ದತ್ತು ಮಕ್ಕಳೂ ಅನುಕಂಪದ ಉದ್ಯೋಗಕ್ಕೆ ಅರ್ಹ: ಹೈಕೋರ್ಟ್

Published : Nov 23, 2022, 03:34 AM IST
ದತ್ತು ಮಕ್ಕಳೂ ಅನುಕಂಪದ ಉದ್ಯೋಗಕ್ಕೆ ಅರ್ಹ: ಹೈಕೋರ್ಟ್

ಸಾರಾಂಶ

ದತ್ತು ಮಕ್ಕಳೂ ಅನುಕಂಪದ ಉದ್ಯೋಗಕ್ಕೆ ಅರ್ಹ ಉದ್ಯೋಗಕ್ಕೆ ಅವಕಾಶವಿಲ್ಲ ಎಂದಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ವಜಾಗೊಳಿಸಿದ ವಿಭಾಗೀಯ ಪೀಠ

ಬೆಂಗಳೂರು (ನ.23) : ದತ್ತು ಮಕ್ಕಳು ಸಹ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ತೀರ್ಪು ನೀಡಿದೆ. ದತ್ತು ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ ಆದೇಶ ಪ್ರಶ್ನಿಸಿ ಬಾಗಲಕೋಟೆಯ ಬನಹಟ್ಟಿತಾಲೂಕಿನ ನಿವಾಸಿ ಎಸ್‌.ಗಿರೀಶ್‌ (32) ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸ್ವಂತ ಅಥವಾ ದತ್ತು ಮಕ್ಕಳು ಕೂಡಾ ಅವರ ಮಕ್ಕಳೇ ಆಗಿರುತ್ತಾರೆ. ಇದರಲ್ಲಿ ತಾರತಮ್ಯವಿದೆ ಎಂಬುದಾಗಿ ನ್ಯಾಯಾಲಯ ಒಪ್ಪಿಕೊಂಡರೆ, ದತ್ತು ಸ್ವೀಕಾರದ ಉದ್ದೇಶವೇ ಈಡೇರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ದತ್ತು ಮಕ್ಕಳು ಸಹ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.

‘ಬಿ’ ರಿಪೋರ್ಟ್ ಕೋರ್ಟ್ ಒಪ್ಪಿದರೆ ಮಾತ್ರ ಪಾಸ್‌ಪೋರ್ಟ್ ಹಕ್ಕು: ಹೈಕೋರ್ಟ್

ಪ್ರಕರಣದ ಹಿನ್ನೆಲೆ:

ವಿನಾಯಕ ಎಂ. ಮುತ್ತಟ್ಟಿಎಂಬುವರು ಬನಹಟ್ಟಿಯ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಪಬ್ಲಿಕ್‌ ಪ್ರಾಸಿಕೂಟರ್‌ ಅವರ ಕಚೇರಿಯಲ್ಲಿ ದಲಾಯತ್‌ (ಗ್ರೂಪ್‌-ಡಿ ನೌಕರ) ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪುತ್ರ 2010ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. 2011ರಲ್ಲಿ ವಿನಾಯಕ ಅವರು 21 ವರ್ಷದ ಗಿರೀಶ್‌ ಅವರನ್ನು ದತ್ತು ಪಡೆದುಕೊಂಡು ಈ ಸಂಬಂಧ ದತ್ತು ಸ್ವೀಕಾರ ಪತ್ರ ಬರೆಸಿದ್ದರು.

ಕಾರಣಾಂತರಗಳಿಂದ 2018ರ ಮಾ.27ರಂದು ವಿನಾಯಕ ಮೃತಪಟ್ಟರು. ಇದರಿಂದ ಅನುಕಂಪದ ಆಧಾರದಲ್ಲಿ ತಂದೆಯ ಉದ್ಯೋಗವನ್ನು ತಮಗೆ ನೀಡುವಂತೆ ಕೋರಿ ದತ್ತು ಪುತ್ರ ಗಿರೀಶ್‌ ಅಭಿಯೋಜನಾ (ಪ್ರಾಸಿಕ್ಯೂಷನ್‌) ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲಾಖೆ ನಿರ್ದೇಶಕರು ಅರ್ಜಿಯನ್ನು ತಿರಸ್ಕರಿಸಿ, ಅರ್ಜಿದಾರರು ದತ್ತು ಮಗನಾಗಿದ್ದು, ಅವರಿಗೆ ಅನುಕಂಪದ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅರ್ಜಿದಾರ ಅನುಕಂಪದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಂದು, ‘ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಗಳು-1996’ ಅನ್ವಯವಾಗುತ್ತಿರಲಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದರು.

