Covid Vaccine: ಜ.3ರಿಂದ ಮಕ್ಕಳಿಗೆ ಕೊರೋನಾ ಲಸಿಕೆ: ಸಿಎಂ ಬೊಮ್ಮಾಯಿ

By Kannadaprabha News  |  First Published Dec 31, 2021, 5:06 AM IST

*   ಲಸಿಕೆ ಲಭ್ಯತೆ, ಪರಿಣಾಮದ ಬಗ್ಗೆಯೂ ಚರ್ಚೆ
*  ಶೀಘ್ರ ವಿವರವಾದ ಮಾರ್ಗಸೂಚಿ ಬಿಡುಗಡೆ
*  15ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್‌ ನೀಡಿಕೆ
 


ಬೆಂಗಳೂರು(ಡಿ.31): ಕೊರೋನಾ(Coronavirus) ರೂಪಾಂತರಿ ತಳಿ ಒಮಿಕ್ರೋನ್‌(Omicron) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ(Children) ಕೋವ್ಯಾಕ್ಸಿನ್‌ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಜ.3ರಿಂದ ರಾಜ್ಯದ(Karnataka) ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಸೂಚಿಸಿದ್ದಾರೆ.

ಕೊರೋನಾ ನಿಯಂತ್ರಣ ಕಾರ್ಯತಂತ್ರಗಳಲ್ಲಿ ಲಸಿಕಾಕರಣವೂ ಒಂದಾಗಿದ್ದು, ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ(Central Government) ಮಾರ್ಗಸೂಚಿಯಂತೆ ರಾಜ್ಯದಲ್ಲಿ 2021ರ ಜನವರಿ 16ರಿಂದ ವಿವಿಧ ಗುಂಪಿನ ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ ಕೊರೋನಾ ಲಸಿಕಾಕರಣ(Vaccination) ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ 8.5 ಕೋಟಿಗೂ ಅಧಿಕ ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 4.7 ಕೋಟಿ (ಶೇ.97) ಮೊದಲ ಡೋಸ್‌ ಹಾಗೂ 3.78 ಕೋಟಿ (ಶೇ.77) ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದಿಂದ ಈ ಗಮನಾರ್ಹ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

Latest Videos

undefined

Modi Addresses Nation: 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್!

ಇತ್ತೀಚಿಗೆ ಜಾಗತಿಕವಾಗಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ರೂಪಾಂತರ ತಳಿ ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾಗಿವೆ. ನ್ಯಾಷನಲ್‌ ಟೆಕ್ನಿಕಲ್‌ ಅಡ್ವೈಸರಿ ಗ್ರೂಪ್‌ ಆಫ್‌ ಇಮ್ಯೂನಿಜೇಶನ್‌(ಎನ್‌ಟಿಎಜಿಐ) ಶಿಫಾರಸು ಹಾಗೂ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅದರಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಸಮನ್ವಯ ಸಾಧಿಸಲಿದ್ದಾರೆ. ಹೀಗಾಗಿ 2022 ಜ.3ರಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಹಾಗೂ ಶಾಸಕರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮಕ್ಕಳ ಲಸಿಕೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೋರಿದ್ದಾರೆ.

3ನೇ ಡೋಸ್‌ ಆಗಿ ಬೇರೆ ಲಸಿಕೆ: ಜ.10ರೊಳಗೆ ತೀರ್ಮಾನ

ನವದೆಹಲಿ: ಮುಂಜಾಗ್ರತಾ ಲಸಿಕೆ ಅಥವಾ ಬೂಸ್ಟರ್‌ ಡೋಸ್‌(Booster Dose) ನೀಡುವ ಸಂದರ್ಭದಲ್ಲಿ ಮೊದಲು ಪಡೆದಿದ್ದ ಕಂಪನಿಯ ಲಸಿಕೆಯನ್ನೇ ನೀಡಬೇಕೇ ಅಥವಾ ಬೇರೊಂದು ಲಸಿಕೆ ನೀಡಬೇಕೇ ಎಂಬ ಬಗ್ಗೆ ಜನವರಿ 10ರ ಒಳಗಾಗಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Covid Vaccination: ಮಕ್ಕಳಿಗೆ ಲಸಿಕೆ ಹಾಕಿಸಲು ವಿದೇಶಕ್ಕೆ ಹಾರುತ್ತಿರುವ ಪೋಷಕರು!

ಗುರುವಾರ ಕೋವಿಡ್‌ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ(Central Ministry of Health), ‘ಮುಂಜಾಗ್ರತಾ ಡೋಸ್‌ನಿಂದ ಸೋಂಕಿನ ಗಂಭೀರತೆ, ಆಸ್ಪತ್ರೆ ಸೇರುವ ಪ್ರಮಾಣ ಮತ್ತು ಸಾವಿನ ದರವನ್ನು ತಗ್ಗಿಸಬಹುದು. ಮೂರನೇ ಡೋಸ್‌ ವಿತರಣೆ ವೇಳೆ ಮೊದಲು ಪಡೆದ ಲಸಿಕೆ ಬದಲಾಗಿ ಬೇರೊಂದು ಲಸಿಕೆ ನೀಡಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗೆಯೇ ಮುಂಜಾಗ್ರತಾ ಲಸಿಕೆಯಾಗಿ ಯಾವ ಕಂಪನಿಯ ಲಸಿಕೆ ನೀಡಬೇಕು, ಯಾವ ಲಸಿಕೆ ಲಭ್ಯವಿದೆ, ಹೊಸ ಲಸಿಕೆಯಾದರೆ ಯಾವುದನ್ನು ನೀಡಬೇಕು ಎಂಬ ಬಗ್ಗೆಯೂ ಚರ್ಚೆ ಪ್ರಗತಿಯಲ್ಲಿದೆ. ಎಲ್ಲಾ ಅಂಕಿಅಂಶಗಳನ್ನು ಅವಲೋಕಿಸಲಾಗುತ್ತಿದೆ. ಈ ಬಗ್ಗೆ ಜ.10ರೊಳಗೆ ವಿವರವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದೆ.

ಒಮಿಕ್ರೋನ್‌ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಕಾರ‍್ಯಕರ್ತರು, ಮುಂಚೂಣಿ ಕಾರ‍್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ರೋಗಪೀಡಿತರಿಗೆ ಜ.10ರಿಂದ ಮೂರನೇ ಡೋಸ್‌ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಡಿ.25ರಂದು ಪ್ರಧಾನಿ ನರೇಂದ್ರ ಮೋದಿ(Narendta Modi)  ಘೋಷಿಸಿದ್ದಾರೆ.
 

click me!