* ವಾರದಲ್ಲಿ 3 ದಿನ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ
* ನಿಗದಿತ ವೇಳೆಗೆ ಯೋಜನೆಗಳನ್ನು ಪೂರ್ಣಗೊಳಿಸಿ
* ಜಿಪಂ ಸಿಇಒಗಳಿಗೆ ಖಡಕ್ ಸೂಚನೆ ಯೋಜನೆ ವಿಳಂಬ ಮಾಡಿದರೆ ಹುಷಾರ್
ಬೆಂಗಳೂರು(ಡಿ.31): ‘ಅಧಿಕಾರ ವಿಕೇಂದ್ರೀಕರಣದ ಮೂಲಕ ನಿಮಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿಮ್ಮ ವಿವೇಚನಾಧಿಕಾರವನ್ನು ಜನರ ಹಿತಕ್ಕಾಗಿ ಬಳಕೆ ಮಾಡಿ. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬ ಧೋರಣೆಗೆ ದುಬಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಭೆಯಲ್ಲಿ ರಾಜ್ಯದ(Karnataka) ಸಮಸ್ಯೆಗಳ ಕುರಿತು ಚರ್ಚಿಸಿದ ಮುಖ್ಯಮಂತ್ರಿಗಳು ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಜಲಜೀವನ್ ಮಿಷನ್, ಬೆಳೆ ಪರಿಹಾರ(Crop Compensation), ನೆರೆ ಪರಿಹಾರ ಸೇರಿ ಹಲವು ಜನಪರ ಯೋಜನೆಗಳಡಿ ಪ್ರಗತಿ ಸಾಧಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Local body Election: ಅಲ್ಪಸಂಖ್ಯಾತರಿರೋ ಕಡೆ ಗೆದ್ದಿದ್ದೇವೆಂದು ಬಿಗೋದು ಒಳ್ಳೆದಲ್ಲ, ಕಾಂಗ್ರೆಸ್‌ಗೆ ಟಾಂಗ್
ವಾರದಲ್ಲಿ 3 ದಿನ ಹಳ್ಳಿಗಳಿಗೆ ಭೇಟಿ ನೀಡಿ:
ಬಡವರ ಅನುಕೂಲಕ್ಕಾಗಿ ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಗಳಿಗೆ ಸರ್ಕಾರದ(Government of Karnataka: ) ಸಂಪೂರ್ಣ ಬೆಂಬಲ ಇರುತ್ತದೆ. ಅಧಿಕಾರಿಗಳು ಸ್ಪಷ್ಟನಿರ್ಣಯ ತೆಗೆದುಕೊಳ್ಳಬೇಕು. ದಿನಕ್ಕೆ 10 ತಾಸು ಕೆಲಸ ಮತ್ತು ವಾರದಲ್ಲಿ ಮೂರು ದಿನ ಹಳ್ಳಿಗಳ ಪ್ರವಾಸ ಕೈಗೊಂಡು(Village Tour) ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಕೇಂದ್ರೀಕರಿಸಬೇಕು. ತಳಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಹತೋಟಿ ಇಟ್ಟುಕೊಳ್ಳಿ. ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡಿ. ಸಮರ್ಪಕವಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ನೆರವು ಪಡೆದು ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಹಳ್ಳಿಗರು ಸಮಸ್ಯೆಯ ಜತೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದು ಬೇರೆ, ಸಮಸ್ಯೆಯ ಜತೆ ಬದುಕುವುದು ಬೇರೆ. ಆದ್ದರಿಂದ ಅವರ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು ಸಲಹೆ ನೀಡಿದರು.
ನಿಗದಿತ ಸಮಯದಲ್ಲಿ ಯೋಜನೆ ಪೂರ್ಣ:
ಹಳ್ಳಿಗಳಿಗೆ ದಿಢೀರ್ ಭೇಟಿ ನೀಡಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಮಾನವೀಯತೆಯಿಂದ ಪರಿಹಾರದ ಚಿಂತನೆ ಮಾಡಿ. ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಟ್ಟುಕೊಳ್ಳಿ. ಗ್ರಾಮೀಣ ಜನರ ಬದುಕನ್ನು ಹಸನು ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜಿಲ್ಲೆಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಜಲಜೀವನ ಮಿಷನ್, ವಸತಿ ಶಾಲೆಗಳ ದುರಸ್ತಿ ಸೇರಿದಂತೆ ನಿಗದಿಪಡಿಸಿರುವ ಗುರಿಯನ್ನು ನಿಗದಿಪಡಿಸಿದ ಸಮಯದೊಳಗೆ ಪೂರ್ಣಗೊಳಿಸಬೇಕು. ನರೇಗಾ ಯೋಜನೆಯಡಿ ಕ್ರಿಯಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಸರ್ಕಾರಕ್ಕೆ ಕಟ್ಟಡಗಳ ಆಸ್ತಿ ಸೃಷ್ಟಿಸುವ ಬಗ್ಗೆ ಗಮನ ನೀಡಬೇಕು ಎಂದು ತಿಳಿಸಿದರು.
