
ಶೇಷಮೂರ್ತಿ ಅವಧಾನಿ
ಕಲಬುರಗಿ (ಮೇ.3): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕಳೆದ ಬಾರಿಗಿಂತಲೂ 1 ಸ್ಥಾನ ಕೆಳಕ್ಕೆ ಕುಸಿದು ರಾಜ್ಯಕ್ಕೆ ಕೊಟ್ಟ ಕೊನೆಯ 35 ನೇ ಸ್ಥಾನ ಪಡೆದುಕೊಂಡಿದೆ.
ಕಲಬುರಗಿ ಕಲ್ಯಾಣ ನಾಡಿನ ಹೆಬ್ಬಾಗಿಲು. ಈ ಜಿಲ್ಲೆಯ ಫಲಿತಾಂಶವೇ ಕುಸಿತ ಕಂಡಿದ್ದಲ್ಲದೆ, ರಾಜ್ಯದಲ್ಲೇ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿರೋದು ಜಿಲ್ಲಾದ್ಯಂತ ಶೈಕ್ಷಣಿಕ ವಲಯದಲ್ಲಿ ವ್ಯಾಪಾಕ ಚರ್ಚೆಗೆ ಗ್ರಾಸವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆಗೆ ಕುಳಿತಿದ್ದ 39, 257 ವಿದ್ಯಾರ್ಥಿಗಳ ಪೈಕಿ ಕೇವಲ 16, 658 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯ ಫಲಿತಾಂಶ ಒಟ್ಟಾರೆಯಾಗಿ ಶೇ. 42. 43 ರಷ್ಟು ಆಗಿದೆ. ಈ ಶೇಕಡಾವಾರು ಸಾಧನೆ ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲೇ ಕೊನೆಯ ಸ್ಥಾನವಾಗಿದೆ.
ಇದನ್ನೂ ಓದಿ: SSLC Result 2025: ಶೇ.62.34 ಮಕ್ಕಳು ಉತ್ತೀರ್ಣ, ದಕ್ಷಿಣ ಕನ್ನಡ ಫಸ್ಟ್, ಕಲಬುರ್ಗಿ ಲಾಸ್ಟ್!
2024 ರಲ್ಲಿ ಕಲಬುರಗಿ ಜಿಲ್ಲೆಯು ಶೇ. 34. 35 ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲೇ 34 ನೇ ಸ್ಥಾನದಲ್ಲಿತ್ತು. ಈ ಬಾರಿ ಮತ್ತೂ 1 ಸ್ಥಾನ ಕುಸಿಯುವ ಮೂಲಕ ಶೈಕ್ಷಣಿಕವಾಗಿ ಜಿಲ್ಲೆಯ ಸಾಧನೆ ಪಾತಾಳ ಸೇರಿದತಾಂಗಿದೆ. 2023 ರಲ್ಲಿ ಜಿಲ್ಲೆಯ ಸ್ಥಾನಮಾನ ಪರವಾಗಿಲ್ಲ ಎಂಬಂತೆ 29 ರಷ್ಟಿತ್ತು. ಅದ್ಯಾಕೋ 2025 ರಲ್ಲಿ ಕಲಬುರಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಎಲ್ಲರಲ್ಲೂ ದಿಗಿಲು ಮೂಡಿಸಿದೆ.
ಯಾಕೆ ಹೀಗೆ?
ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಪರಿ ಕುಸಿತಕ್ಕೇನು ಕಾರಣ ಏನು ಎಂಬ ಚರ್ಚೆಗಳು ಎಲ್ಲೆಡೆ ಸಾಗಿವೆ. ಫಲಿತಾಂಶ ವೃದ್ದಿಗಾಗಿ ಕಲಿಕಾಸರೆ ಎಂಬ ಪುಸ್ತಕಗಳನ್ನು 8 ನೇ ತರಗತಿಯಿಂದಲೇ ನೀಡುತ್ತ ಮಕ್ಕಳಲ್ಲಿನ ಗ್ರಹಿಕೆ ಶಕ್ತಿ ಹೆಚ್ಚಿಸುವ ಯೋಜನೆ ರೂಪಿಸಲಾಗಿತ್ತಲ್ಲದೆ ಹೆಚ್ಚುವರಿ ಬೋಧನೆ ಮೂಲಕ ಫಲಿತಾಂಶ ವೃದ್ದಿಗೆ ಶ್ರಮಿಸಲಾಗಿತ್ತು.
