ಬರ ಪೀಡಿತ ಎಂದು ಘೋಷಿಸುವ ಸಂಬಂಧ ಕೇಂದ್ರದ ಮಾನದಂಡದ ಮಾರ್ಗಸೂಚಿಯ ಅಡಿಯಲ್ಲಿ ಬರುವ 161 ತಾಲ್ಲೂಕು ಸೇರಿದಂತೆ ಮಳೆಯ ಕೊರತೆ ಇದ್ದರೂ "ಸಾಧಾರಣ" ಬರ ಸ್ಥಿತಿ ಇರುವ 34 ತಾಲ್ಲೂಕುಗಳನ್ನು ಸಹ ಬರ ಪೀಡಿತ ಎಂದು ಘೋಷಿಸುವಂತೆ ರಾಜ್ಯ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.
ಬೆಂಗಳೂರು(ಸೆ.14): ರಾಜ್ಯದಲ್ಲಿ ತೀವ್ರ ಮಳೆಯ ಕೊರತೆ ಎದುರಿಸುತ್ತಿರುವ 195 ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಿಸುವಂತೆ ಸಂಪುಟ ಉಪಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ವಿಧಾನಸೌಧದಲ್ಲಿ ಬುಧವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಮಳೆಯಿಂದ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿಯ ಬಗ್ಗೆ ನಡೆಸಿದ ವಿಸ್ತೃತ ಸಮೀಕ್ಷೆಯ ಮಾಹಿತಿಯ ವರದಿ ಪರಿಶೀಲಿಸಲಾಯಿತು. ಬರ ಪೀಡಿತ ಎಂದು ಘೋಷಿಸುವ ಸಂಬಂಧ ಕೇಂದ್ರದ ಮಾನದಂಡದ ಮಾರ್ಗಸೂಚಿಯ ಅಡಿಯಲ್ಲಿ ಬರುವ 161 ತಾಲ್ಲೂಕು ಸೇರಿದಂತೆ ಮಳೆಯ ಕೊರತೆ ಇದ್ದರೂ "ಸಾಧಾರಣ" ಬರ ಸ್ಥಿತಿ ಇರುವ 34 ತಾಲ್ಲೂಕುಗಳನ್ನು ಸಹ ಬರ ಪೀಡಿತ ಎಂದು ಘೋಷಿಸುವಂತೆ ರಾಜ್ಯ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.
ಬರಗಾಲದ ಎಫೆಕ್ಟ್: ಬೆಂಗ್ಳೂರಿನತ್ತ ಕೆಲಸ ಅರಸಿ ಹೊರಟ ಜನ, ರೈಲು ಫುಲ್ ರಶ್..!
ಈ ಶಿಫಾರಸು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಪೀಡಿತ ತಾಲೂಕುಗಳ ಘೋಷಣೆ ಶೀಘ್ರವೇ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಸಮೀಕ್ಷೆ ಆಧರಿಸಿ ಘೋಷಣೆ:
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಕೃಷ್ಣ ಬೈರೇಗೌಡ ಅವರು,ಮಳೆಯ ಕೊರತೆ, ಬೆಳೆ ಸಮೀಕ್ಷೆ, ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ಅಂಶಗಳ ಆಧಾರದ ಮೇಲೆ ತಾಲ್ಲೂಕುವಾರು ಸಮೀಕ್ಷೆ ನಡೆಸಿದ ನಂತರ ಬಂದ ವರದಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. 40 ತಾಲ್ಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಇದ್ದರೂ ಸಹ ಉಪಗ್ರಹ ಚಿತ್ರದಲ್ಲಿ ಹಸಿರಿನ ವಾತಾವರಣ ಹಾಗೂ ತೇವಾಂಶದ ಕೊರತೆ ಕಂಡು ಬಂದಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಈ ಲಕ್ಷಣಗಳು ಕಂಡು ಬಂದಲ್ಲಿ ಬರ ಪೀಡಿತ ಎಂದು ಘೋಷಿಸಲು ಬರುವುದಿಲ್ಲ. ಆದರೂ ಮುಂದಿನ 15 ದಿನ ಮತ್ತೊಮ್ಮೆ ಸಮೀಕ್ಷೆ ಮಾಡಿ, ಬರ ಸ್ಥಿತಿ ಕಂಡು ಬಂದರೆ ಹೆಚ್ಚುವರಿ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಅಕ್ಟೋಬರ್ ಅಂತ್ಯಕ್ಕೆ ಮತ್ತೊಂದು ಬಾರಿ ಸಮೀಕ್ಷೆ ಮಾಡಿ ಯಾವುದೇ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಕಂಡು ಬಂದಲ್ಲಿ ಕೇಂದ್ರಕ್ಕೆ ಮತ್ತೊಂದು ಪಟ್ಟಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಮುಂದಿನ 15 ದಿನದಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಕೇಂದಕ್ಕೆ ವಿಸ್ತೃತವಾದ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬರಪೀಡಿತ ಪ್ರದೇಶಗಳಲ್ಲಿ ಏನು ಕಾರ್ಯ:
ಜೊತೆಗೆ ಬರಪೀಡಿತ ಎಂದು ಘೋಷಿಸಿದ ತಾಲ್ಲೂಕುಗಳಲ್ಲಿ ವಿವಿಧ ರೀತಿಯ ಬರ ಪರಿಹಾರ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಬರ ನಿರ್ವಹಣೆಗೆ ಕಾರ್ಯಪಡೆ ರಚನೆ,ಟ್ಯಾಂಕರ್ ಮೂಲಕ ನೀರು ಪೂರೈಕೆ, ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸುವ ಕೆಲಸ ಮಾಡಲಾಗುವುದು. ಇದಕ್ಕೆ ಬೇಕಾದ ಹಣವನ್ನು ಎಸ್‌ಡಿಆರ್‌ಎಫ್ ನಿಧಿಯಿಂದ ಬಳಕೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.
ಮೇವು ಬೆಳೆಯಲು ಬಿತ್ತನೆ ಬೀಜವನ್ನು ಉಚಿತವಾಗಿ ನೀಡಲು ಈಗಾಗಲೇ 20 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಭತ್ತ, ಮೆಕ್ಕೆಜೋಳ ಕಟಾವಿನ ವೇಳೆ ಮೇವು ಸಂಗ್ರಹಣೆ ದಾಸ್ತಾನು ಮಾಡಿಕೊಳ್ಳುವಂತೆ ಮಾರ್ಗಸೂಚಿ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರ ಪೀಡಿತ ಎಂದು ಘೋಷಣೆಯಾದ ನಂತರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನಗಳನ್ನು 100ರಿಂದ 150 ದಿನಕ್ಕೆ ಹೆಚ್ಚಿಸಲಾಗುವುದು ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.
ಜಿಲ್ಲಾಡಳಿತದ ಬಳಿ ಹಣ:
ಬರ ಪರಿಹಾರ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಬಳಿ 492 ಕೋಟಿ ರು. ಇದೆ.ಕಂದಾಯ ಇಲಾಖೆ ಬಳಿ ಸುಮಾರು 400 ಕೋಟಿ ರು. ಇದೆ. ಮುಖ್ಯಮಂತ್ರಿಗಳು ಅಗತ್ಯವಿದ್ದಷ್ಟು ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಬಳಿ ತುರ್ತು ಕಾರ್ಯಗಳಿಗೆ 7 ಕೋಟಿ ರು. ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬರ ಪೀಡಿತ ಎಂದು ಘೋಷಿಸುವ ಮಾರ್ಗಸೂಚಿ ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಬರದಿರುವ ಪತ್ರಕ್ಕೆ ಈವರೆಗೆ ಉತ್ತರ ಬಂದಿಲ್ಲ. ಹೀಗಾಗಿ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ಸಚಿವರು ಹೇಳಿದರು.
