Subsidy Fertilizer | ಸಬ್ಸಿಡಿ ರಸಗೊಬ್ಬರ ಅಕ್ರಮ ತಡೆಗೆ ಕೇಂದ್ರ ಕಟ್ಟಪ್ಪಣೆ

By Kannadaprabha NewsFirst Published Nov 21, 2021, 9:49 AM IST
Highlights
  • ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿರುವ ರಸಗೊಬ್ಬರದ ಕಳ್ಳ ಸಾಗಣೆ, ಕಾಳಸಂತೆಯಲ್ಲಿ ಮಾರಾಟ, ಕೃಷಿಯೇತರ ಚಟುವಟಿಕೆಗೆ ಬಳಸುವ ಅಕ್ರಮ 
  • ರಸಗೊಬ್ಬರ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ  

ವರದಿ : ಲಿಂಗರಾಜು ಕೋರಾ

 ಬೆಂಗಳೂರು(ನ.21):  ರೈತರಿಗೆ (Farmers) ಸಬ್ಸಿಡಿ ದರದಲ್ಲಿ ನೀಡುತ್ತಿರುವ ರಸಗೊಬ್ಬರದ (Fertilizer) ಕಳ್ಳ ಸಾಗಣೆ, ಕಾಳಸಂತೆಯಲ್ಲಿ ಮಾರಾಟ, ಕೃಷಿಯೇತರ ಚಟುವಟಿಕೆಗೆ ಬಳಸುವ ಅಕ್ರಮಗಳ ಮೇಲೆ ತನಿಖಾ ಸಂಸ್ಥೆಗಳ ನೆರವಿನಿಂದ ಸದಾ ನಿಗಾ ವಹಿಸಬೇಕು. ಈ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ (Legal action) ಜರುಗಿಸಬೇಕು ಎಂದು ಕೇಂದ್ರ ಸರ್ಕಾರ (Govt Of India) ರಾಜ್ಯ ಸರ್ಕಾರಕ್ಕೆ (Karnataka Govt) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಸಂಬಂಧ ಕೇಂದ್ರ ರಾಸಾಯನಿಕ  ಮತ್ತು ರಸಗೊಬ್ಬರ ಇಲಾಖೆ ಕಾರ್ಯದರ್ಶಿ ಆರ್‌.ಕೆ.ಚತುರ್ವೇದಿ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ (P Ravikumar) ಅವರಿಗೂ ಈ ಪತ್ರ ಬಂದಿದ್ದು ಸಬ್ಸಿಡಿ ದರದಲ್ಲಿ ರೈತರಿಗೆ (Farmers) ನೀಡುವ ರಸಗೊಬ್ಬರ ಕೃಷಿ ಚಟುವಟಿಕೆಗೆ ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.

ಹಿಂಗಾರಿನಲ್ಲಿ ಎಲ್ಲೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಬಿಡುವು ನೀಡಿದ ಕೂಡಲೇ ಈ ಬಾರಿ ಕೃಷಿ ಚಟುವಟಿಕೆ ಚುರುಕುಗೊಳ್ಳುವ ಸಾಧ್ಯತೆ ಇದೆ. ವ್ಯಾಪಕ ಮಳೆಯಿಂದ ಕೆರೆ (Lake) ಕಟ್ಟೆಗಳು ತುಂಬಿರುವುದರಿಂದ ಬೇಸಿಗೆಯಲ್ಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆಯುವ ನಿರೀಕ್ಷೆ ಇರುವುದರಿಂದ ಈ ವೇಳೆ ರೈತರಿಗೆ ರಸ ಗೊಬ್ಬರದ ಕೊರತೆ ಯಾಗದಂತೆ ಎಚ್ಚರ ವಹಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಸೂಚನೆ ರವಾನಿಸಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಪತ್ರದಲ್ಲೇನಿದೆ?