ಇದಲ್ಲದೆ ಇಲ್ಲಿನ ಕೆಕೆಆರ್‌ಡಿಬಿಯಿಂದಲೂ ಅಕ್ಷರ ಆವಿಷ್ಕಾರ ಯೋಜನೆಯಡಿಯಲ್ಲಿ ಶಾಲಾ ಮೂಲ ಸೌಕರ್ಯ ಸುಧಾರಣೆಗೆ ಒತ್ತು ನೀಡಲಾಗಿತ್ತಲ್ಲದೆ ಶಿಕ್ಷಕರ ಕೊರತೆ ನೀಗಿಸಲು ಅಕ್ಷರ ಮಿತ್ರ ಯೋಜನೆಯಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿ ಶಿಕ್ಷಕರ ಕೊರತೆ ನೀಗಿಸಲಾಗಿತ್ತು. ಆದರೆ ಇಷ್ಟೆಲ್ಲ ಪರಿಶ್ರಮಪಟ್ಟರೂ ಅದ್ಯಾವುದು ಫಲಿತಾಂಶ ಹೆಚ್ಚಳಕ್ಕೆ ಪೂರಕವಾಗಿ ನಿಂತಿಲ್ಲ.
ಫಲಿತಾಂಶ ವೃದ್ದಿಗಾಗಿ ಅನೇಕ ಕ್ರಮಗಳೊಂದಿಗೆ ಮುಂದಡಿ ಇಟ್ಟಿದ್ದರಿಂದ, ಈ ಬಾರಿ 25 ರೊಳಗೆ ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣದ ಜಿಲ್ಲೆಗಳು ಸೇರಿಕೊಳ್ಳಬಹುದೆಂದು ನಿರೀಕ್ಷೆಯಿತ್ತಾದರೂ ಹಾಗಾಗಿಲ್ಲ. ಫಲಿತಾಂಶದಲ್ಲಿ ವಿಜಯನಗರ (19 ನೇ ಸ್ಥಾನ) ಜಿಲ್ಲೆ ಹೊರತುಪಡಿಸಿ ಕಲಬುರಗಿ ಒಳಗೊಂಡು ಕಲ್ಯಾಣದ ಎಲ್ಲಾ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿ ಪೈಪೋಟಿಗಿಳಿದಿರೋದು ಕಟು ವಾಸ್ತವ.
ಇದೀಗ ಕೆಕೆಆರ್‌ಡಿಬಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ತಜ್ಞರನ್ನೊಳಗೊಂಡ ಶಿಕ್ಷಣ ಸಮಿತಿ ರಚಿಸುವ ಮೂಲಕ ಕಲ್ಯಾಣದ ಶೈಕ್ಷಣಿಕ ಉನ್ನತಿಗೆ ಏನೆಲ್ಲಾ ಕ್ರಮ ಕೈಗೊಳ್ಳಬಹುದೆಂದು ಅಧ್ಯಯನ ನಡೆಸಿ ವಿಸ್ತೃತ ವರದಿ ನೀಡುವಂತೆ ಕೋರಿದೆ. ಈ ಸಮಿತಿ ಅದಾಗಲೇ ತನ್ನ ಕೆಲಸ ಶುರು ಮಾಡಿದೆ.
