
ಬೆಂಗಳೂರು (ನ.08): ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಅತ್ಯಾಚಾರ ಹಾಗೂ ಕೊಲೆ ಘಟನೆಗೆ ಸಾಕ್ಷಿಯಾಗಿರುವ ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (Central Bureau of Investigation- CBI) ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಮೂಲಕ ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿ ಸಂತೋಷ್‌ರಾವ್‌ಎಂದು ಸಾಬೀತು ಮಾಡಲು ಮುಂದಾಗಿದೆ.
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ (dharmasthala soujanya rape and murder case) ನ್ಯಾಯಾಲಯದ ಆದೇಶ ಬಂದು 4 ತಿಂಗಳ ಬಳಿಕ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿದೆ. ಕರ್ನಾಟಕ ಹೈಕೋರ್ಟ್ ನಲ್ಲಿ ತೀರ್ಪು ಮರು ಪರಿಶೀಲನೆಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. ಸೌಜನ್ಯಾ ಮೇಲೆ ಅತ್ಯಾಚಾರ ಆರೋಪಿ ಸಂತೋಷ್ ರಾವ್ ವಿರುದ್ದ ಸಿಬಿಐ ಅಧಿಕಾರಿಗಳು ಆರೋಪ ಸಾಬೀತು ಪಡಿಸಲು ವಿಫಲ ಎಂದು ಹೇಳಿದ್ದ ಬೆಂಗಳೂರು ಸಿಬಿಐ ಕೋರ್ಟ್, ಸಂತೋಷ್‌ರಾವ್‌ನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಹೀಗಾಗಿ ಸಂತೋಷ್ ರಾವ್ ನಿರಾಪರಾಧಿ ಎಂದು ಬಿಡುಗಡೆಯಾಗಿದ್ದನು.
ಸೌಜನ್ಯ ರೇಪ್, ಕೊಲೆ ಪ್ರಕರಣ ಮರುತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಅಕ್ಟೋಬರ್ 10, 2012ರಂದು ಧರ್ಮಸ್ಥಳ ಬಳಿಯ ಪಾಂಗಳ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಸುಧೀರ್ಘ 11 ವರ್ಷಗಳ ವಿಚಾರಣೆ ಬಳಿಕ ಸಿಬಿಐ ವಿಶೇಷ ಕೋರ್ಟ್ ಕಳೆದ ಜೂನ್ 16ರಂದು ತೀರ್ಪು ನೀಡಿತ್ತು.
ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ್ದು, ಆತನನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ಸಿಬಿಐಗೆ ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಇದೀಗ ಅವಧಿ ಮುಗಿದ ಮೇಲೆ ನಾಲ್ಕು ತಿಂಗಳ ಬಳಿಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನೆ ಮಾಡುವಂತೆ ಮೇಲ್ಮನವಿ ಸಲ್ಲಿಸಲಾಗಿದೆ.
ಸೌಜನ್ಯ ಕೇಸ್‌ನಲ್ಲಿ ತಪ್ಪು ಮಾಡಿಲ್ಲವೆಂದು ಅಣ್ಣಪ್ಪ ಸ್ವಾಮಿ ಮುಂದೆ ಆಣೆ; ಈ ದೈವದ ಬಗ್ಗೆ ನಿಮಗೆಷ್ಟು ಗೊತ್ತು?
ಇನ್ನು ಸಿಬಿಐ ಮೇಲ್ಮನವಿಯಲ್ಲಿ ಸಂತೋಷ್ ರಾವ್ ಅವರೇ ಆರೋಪಿ ಅಂತ ಹೇಳಲಾಗಿದೆ. ಸದ್ಯ ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಸಿಬಿಐ ಮರು ತನಿಖೆ ಸಾಧ್ಯವಿಲ್ಲವೆಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದ್ದರಿಂದ ಸೌಜನ್ಯ ಮನೆಯವರೂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿಲ್ಲ. ಈ ಬೆಳವಣಿಗೆಗಳ ಬೆನ್ನಲ್ಲೇ ಸಿಬಿಐನಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ಮಾಡಿದೆ. ಈಗ ಪುನಃ ಸಂತೋಷ್‌ರಾವ್ ಆರೋಪಿಯೆಂದು ಜೈಲು ಸೇರುತ್ತಾನಾ ಅಥವಾ ಸಿಬಿಐ ಮರುತನಿಖೆ ನಡೆಯುತ್ತದೆಯೇ ಎಂಬುದು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