ಈ ಆದೇಶ ಪ್ರಶ್ನಿಸಿ ಗಿರೀಶ್‌, ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ನ್ಯಾಯಪೀಠ ಸಹ ಆ ಅರ್ಜಿಯನ್ನು ತಿರಸ್ಕರಿಸಿ 2021ರ ಜೂ.24ರಂದು ಆದೇಶಿಸಿತ್ತು. ಇದರಿಂದ ಆತ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ದತ್ತು ಮಕ್ಕಳಿಗೆ ಅನುಕಂಪದ ಉದ್ಯೋಗ ನೀಡಲು ಅವಕಾಶವಿಲ್ಲ ಎಂಬುದಾಗಿ 1996ರ ನಿಯಮಗಳು ತಿಳಿಸುತ್ತದೆ ಎಂಬ ಸರ್ಕಾರದ (ಅಭಿಯೋಜನಾ ಇಲಾಖೆ) ವಾದವನ್ನು ತಿರಸ್ಕರಿಸಿದೆ. ಅನುಕಂಪದ ಉದ್ಯೋಗಕ್ಕೆ ಸಲ್ಲಿಕೆಯಾದ ಅರ್ಜಿ ಪರಿಗಣಿಸುವಾಗ ಸ್ವಾಭಾವಿಕ ಮಕ್ಕಳಿಗೆ ಸರಿಸಮನಾಗಿ ದತ್ತು ಮಕ್ಕಳನ್ನು ಪರಿಗಣಿಸಬೇಕು ಎಂದು 2021ರಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಮೇಲ್ಮನವಿದಾರ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ನಂತರ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂಬ ಕಾರಣಕ್ಕೆ ತಿದ್ದುಪಡಿ ನಿಯಮಗಳ ಲಾಭವನ್ನು ಮೇಲ್ಮನವಿದಾರನಿಗೆ ನಿರಾಕರಿಸುವಂತಿಲ್ಲ ಎಂದು ಹೈಕೋರ್ಚ್‌ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಮೃತ ವಿನಾಯಕ ಅವರು ಪತ್ನಿ, ಸ್ವಾಭಾವಿಕ ಪುತ್ರ ಮತ್ತು ಪುತ್ರಿ ಅವರನ್ನು ಹೊಂದಿದ್ದರು. ಅನುಕಂಪದ ಮೇಲೆ ಉದ್ಯೋಗ ನೀಡುವಾಗ ಅರ್ಜಿದಾರರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಬೇಕಾಗುತ್ತದೆ. ಸ್ವಂತ ಪುತ್ರ ಮೃತಪಟ್ಟಕಾರಣಕ್ಕೆ ಮನೆಯ ಜವಾಬ್ದಾರಿ ನೋಡಿಕೊಳ್ಳಲು ಗಿರೀಶ್‌ ಅವರನ್ನು ವಿನಾಯಕ ದತ್ತು ಪಡೆದಿದ್ದಾರೆ. ಅವರ ಸ್ವಾಭಾವಿಕ ಮಗಳು ಅನುಕಂಪದ ಉದ್ಯೋಗ ನೀಡಬೇಕಾಗುತ್ತದೆ. ಆದರೆ, ಆಕೆ ದೈಹಿಕ ಹಾಗೂ ಮಾನಸಿಕ ವಿಕಲಚೇತನರಾಗಿದ್ದರೆ. ಇಂತಹ ಸಂದರ್ಭದಲ್ಲಿ ಮನೆ ಜವಾಬ್ದಾರಿ ಹೊತ್ತಿರುವ ದತ್ತುಪುತ್ರನಿಗೆ ಅನುಕಂಪದ ಉದ್ಯೋಗ ನೀಡಬೇಕಾಗುತ್ತದೆ. ಇನ್ನೂ ಅನುಕಂಪದ ಉದ್ಯೋಗದ ನಿಯಮಗಳಿಗೆ ತಿದ್ದುಪಡಿ ತಂದಿರುವುದರಿಂದ, ದತ್ತು ಪುತ್ರ ಮತ್ತು ಸ್ವಾಭಾವಿಕ ಪುತ್ರ ನಡುವೆ ತಾರತಮ್ಯ ಮಾಡುವುದು ಸಂವಿಧಾನದ ಪರಿಚ್ಛೇಧ 14ರ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಸ್ಲಿಮರ ಮದುವೆ ಪೋಕ್ಸೋ ಕಾಯ್ದೆಯಿಂದ ಹೊರಗಿಲ್ಲ: ಹೈಕೋರ್ಟ್

ಅಂತಿಮವಾಗಿ ಅನುಕಂಪದ ಉದ್ಯೋಗಕ್ಕಾಗಿ ಮೇಲ್ಮನವಿದಾರ ಗಿರೀಶ್‌ (ದತ್ತುಪುತ್ರ) ಸಲ್ಲಿಸಿರುವ ಅರ್ಜಿಯನ್ನು 12 ವಾರಗಳಲ್ಲಿ ಪರಿಗಣಿಸಬೇಕು ಎಂದು ಅಭಿಯೋಜನಾ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