Karnataka Rain| ಮನೆಗಳಿಗೆ ನೀರು ನುಗ್ಗಿದ್ದರೆ ತಕ್ಷಣ 10 ಸಾವಿರ ಪರಿಹಾರ

Kannadaprabha News   | Asianet News
Published : Nov 23, 2021, 01:47 PM IST
Karnataka Rain| ಮನೆಗಳಿಗೆ ನೀರು ನುಗ್ಗಿದ್ದರೆ ತಕ್ಷಣ 10 ಸಾವಿರ ಪರಿಹಾರ

ಸಾರಾಂಶ

ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಅಪಾರ ಆಸ್ತಿ ಪಾಸ್ತಿ, ಬೆಳೆ ನಷ್ಟ ಮನೆಗಳಿಗೆ ನೀರು ನುಗ್ಗಿದ್ದರೆ ತಕ್ಷಣ 10 ಸಾವಿರ ರುಪಾಯಿ ಪರಿಹಾರ ಬಿಡುಗಡೆ ಮಾಡುವ ಭರವಸೆ ಮಳೆಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯೊ ಭೇಟಿ 

 ಕೋಲಾರ (ನ.23):  ಅಕಾಲಿಕ ಮಳೆಯಿಂದ (Rain) ಅಪಾರ ಆಸ್ತಿಪಾಸ್ತಿ, ಬೆಳೆ ನಷ್ಟಕ್ಕೊಳಗಾಗಿರುವ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸೋಮವಾರ ಬೆಳೆ ಹಾನಿ ಪರಿಶೀಲಿಸಿದರು. ರೈತರ (Farmers) ಜಮೀನುಗಳಿಗೆ (Farm land) ತೆರಳಿ ಪರಿಶೀಲನೆ ನಡೆಸಿದ ಅವರು ಮಳೆಯಿಂದಾಗಿ ತುಂಬಿದ, ಕಟ್ಟೆಯೊಡೆದ ಕೆರೆಗಳನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಹಾಳಾದ ಕೆರೆ ಏರಿ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು, ಮನೆಗಳಿಗೆ ನೀರು ನುಗ್ಗಿದ್ದರೆ ತಕ್ಷಣ 10 ಸಾವಿರ ರುಪಾಯಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದರು. ಮಳೆಯಿಂದಾಗಿ ತೀವ್ರ ಹಾನಿಗೊಳಗಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಭಾನುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಈಗ ಕೋಲಾರ (Kolar) ತಾಲೂಕಿನ ನರಸಾಪುರ ಸುತ್ತಮುತ್ತ ಹಾಗೂ ಮುದುವಾಡಿ ಸಮೀಪ ಪರಿಶೀಲನೆ ನಡೆಸಿದರು.

ರೈತರ ಹೊಲಕ್ಕೆ ಬಳಿ ತೆರಳಿ ಹಾನಿ ಕುರಿತು ಮಾಹಿತಿ ವಿವರಣೆ ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆರೆ ಏರಿ ದುರಸ್ತಿ, ಕಡಿತಗೊಂಡ ವಿದ್ಯುತ್‌ ದುರಸ್ತಿಗೆ ಸಂಬಂಧಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಹಾನಿ ಪ್ರದೇಶಗಳ ಸಂಪೂರ್ಣ ವೀಕ್ಷಣೆ ಬಳಿಕ ಪರಿಹಾರ ಮೊತ್ತದ ಬಗ್ಗೆ ತಿಳಿಸಿ ಭರವಸೆ ನೀಡಿದರು. 

709 ಮನೆಗಳಿಗೆ ಹಾನಿ: ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ (Kolar District) ಒಬ್ಬರು ಮೃತಪಟ್ಟಿದ್ದು, 709 ಮನೆಗಳು ನೆಲಕ್ಕುರುಳಿವೆ. ಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಭಾಗಶಃ ಮನೆ ಹಾನಿಯಾಗಿದ್ದರೆ .3 ಲಕ್ಷ ರು. ಪರಿಹಾರ ನೀಡಲು ಸೂಚಿಸಿದ್ದು,ಇಂದು ಸಂಜೆಯೊಳಗೆ ಮೊದಲ ಕಂತಾಗಿ ತಲಾ 1 ಲಕ್ಷ ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಮಳೆ ಹಾನಿ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ನಿಧಿಯಲ್ಲಿ  685 ಕೋಟಿ ಇದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಬೆಳೆ ನಾಶದ ಸಮೀಕ್ಷೆ ಮಾಡುವುದು, ಅದನ್ನು ಅಪ್‌ಲೋಡ್‌ (Upload) ಮಾಡುವುದು ವಿಳಂಬವಾಗುತ್ತದೆ. ಈ ಬಾರಿ ಹಾಗೆ ಆಗಬಾರದು. ಕೂಡಲೇ ಸರ್ವೆ ಪ್ರಾರಂಭಿಸಿ, ಆಯಾ ದಿನದ ಸರ್ವೆ ಮಾಹಿತಿ ಅಂದೇ ಪರಿಹಾರ ಆ್ಯಪ್‌ನಲ್ಲಿ (App) ಅಪ್‌ಲೋಡ್‌ ಮಾಡಿದರೆ 24 ಗಂಟೆಯಲ್ಲೇ ಪರಿಹಾರ ತಲುಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆಗಳು (Crops), 7 ಸಾವಿರ ಎಕರೆ ತೋಟಗಾರಿಕಾ ಬೆಳೆಗಳು ಸೇರಿ ಸುಮಾರು 55 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚಿನ ಬೆಳೆ ಹಾನಿಯಾಗಿದೆ. ಅದರಲ್ಲೂ ರಾಗಿ ಬೆಳೆ ಹೆಚ್ಚು ನಷ್ಟವಾಗಿದೆ ಎಂದು ತಿಳಿಸಿದರು.

ರಸ್ತೆಗಳ (Road) ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ರಾಜ್ಯದಲ್ಲಿ ಮಳೆಯಿಂದ ಸಂಪರ್ಕ ಕಡಿತಗೊಂಡಿರುವ ರಸ್ತೆಗಳು, ಸೇತುವೆಗಳ (Bridge) ದುರಸ್ಥಿಗೆ ಲೋಕೋಪಯೋಗಿ ಇಲಾಖೆಗೆ ಭಾನುವಾರವೇ 500 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಶಾಶ್ವತ ಪರಿಹಾರಕ್ಕೆ ಸಂಬಂಧಿಸಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದ್ದೇನೆ. ಸಂಪರ್ಕ ಕಡಿತಗೊಳ್ಳುವ ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಕೋಲಾರದಿಂದ ಕಡಪ ಮುಖ್ಯ ರಸ್ತೆಗೆ ತೆರಳುವ .30 ಕಿ.ಮೀ. ರಸ್ತೆ ಅಗಲೀಕರಣಕ್ಕೆ ಈ ಭಾಗದ ಮುಖಂಡರು ಮನವಿ ಮಾಡಿದ್ದು, ವಿಶೇಷ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಮುನಿರತ್ನ, ಸಂಸದ ಎಸ್‌.ಮುನಿಸ್ವಾಮಿ (S Muniswamy), ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್‌ (Ramesh Kumar), ಶಾಸಕ ಕೆ.ಶ್ರೀನಿವಾಸಗೌಡ, ಡಾ.ವೈ.ಎ.ನಾರಾಯಣಸ್ವಾಮಿ (narayana swamy) ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್