ಮಹಾರಾಷ್ಟ್ರ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ನೆರವು ಭರವಸೆ, ಆ ರಾಜ್ಯದ ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರರಿಗೂ ಪಿಂಚಣಿ, ಮಹಾರಾಷ್ಟ್ರದ ಜತ್ ತಾಲೂಕು ಸೇರ್ಪಡೆ ಗಂಭೀರ ಪರಿಶೀಲನೆ
ಬೆಂಗಳೂರು(ನ.23): ಕರ್ನಾಟಕದ ಜೊತೆಗಿನ ಗಡಿ ವಿವಾದಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಬೆಂಕಿ ಸುರಿಯುವ ಪ್ರಯತ್ನ ಮಾಡಿದ ಬೆನ್ನಲ್ಲೇ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ನೆರೆ ರಾಜ್ಯಕ್ಕೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ.
ರಾಜ್ಯದ ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದರ ಜತೆಗೆ ಕರ್ನಾಟಕ ಏಕೀಕರಣ, ಗೋವಾ ವಿಮೋಚನೆ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ಪಿಂಚಣಿ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಗಡಿ ವಿವಾದಕ್ಕೆ ಮತ್ತೆ ಮಹಾರಾಷ್ಟ್ರದ ಕಿಚ್ಚು: ನಿಗಾಕ್ಕೆ ಇಬ್ಬರು ಸಚಿವರ ನೇಮಕ!
ಕರ್ನಾಟಕದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಕಾನೂನು ಹೋರಾಟಕ್ಕೆ ಸಚಿವರ ತಂಡ ರಚಿಸುವುದರ ಜತೆಗೆ ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಪ್ರದೇಶದ ಜನರಿಗೆ ಆರೋಗ್ಯ ವಿಮಾ ಕಾರ್ಡ್ ಮತ್ತು ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವೂ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಗಡಿ ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ತೀರ್ಮಾನ ಮಾಡಿದೆ. ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಗೋವಾ ವಿಮೋಚನೆಗೆ ಕೆಲಸ ಮಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ದಾಖಲೆಗಳನ್ನು ತರಿಸಿ ಅವರಿಗೂ ಪಿಂಚಣಿ ನೀಡುವ ಕೆಲಸವನ್ನು ಕಾರ್ಯಗತಗೊಳಿಸಲಾಗುವುದು ಎಂದರು.
ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಇರುವಾಗ, ಎಲ್ಲಾ ಭಾಷಿಕರನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳುವಾಗ, ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಕನ್ನಡಿಗರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ. ಮಹಾರಾಷ್ಟ್ರದ ಮುಖ್ಯಮಂತ್ರಿಗಳು ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.
ನೆಲ, ಜಲ, ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ?: ಹೆಚ್ಚಿದ ಜನಾಕ್ರೋಶ
ಜತ್ ತಾಲೂಕು ಸೇರ್ಪಡೆ ಗಂಭೀರ ಪರಿಗಣನೆ:
ಮಹಾರಾಷ್ಟ್ರದಲ್ಲಿನ ಜತ್ ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು, ಕುಡಿಯುವ ನೀರಿನ ಸಮಸ್ಯೆ ಇದೆ. ನಾವು ನೀರು ಕೊಟ್ಟು ಸಹಾಯ ಮಾಡಲು ಯೋಜನೆಗಳನ್ನು ರೂಪಿಸಿದ್ದೇವೆ. ಜತ್ ತಾಲೂಕು ಕರ್ನಾಟಕಕ್ಕೆ ಸೇರಬೇಕು ಎಂಬುದು ಆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು ನಿರ್ಧರಿಸಿದ್ದವು. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತಿಳಿಸಿದರು.
ಮಹಾ ಸಿಎಂ ಶಿಂಧೆ ವ್ಯಾಜ್ಯ ಹೆಚ್ಚಿಸ್ತಿದ್ದಾರೆ
ನಾವು ಕರ್ನಾಟಕದಲ್ಲಿ ಎಲ್ಲ ಭಾಷಿಕರನ್ನೂ ಸಮಾನವಾಗಿ ಪರಿಗಣಿಸುತ್ತಿರುವಾಗ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸ ಮಾಡಬಾರದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.