
ಬೆಂಗಳೂರು (ಸೆ.14): ರಸ್ತೆ ಬದಿ ಚಿಕನ್ ಕಬಾಬ್ ಮಾರುವನನ್ನು ಕೇಂದ್ರ ಬಿಜೆಪಿ ನಾಯಕ ಎಂದು ಬಿಂಬಿಸಿ ಉದ್ಯಮಿಗೆ ಹಿಂದುತ್ವವಾದಿ ಚೈತ್ರಾ ಗ್ಯಾಂಗ್ ಟೋಪಿ ಹಾಕಿದ್ದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರ್‌ಎಸ್‌ಎಸ್ ಪ್ರಚಾರ ವಿಶ್ವನಾಥ್ ಜೀ ಎಂಬಾತನನ್ನು ನಂಬಿ ಹಣ ಕಳೆದುಕೊಂಡ ಬಳಿಕ ಎಚ್ಚೆತ್ತ ಗೋವಿಂದ ಬಾಬು ಪೂಜಾರಿ ಅವರು, ಆ ವಿಶ್ವನಾಥ್ ಮೂಲ ಪತ್ತೆಗೆ ಹೋದಾಗ ನಿಜರೂಪ ತಿಳಿದು ಗಾಬರಿಗೊಂಡಿದ್ದಾರೆ.
ಚಿಕ್ಕಮಗಳೂರಿನ ಸ್ಥಳೀಯ ಹಿಂದೂಪರ ಸಂಘಟನೆ ಕಾರ್ಯಕರ್ತ ರಮೇಶ್‌ನನ್ನು ಉತ್ತರ ಭಾರತದ ಆರ್‌ಎಸ್‌ಎಸ್ ಪ್ರಚಾರಕನೆಂದು ಹಾಗೂ ಬೆಂಗಳೂರಿನ ಕೆ.ಆರ್.ಪುರದಲ್ಲಿ ಚಿಕನ್ ಕಬಾಬ್ ಅಂಗಡಿ ಇಟ್ಟಿರುವ ನಾಯ್ಕ್ ನನ್ನು ಕೇಂದ್ರ ಬಿಜೆಪಿ ನಾಯಕ ಎಂದು ಚೈತ್ರಾ ಗ್ಯಾಂಗ್ ಬಿಂಬಿಸಿದ್ದ ಸಂಗತಿ ಪೂಜಾರಿ ಅವರಿಗೆ ಗೊತ್ತಾಗಿದೆ.
ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಟಿಂಗ್ ಶಾಪ್ ಮಾಲೀಕ
ಗುಟ್ಟು ರಟ್ಟಾಗಿದ್ದು ಹೇಗೆ?: ಆರ್‌ಎಸ್‌ಎಸ್ ಪ್ರಚಾರಕ ವಿಶ್ವನಾಥ್ ಬಗ್ಗೆ ತಮ್ಮ ಪರಿಚಿತ ಚಿಕ್ಕಮಗಳೂರಿನ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತ ಮಂಜು ಅವರ ಬಳಿ ಪೂಜಾರಿ ವಿಚಾರಿಸಿದ್ದಾರೆ. ಆಗ ಕಡೂರಿನ ಸಲೂಲ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಆರ್‌ಎಸ್‌ಎಸ್ ಪ್ರಚಾರಕನ ರೀತಿ ಹೇರ್ ಕಟ್ ಮಾಡಿಸಿ ಮೇಕಪ್ ಮಾಡಿಸಿಕೊಂಡಿದ್ದರು ಎಂದು ಪೂಜಾರಿ ಅವರಿಗೆ ಮಂಜು ತಿಳಿಸಿದ್ದರು. ಈ ಸಂಗತಿ ಗೊತ್ತಾದ ಕೂಡಲೇ ಪೂಜಾರಿ ಅವರು, ಆರ್‌ಎಸ್‌ಎಸ್ ಪ್ರಚಾರಕನ ವೇಷಧಾರಿಯಾಗಿದ್ದ ರಮೇಶ್‌ನನ್ನು ಪತ್ತೆ ಹಚ್ಚಿದ್ದಾರೆ.
ಬಳಿಕ ಆತನನ್ನು ವಿಚಾರಿಸಿದಾಗ ತನಗೆ 1.20 ಲಕ್ಷ ರು ಹಣ ನೀಡಿ ಆರ್‌ಎಸ್ಎಸ್ ಪ್ರಚಾರಕ ವಿಶ್ವನಾಥ್ ರೀತಿ ವೇಷ ಬದಲಿಸುವಂತೆ ತಿಳಿಸಿದ್ದರು. ಅಲ್ಲದೆ ಆರ್‌ಎಸ್‌ಎಸ್ ಪ್ರಚಾರಕನ ನಡವಳಿಕೆ ಬಗ್ಗೆ ಆತನಿಗೆ ಚೈತ್ರಾ ಹಾಗೂ ಗಗನ್ ತರಬೇತಿ ಸಹ ಕೊಟ್ಟಿದ್ದರು. ಇನ್ನು ರಮೇಶ್ ಜತೆ ಓಡಾಡುವಂತೆ ಧನರಾಜ್‌ಗೆ ಸಹ 1.20 ಲಕ್ಷ ಕೊಟ್ಟಿದ್ದರು ಎಂದು ದೂರಿನಲ್ಲಿ ಪೂಜಾರಿ ವಿವರಿಸಿದ್ದಾರೆ. ಬಳಿಕ ಧನರಾಜ್‌ನನ್ನು ಬಿಜೆಪಿ ಕೇಂದ್ರೀಯ ನಾಯಕನ ಬಗ್ಗೆ ಪೂಜಾರಿ ವಿಚಾರಿಸಿದಾಗ ಆತನ ಮುಖವಾಡ ಸಹ ಕಳಚಿ ಬಿದ್ದಿದೆ.
ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಕೆ.ಆರ್.ಪುರದಲ್ಲಿ ರಸ್ತೆಬದಿ ಚಿಕನ್ ಕಬಾಬ್ ಮಾರಾಟಗಾರ ನಾಯ್ಕ್‌ನೇ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾಗಿರುವ ನಾಯಕನ ಪಾತ್ರಧಾರಿಯಾಗಿದ್ದ. ಆತನಿಗೆ 93 ಸಾವಿರ ರು ಹಣ ಕೊಟ್ಟು ಬಿಜೆಪಿ ಕೇಂದ್ರ ನಾಯಕನ ಪಾತ್ರ ಮಾಡುವಂತೆ ಚೈತ್ರಾ ಹಾಗೂ ಗಗನ್ ಒಪ್ಪಿಸಿದ್ದರು. ನಟನೆ ಮುಗಿದ ಮೇಲೆ ಇದನ್ನು ಎಲ್ಲಿಯಾದರೂ ಬಾಯಿಬಿಟ್ಟರೇ ಕೊಲೆ ಮಾಡಿಸುತ್ತೇವೆ. ನಮಗೆ ಗೊತ್ತಿರುವ ಜಡ್ಜ್‌ಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿರುವಂತೆ ತೀರ್ಪು ಕೊಡಿಸುವುದಾಗಿ ನಾಯ್ಕ್‌ಗೆ ಚೈತ್ರಾ ಮತ್ತು ಗಗನ್ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಪೂಜಾರಿ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