ದುಡಿಯುವವರಿಗೆ ತರಬೇತಿ ನೀಡಿ:
ಸ್ತ್ರೀಶಕ್ತಿ ಮಾನವ ಸಂಪನ್ಮೂಲದ ದೊಡ್ಡ ಆಸ್ತಿ. ಎನ್‌ಸಿ/ಎಸ್‌ಟಿ, ಒಬಿಸಿ ಮಹಿಳೆಯರನ್ನು(Woman) ಆರ್ಥಿಕವಾಗಿ ಸಬಲರಾಗಿಸಬೇಕು. ಕರ್ನಾಟಕ ರಾಜ್ಯ ತಲಾವಾರು ಆದಾಯದಲ್ಲಿ 4ನೇ ಸ್ಥಾನದಲ್ಲಿದೆ. ತಲಾವಾರು ಆದಾಯಕ್ಕೆ ಕೇವಲ ಶೇ.30ರಷ್ಟು ಜನ ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಉಳಿದ ಶೇ.70ರಷ್ಟು ಜನ ದಿನನಿತ್ಯದ ಬದುಕಿಗೆ ದುಡಿಯುವುದಾಗಿದೆ. ಈ ವರ್ಗದವರಿಗೆ ಆರ್ಥಿಕ ನೆರವು, ತರಬೇತಿ ನೀಡಿದರೆ ಅವರ ಜೀವನ ಮಟ್ಟ ಸುಧಾರಿಸುತ್ತದೆ. ಕೃಷಿಯಲ್ಲಿ ಶೇ.1ರಷ್ಟುಅಭಿವೃದ್ಧಿಯಾದರೆ, ಕೈಗಾರಿಕೆಗಳಲ್ಲಿ ಶೇ.4ರಷ್ಟು ಮತ್ತು ಸೇವಾ ಕ್ಷೇತ್ರದಲ್ಲಿ ಶೇ.10ರಷ್ಟು ಅಭಿವೃದ್ಧಿಯಾಗುತ್ತದೆ. ಸಿಇಓಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಠ ಶೇ.1ರಷ್ಟಾದರೂ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ, ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ ತಂದಂತಾಗುತ್ತದೆ. ಜನರಿಗೆ ಇದರಿಂದ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ವಸತಿ ಸಚಿವ ವಿ.ಸೋಮಣ್ಣ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಅಬಕಾರಿ ಸಚಿವ ಗೋಪಾಲಯ್ಯ, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಇತರರು ಉಪಸ್ಥಿತರಿದ್ದರು.
Local Body Poll Result ಕಾಂಗ್ರೆಸ್ ಮೇಲುಗೈ, ಸಿಎಂ, ರಾಮುಲು, ಆಚಾರ್, ಸಿಂಗ್, ಜೊಲ್ಲೆಗೆ ಮುಖಭಂಗ
ಜಿಪಂಗಳಿಗೆ ರ‍್ಯಾಂಕ್
ಮುಂದಿನ ದಿನದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಿಇಓಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ನೀಡಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. ಜನೋಪಯೋಗಿ ಸರ್ಕಾರ ಆಗಬೇಕಾದರೆ ಜಿಲ್ಲಾ ಪಂಚಾಯಿತಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಶೈಲಿಯಿಂದ ನಿಮ್ಮದೇ ಛಾಪನ್ನು ಮೂಡಿಸಬೇಕು. ತಳಹಂತದಲ್ಲಿ ಯೋಜನೆಗಳ ಅನುಷ್ಠಾನ ಅತಿ ಮುಖ್ಯವಾದುದು ಎಂದರು.
ಜಿಪಂ ಸಿಇಒಗಳಿಗೆ ಖಡಕ್ ಸೂಚನೆ ಯೋಜನೆ ವಿಳಂಬ ಮಾಡಿದರೆ ಹುಷಾರ್
ಅಧಿಕಾರ ವಿಕೇಂದ್ರೀಕರಣದ ಮೂಲಕ ನಿಮಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿಮ್ಮ ವಿವೇಚನಾಧಿಕಾರವನ್ನು ಜನರ ಹಿತಕ್ಕಾಗಿ ಬಳಕೆ ಮಾಡಿ. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬ ಧೋರಣೆಗೆ ದುಬಾರಿ ಬೆಲೆ ತೆರಬೇಕಾಗುತ್ತದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಮುಖ ಸೂಚನೆಗಳು
1. ಜ.14ರೊಳಗೆ ರಾಜ್ಯದಲ್ಲಿ ಶೇ.100 ಮೊದಲ ಡೋಸ್ ಲಸಿಕೆ ನೀಡಬೇಕು
2. ಪ್ರಗತಿ ಕಡಿಮೆ ಇದ್ದ ಕಡೆ ಆದ್ಯತೆ ಮೇರೆಗೆ ಲಸಿಕೆ ಅಭಿಯಾನ ತೀವ್ರಗೊಳಿಸಿ
3. 3ನೇ ಅಲೆಗೆ ಸಿದ್ಧತೆ ಕೈಗೊಳ್ಳಿ. ಮಾರ್ಗಸೂಚಿಗಳನ್ನು ಗಂಭೀರವಾಗಿ ಪರಿಗಣಿಸಿ
4. ಉದ್ಯೋಗ ಖಾತ್ರಿ, ಜಲಜೀವನ್ ಮಿಷನ್ ಯೋಜನೆಯಡಿ ಆಡಿಟ್ ನಡೆಸಿ
5. 750 ಗ್ರಾಪಂನಲ್ಲಿ ಅಮೃತ್ ಯೋಜನೆಯಡಿ ಫಲಾನುಭವಿಗಳನ್ನು ಶೀಘ್ರ ಆರಿಸಿ