ನನ್ನ ಪುತ್ರ ರೇಣುಕಾಸ್ವಾಮಿ ಯಾರಿಗಾದರೂ ಅಶ್ಲೀಲ ಮೆಸೇಜ್ ಕಳುಹಿಸಿದ್ದರೆ ಅದಕ್ಕೆ ಸಂಬಂಧಿಸಿ ಮೊದಲೇ ಹೇಳಿದ್ದರೆ ಶಿಕ್ಷೆ ಕೊಡಿಸಬಹುದಿತ್ತು ಎಂದು ತಾಯಿ ರತ್ನಪ್ರಭ ಹೇಳಿದರು.
ಚಿತ್ರದುರ್ಗ (ಜು.06): ನನ್ನ ಪುತ್ರ ರೇಣುಕಾಸ್ವಾಮಿ ಯಾರಿಗಾದರೂ ಅಶ್ಲೀಲ ಮೆಸೇಜ್ ಕಳುಹಿಸಿದ್ದರೆ ಅದಕ್ಕೆ ಸಂಬಂಧಿಸಿ ಮೊದಲೇ ಹೇಳಿದ್ದರೆ ಶಿಕ್ಷೆ ಕೊಡಿಸಬಹುದಿತ್ತು ಎಂದು ತಾಯಿ ರತ್ನಪ್ರಭ ಹೇಳಿದರು. ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ತಮಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ಕೆಲ ಸೆಲೆಬ್ರಿಟಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದರು. ‘ಆತ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ಈಗ ಯಾಕೆ ಹೇಳುತ್ತಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ. ಮೊದಲೇ ಹೇಳಿದ್ದರೆ ಶಿಕ್ಷೆ ಕೊಡಿಸಬಹುದಿತ್ತು’ ಎಂದರು.
ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಅವರ ತಾಯಿ, ಕುಟುಂಬಸ್ಥರು ಹೋಗುತ್ತಿದ್ದಾರೆ. ನಾವು ನಮ್ಮ ಮಗನ ಭೇಟಿ ಮಾಡಲು ಸಾಧ್ಯವೇ? ಎಂದು ನೋವು ತೋಡಿಕೊಂಡ ಅವರು, ವೃದ್ಧರಾದ ನಮಗೆ ಪುತ್ರ ಮಣ್ಣು ಹಾಕಬೇಕಿತ್ತು. ಆದರೆ ನಮ್ಮ ಕಣ್ಣ ಮುಂದೆಯೇ ಪುತ್ರ ಕಣ್ಮರೆಯಾದರೆ ಶೋಕ ಯಾರ ಬಳಿ ಹಂಚಿಕೊಳ್ಳಲಿ. ನಾವು ಸಾಯೋತನಕ ಮಗನನ್ನು ನೋಡಲಾರೆವು ಎಂದರು. ಇದೇ ವೇಳೆ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮಾತನಾಡಿ, ನಟ ದರ್ಶನ್ ನೋಡಲು ಕುಟುಂಬಸ್ಥರು ಜೈಲಿಗೆ ಹೋಗುತ್ತಿದ್ದಾರೆ.
ಅಂಥ ತಂದೆಯ ಮುಖವನ್ನು ಆ ಮಗು ನೋಡದಿರುವುದೇ ಒಳ್ಳೆಯದು: ದರ್ಶನ್ ಸರ್ ನನ್ನ Inspiration ಎಂದ ತನಿಷಾ ಕುಪ್ಪಂಡ!
ನಾವು ಮಗನನ್ನು ನೋಡಲು ಎಲ್ಲಿಗೆ ಹೋಗಬೇಕು? ನಮ್ಮ ಸಂಕಟ ಏನೆಂಬುದು ನಮಗಷ್ಟೇ ಗೊತ್ತು. ಅಶ್ಲೀಲ ಮೆಸೇಜ್ ಬಗ್ಗೆ ಪೊಲೀಸರಿಗೆ ದೂರು ನೀಡಿ ಮಗನಿಗೆ ಶಿಕ್ಷೆ ಆಗಿದ್ದರೆ ಸ್ವೀಕರಿಸುತ್ತಿದ್ದೆವು. ಆದರೆ ಇಂತಹ ಅಮಾನುಷ ಕೊಲೆ ಮುಂದೆಂದೂ ಘಟಿಸಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು. ನಮ್ಮ ಮನೆಗೆ ಆಧಾರ ಸ್ತಂಭವಾಗಿದ್ದ ಮಗನೇ ಇಲ್ಲವಾಗಿದ್ದಾನೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿ. ನನ್ನ ಸೊಸೆಗೆ ಸರ್ಕಾರ ನೌಕರಿ ಕೊಡಲಿ ಎಂದು ಮನವಿ ಮಾಡಿದರು.