82 ಲಕ್ಷ ಹೆಕ್ಟೇರ್ ಬದಲಿಗೆ 69 ಲಕ್ಷ ಹೆಕ್ಟೇರಲ್ಲಿ ಮಾತ್ರ ಬಿತ್ತನೆ, ಏಕದಳ, ದ್ವಿದಳ, ವಾಣಿಜ್ಯ ಬೆಳೆಗಳ ಬಿತ್ತನೆ ಕುಂಠಿತ , ಇಳುವರಿಯೂ ಕುಸಿಯುವ ಭೀತಿ, ರಾಜ್ಯಾದ್ಯಂತ ಒಟ್ಟು ಶೇ.15ರಷ್ಟು ಬಿತ್ತನೆ ಪ್ರಮಾಣ ಕುಂಠಿತ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಸೆ.14): ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ ಕುಂಠಿತವಾಗಿದೆ. ಕೃಷಿ ಇಲಾಖೆಯು 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿತ್ತಾದರೂ 69.84 ಲಕ್ಷ ಹೆಕ್ಟೇರ್ (ಶೇ.85)ನಲ್ಲಷ್ಟೇ ಬಿತ್ತನೆಯಾಗಿದೆ. ಅಂದರೆ ಬಿತ್ತನೆ ಶೇ.15 ಕುಂಠಿತವಾಗಿದೆ.
ಮಳೆ ಕೈಕೊಟ್ಟಿದ್ದರಿಂದ ಆಹಾರ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಸಕಾಲಕ್ಕೆ ಮಳೆ ಬಾರದಿರುವುದರಿಂದ ಬಿತ್ತಿರುವ ಬೆಳೆಗಳ ಬೆಳವಣಿಗೆಯೂ ಕುಂಠಿತವಾಗಿದೆ. ಇದರಿಂದಾಗಿ ಕಾಳುಕಟ್ಟುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು ಇಳುವರಿಯೂ ಕುಂಠಿತವಾಗುವ ಆತಂಕ ಇದೆ.
ಮಳೆಯಿಲ್ಲದೇ ಕಂಗೆಟ್ಟ ಅನ್ನದಾತ: ಕೋಲಾರದಲ್ಲಿ ಆವರಿಸಿದ ಬರದ ಛಾಯೆ !
ಯಾವ ಬೆಳೆಯಲ್ಲೂ ಗುರಿ ಮುಟ್ಟಿಲ್ಲ:
729 ಮಿಮೀ ವಾಡಿಕೆ ಮಳೆ ಬದಲು 547 ಮಿಮೀ ಮಾತ್ರ ಈ ಮುಂಗಾರು ಹಂಗಾಮಿನಲ್ಲಿ ಈವರೆಗೆ ಮಳೆ ಸುರಿದಿದೆ. ಪರಿಣಾಮ, 35.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ ಮತ್ತಿತರ ಏಕದಳ ಧಾನ್ಯಗಳನ್ನು ಬಿತ್ತುವ ಗುರಿ ಹೊಂದಿದ್ದರೂ 30.47 ಲಕ್ಷ ಹೆಕ್ಟೇರ್(ಶೇ.86)ನಲ್ಲಷ್ಟೇ ಬಿತ್ತನೆಯಾಗಿದೆ. ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ ಮತ್ತಿತರ ದ್ವಿದಳ ಧಾನ್ಯಗಳನ್ನು 57.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಬೇಕಿತ್ತಾದರೂ ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ 47.23 ಲಕ್ಷ ಹೆಕ್ಟೇರ್ (ಶೇ.82)ನಲ್ಲಷ್ಟೇ ಬಿತ್ತನೆಯಾಗಿದೆ.
ಬಿತ್ತನೆ ವಿಫಲವಾದರೆ ಶೇ.25ರಷ್ಟು ವಿಮೆ ಪರಿಹಾರ
ಶೇಂಗಾ, ಎಳ್ಳು, ಸೂರ್ಯಕಾಂತಿ, ಸಾಸಿವೆ ಸೇರಿದಂತೆ ಎಣ್ಣೆಕಾಳುಗಳ ಬಿತ್ತನೆ ಪ್ರಮಾಣ ಶೇ.81ರಷ್ಟು ಮಾತ್ರ ಇದೆ. ಹತ್ತಿ, ಕಬ್ಬು, ತಂಬಾಕು, ಮತ್ತಿತರ ವಾಣಿಜ್ಯ ಬೆಳೆಗಳ ಬಿತ್ತನೆಯಲ್ಲೂ ಹಿನ್ನಡೆ ಉಂಟಾಗಿದೆ. ರಾಜ್ಯದಲ್ಲಿ ಒಟ್ಟಾರೆ ನೀರಾವರಿ ಆಶ್ರಿತದಲ್ಲಿ 23.88 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಗೆ ಬದಲಾಗಿ 20.75 ಲಕ್ಷ ಹೆಕ್ಟೇರ್ ಹಾಗೂ ಮಳೆಯಾಶ್ರಿತದಲ್ಲಿ 58.47 ಲಕ್ಷ ಹೆಕ್ಟೇರ್ ಬಿತ್ತನೆಗೆ ಬದಲಾಗಿ 49.09 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಒಟ್ಟಾರೆ ನೋಡಿದರೆ, ಹಿಂದಿನ ಕೆಲ ವರ್ಷಗಳ ವಾಡಿಕೆ ಬಿತ್ತನೆ ವಿಸ್ತೀರ್ಣದ ಗುರಿಯನ್ನೂ ಮುಟ್ಟಲಾಗಿಲ್ಲ.
ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕಡಿಮೆ ಬಿತ್ತನೆ
ಕೋಲಾರ (ಶೇ.35 ಬಿತ್ತನೆ), ಚಿಕ್ಕಬಳ್ಳಾಪುರ (ಶೇ.51) ಸೇರಿದಂತೆ ಬಹಳ ಜಿಲ್ಲೆಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಮಂಡ್ಯ (ಶೇ.53), ರಾಮನಗರ (ಶೇ.56), ಗದಗ (ಶೇ.66), ಚಾಮರಾಜನಗರ (ಶೇ.69) ಮತ್ತಿತರ ಜಿಲ್ಲೆಗಳಲ್ಲಿ ಬಿತ್ತನೆಗೆ ಗಣನೀಯ ಹಿನ್ನಡೆಯಾಗಿದೆ. ವಿಜಯನಗರ ಜಿಲ್ಲೆಯೊಂದರಲ್ಲಿ ಮಾತ್ರ ನಿರೀಕ್ಷೆಗೂ ಮೀರಿ (ಶೇ.101) ಬಿತ್ತನೆಯಾಗಿದೆ. ಬೀದರ್, ದಕ್ಷಿಣ ಕನ್ನಡ, ಹಾವೇರಿ, ಉತ್ತರ ಕನ್ನಡ (ಶೇ.100) ಜಿಲ್ಲೆಗಳಲ್ಲಿ ಮಾತ್ರ ನಿಗದಿತ ಗುರಿ ಸಾಧಿಸಲಾಗಿದೆ.