ರೈತರಿಗೆ ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು, ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಸಬ್ಸಿಡಿ  ಸೌಲಭ್ಯಗಳೊಂದಿಗೆ ಪ್ರತೀ ವರ್ಷ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ ಒದಗಿಸುತ್ತಿದೆ. ಕೃಷಿ ಚಟುವಟಿಕೆಗೆ ಸಬ್ಸಿಡಿ ದರದಲ್ಲಿ ನೀಡುವ ರಸಗೊಬ್ಬರದ ಬೆಲೆಗೂ, ಕೈಗಾರಿಕೆ ಉಪಯೋಗಕ್ಕೆ ನೀಡುವ ರಸಗೊಬ್ಬರದ ದರಕ್ಕೂ ದೊಡ್ಡ ವ್ಯತ್ಯಾಸವಿದೆ. ಹಾಗಾಗಿ ಸಬ್ಸಿಡಿ ದರದ ರಸಗೊಬ್ಬರವನ್ನು ಕಳ್ಳ ಸಾಗಣೆ, ಕಾಳ ಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಕೈಗಾರಿಕೆ ಬಳಕೆಗೆ ಅಥವಾ ಕೃಷಿಯೇತರ ಬಳಕೆಗೆ ಅನಧಿಕೃತವಾಗಿ ಬಳಸುವ ಸಾಧ್ಯತೆಗಳಿವೆ. ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಸದಾ ನಿಗಾ ವಹಿಸುವಂತೆ ತಮ್ಮ ವ್ಯಾಪ್ತಿಯ ಎಲ್ಲಾ ತನಿಖಾ ಸಂಸ್ಥೆಗಳಿಗೆ ಸೂಚಿಸಬೇಕು. ಇಂತಹ ಅಕ್ರಮ ಪ್ರಕರಣಗಳು ಕಂಡುಬಂದರೆ ತಕ್ಷಣ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರಕ್ಕೆ ಪ್ರತಿ ದಿನವೂ ಇಂತಹ ಪ್ರಕರಣಗಳ ಬಗ್ಗೆ ವರದಿ ನೀಡಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಕೇಂದ್ರದ ಕಳವಳ ಏನು?

ಇಂತಹ ಅಕ್ರಮಗಳಿಂದ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಬಹುದು. ಸಮಯಕ್ಕೆ ಸರಿಯಾಗಿ ರೈತರಿಗೆ ಅಥವಾ ಕೃಷಿ ಚಟುವಟಿಕೆಗೆ ರಸಗೊಬ್ಬರ ಸಿಗದೆ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗಬಹುದು. ಇದರಿಂದ ಸರ್ಕಾರದ ಬೊಕ್ಕಸಕ್ಕೂ ದೊಡ್ಡ ನಷ್ಟವುಂಟಾಗಲಿದೆ. ಹಾಗಾಗಿ ಸಬ್ಸಿಡಿ ಸಹಿತ ರಸಗೊಬ್ಬರದ ಅಕ್ರಮ ಮಾರಾಟ, ಸಾಗಣೆ ಮತ್ತು ಕೃಷಿಯೇತರ ಬಳಕೆಗೆ ಅವಕಾಶವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

  •  ಸಬ್ಸಿಡಿ ರಸಗೊಬ್ಬರ ಅಕ್ರಮ ತಡೆಗೆ ಕೇಂದ್ರ ಕಟ್ಟಪ್ಪಣೆ
  •  ರಸಗೊಬ್ಬರ ಕೃಷಿ ಚಟುವಟಿಕೆಗೆ ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಿ
  • ಅಕ್ರಮದ ಮೇಲೆ ನಿಗಾ ವಹಿಸಿ - ಕೇಂದ್ರ ಸರ್ಕಾರ ಸೂಚನೆ
  • ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ
  • ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಕಾರ್ಯದರ್ಶಿ ಆರ್‌.ಕೆ.ಚತುರ್ವೇದಿ  ಸೂಚನೆ
  •   ಸಬ್ಸಿಡಿ ದರದಲ್ಲಿ ರೈತರಿಗೆ ನೀಡುವ ರಸಗೊಬ್ಬರ ಕೃಷಿ ಚಟುವಟಿಕೆಗೆ ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಲು ಸೂಚನೆ
click me!