ಬರಗಾಲ ಘೋಷಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಪ್ರಿಯಾಂಕ್ ಖರ್ಗೆ, ಎನ್.ಚಲುವರಾಯಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂದಿನ ಪ್ರಕ್ರಿಯೆ ಏನು?
- ಸಂಪುಟ ಉಪಸಮಿತಿ ಶಿಫಾರಸಿನ ಬಗ್ಗೆ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ
- ಸಚಿವ ಸಂಪುಟ ಸಭೆಯಲ್ಲಿ ಒಟ್ಟು ಎಷ್ಟು ತಾಲೂಕುಗಳು ಬರಪೀಡಿತ ಎಂಬ ಬಗ್ಗೆ ಅಂತಿಮ ನಿರ್ಧಾರ
- ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬರಪೀಡಿತ ತಾಲೂಕುಗಳ ಪಟ್ಟಿ ಅಂತಿಮ ಘೋಷಣೆ
- ರಾಜ್ಯ ಸರ್ಕಾರ ನಿರ್ಧರಿಸಿದ ಬರಪೀಡಿತ ತಾಲೂಕುಗಳ ಅಂತಿಮ ಪಟ್ಟಿ ಕೇಂದ್ರ ಸರ್ಕಾರಕ್ಕೆ ರವಾನೆ
- ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸರ್ಕಾರದಿಂದ ತಜ್ಞರ ತಂಡ ಆಗಮನ, ಪರಿಶೀಲನೆ
- ತಜ್ಞರ ತಂಡದಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ: ಬಳಿಕ ಕೇಂದ್ರದಿಂದ ಅಂತಿಮ ಪಟ್ಟಿ ಪ್ರಕಟ
- ಕೇಂದ್ರ ಸರ್ಕಾರ ಒಪ್ಪಿಕೊಂಡ ಬರಪೀಡಿತ ಪ್ರದೇಶಗಳಲ್ಲಿನ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ
ಬರಪೀಡಿತ ತಾಲೂಕು ಘೋಷಿಸಿದರೆ ಏನಾಗುತ್ತೆ?
- ಬರಪೀಡಿತ ತಾಲೂಕುಗಳಲ್ಲಿ ಸರ್ಕಾರದಿಂದ ವಿವಿಧ ರೀತಿಯ ಬರ ಪರಿಹಾರ ಕಾರ್ಯಾಚರಣೆ
- ಬರ ನಿರ್ವಹಣೆಗೆ ಆಯಾ ಜಿಲ್ಲೆ ಅಥವಾ ತಾಲೂಕುಗಳಲ್ಲಿ ಕಾರ್ಯಪಡೆ (ಟಾಸ್ಕ್‌ಫೋರ್ಸ್) ರಚನೆ
- ಟ್ಯಾಂಕರ್ ಮೂಲಕ ಹಾಗೂ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಕುಡಿಯುವ ನೀರು ಪೂರೈಕೆ
- ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ನಿಧಿಯಿಂದ ಹಣ ಬಳಕೆ
- ಜಾನುವಾರುಗಳಿಗೆ ಮೇವು ಬೆಳೆಯಲು ರೈತರಿಗೆ ಬಿತ್ತನೆ ಬೀಜ ಉಚಿತವಾಗಿ ನೀಡಿಕೆ
- ಭತ್ತ, ಮೆಕ್ಕೆಜೋಳ ಕಟಾವಿನ ವೇಳೆ ಮೇವು ಸಂಗ್ರಹಣೆ ದಾಸ್ತಾನು ಮಾಡಲು ಸರ್ಕಾರ ನೆರವು
- ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನಗಳ ಸಂಖ್ಯೆ 100ರಿಂದ 150 ದಿನಕ್ಕೆ ಹೆಚ್ಚಳ
- ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಅಡಿ ರೈತರಿಗೆ ಬೆಳೆ ನಷ್ಟಕ್ಕೆ ಆರ್ಥಿಕ ಪರಿಹಾರ ವಿತರಣೆ