು. ಈಶ್ವರ, ಸೀತೆ, ಲಕ್ಷ್ಮಣ, ಲಕ್ಷ್ಮೀ, ವಿಷ್ಣು, ದಮಯಂತಿ, ಭೀಷ್ಮ, ಅಂಬೆ, ದೇವಿ ಮಹಾತ್ಮೆಯ ದೇವಿ ಮೊದಲಾದ ಪಾತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಶ್ರೀಧರ್ ರಾವ್ , ಅಮ್ಮು ಬಳ್ಳಾಲ್ತಿ, ದಾಕ್ಷಾಯಿಣಿ, ಲಕ್ಷ್ಮಿ ಸುಭದ್ರೆಯ ಪಾತ್ರದ ಮೂಲಕವೂ ಅಪಾರ ಅಭಿಮಾನಿಗಳನ್ನು ಪಡೆದಿದ್ದರು. ಅದರಲ್ಲೂ ದಾಕ್ಷಾಯಿಣಿ, ಸುಭದ್ರೆ, ದೌಪದಿ, ಅಮ್ಮುದೇವಿ ಮೊದಲಾದ ಸ್ತ್ರೀ ಪಾತ್ರಗಳು ಅವರಿಗೆ ಅಪಾರ ಖ್ಯಾತಿಯನ್ನು ತಂದು ಕೊಟ್ಟಿದ್ದವು.
ಕೊರಗ ಶೆಟ್ರ ಇರಾ ಮೇಳದ ಮೂಲಕ ಯಕ್ಷ ಪಯಣ ಆರಂಭಿಸಿದ್ದ ಶ್ರೀಧರ ರಾವ್, ಯಕ್ಷಗಾನ ದಿಗ್ಗಜ ಶೇಣಿಯವರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿಯಾಗಿ, ತಾರೆಯಾಗಿ ಸಾಥ್ ನೀಡಿದ್ದರು. ಕೀರ್ತಿಶೇಷರಾದ ಡಾ. ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಶಂಕರ ನಾರಾಯಣ ಸಾಮಗ ಸಹಿತ ಹಲವು ಹಿರಿಯರ ಒಡನಾಟದಲ್ಲಿದ್ದವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಎಡನೀರು ಮಠದ ಸನ್ಮಾನ ಸೇರಿದಂತೆ ಹಲವು ಸನ್ಮಾನ ಗೌರವಗಳನ್ನು ಇವರು ಪಡೆದುಕೊಂಡಿದ್ದರು.
ಡಿ.ಕೆ.ಸುರೇಶ್ ಸೋಲಿಂದ ಕ್ಷೇತ್ರದ ಜನರಿಗೆ ಪಶ್ಚಾತ್ತಾಪ: ಶಾಸಕ ಎಚ್.ಸಿ.ಬಾಲಕೃಷ್ಣ
ಇತ್ತೀಚೆಗಷ್ಟೇ ಬೆಂಗಳೂರಿನ ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಜಸ್ಟೀಸ್ ಕೆ.ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಯುಕ್ತ ಕೊಡ ಮಾಡುವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಕೊಡ ಮಾಡುವ ದಶಮಾನೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಧರ್ಮಸ್ಥಳ ಮೇಳದ ಪ್ರದರ್ಶನಗಳಲ್ಲಿ ಸ್ತ್ರೀ ಪಾತ್ರಕ್ಕೆ ಪ್ರತ್ಯೇಕವಾದ ಸ್ವಂತಿಕೆಯ ಛಾಪನ್ನು ಒತ್ತಿದ್ದ ಇವರು ತಾಳಮದ್ದಳೆ ಅರ್ಥದಾರಿಯೂ ಆಗಿದ್ದರು.