ಅದೇನೇ ಇರಲಿ, ವಾಸ್ತವದಲ್ಲಿ ಮಾತ್ರ ನೀರಿನಂತೆ ಹಣದ ಹೊಳೆ ಹರಿದರೂ ಕೂಡಾ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ದಿಯಲ್ಲಿ ಯಾಕೆ ಸಾಧನೆ ಕೈಗೂಡುತ್ತಿಲ್ಲವೋ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ವೆಬ್ ಕ್ಯಾಸ್ಟಿಂಗ್ ಗುಮ್ಮ
ಜಿಲ್ಲೆಯ ಫಲಿತಾಂಶ ಪಾತಾಳ ಸೇರಲು ಇರುವ ಕಾರಣಗಳಲ್ಲಿ ವೆಬ್ ಕ್ಯಾಸ್ಟಿಂಗ್ ಕೂಡಾ ಒಂದೆಂದು ಹೇಳಲಾಗುತ್ತಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟು ಅಲ್ಲಿನ ಚಲನವಲನಗಳನ್ನು ದಾಖಲಿಸುವ ಮೂಲಕ ಪರೀಕ್ಷೆ ಸಂಪೂರ್ಣ ನಕಲು ಮುಕ್ತವಾಗಿರುವಂತೆ ನೋಡಿಕೊಳ್ಳಲಾಗಿತ್ತು. ಇದರಿಂದಾಗಿಯೂ ಫಲಿತಾಂಶದ ಮೇಲೆ ತನ್ನದೇ ಪರಿಣಾಮ ಬೀರಿದೆ. ಇದಲ್ಲದೆ ಕಳೆದ ಬಾರಿಯಂತೆ ಈ ಬಾರಿ ಕೃಪಾಂಕ ರೂಪದಲ್ಲಿ ಯಾವುದೇ ಅಂಕಗಳನ್ನು ನೀಡಲಾಗಿಲ್ಲ. ಇದರಿಂದಾಗಿ ಈಗ ಬಂದಿರೋದು ಅಸಲಿ ಫಲಿತಾಂಶವೆಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿರುವ ಹೈಸ್ಕೂಲ್‌ಗಳಲ್ಲಿ ಗುಣಮಟ್ಟದ ಶಿಕ್ಷಣ, ಬೋಧನೆ ಮರೀಚಿಕೆಯಾಗಿರೋದೇ ಫಲಿತಾಂಶ ಕುಸಿಯಲು ಕಾರಣವೆಂದೂ ಹೇಳಲಾಗುತ್ತಿದೆ. ಸಾಕಷ್ಟು ನಿಗಾ ವಹಿಸಿದರೂ ಕೂಡಾ ಫಲಿತಾಂಶ ರಾಜ್ಯದ ಸರಾಸರಿಯಲ್ಲಿ ಕೆಳಗೆ ಬೀಳುತ್ತಿರೋದರಿಂದ ಆತಂಕವಂತೂ ಹೆಚ್ಚಿಸಿದೆ.
ಇದನ್ನೂ ಓದಿ: ಕೂಲಿ ಕಾರ್ಮಿಕರ ಮಗಳು SSLCಯಲ್ಲಿ ರಾಜ್ಯಕ್ಕೆ ಪ್ರಥಮ!
ಕಲಬುರಗಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ಕೊನೆಯ ಸ್ಥಾನಕ್ಕೆ ಬಂದು ನಿಂತಿದೆ. ಕಳೆದ ಬಾರಿ 34 ನೇ ಸ್ಥಾನದಲ್ಲಿದ್ದೆವು. ಫಲಿತಾಂಶ ವೃದ್ದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಖೇನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹೆಚ್ಚಿನ ಬೋಧನೆ, ಹೆಚ್ಚಿನ ತರಗತಿ ತೆಗೆದುಕೊಂಡು ಜಿಲ್ಲಾದ್ಯಂತ ಹೈಸ್ಕೂಲ್‌ಗಳಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದೇವೆ.
- ಸೂರ್ಯಕಾಂತ ಮದಾನೆ, ಡಿಡಿಪಿಐ, ಕಲಬುರಗಿ ಜಿಲ್ಲೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