ಸರ್ಕಾರದ ಕೊರೋನಾ ಸಾವಿನ ಲೆಕ್ಕ ಸುಳ್ಳು, ಕಾಂಗ್ರೆಸ್‌ ಕಿಡಿ

By Kannadaprabha NewsFirst Published May 7, 2022, 2:07 AM IST
Highlights

- ಡಬ್ಲ್ಯುಎಚ್‌ಒನಿಂದಲೇ ಸರ್ಕಾರದ ಸುಳ್ಳು ಬಯಲು

- ಕರ್ನಾಟಕದಲ್ಲಿ 4.5 ಲಕ್ಷ ಸಾವು-ಡಿಕೆಶಿ

- ಎಲ್ಲರಿಗೂ ಐದು ಲಕ್ಷ ರೂಪಾಯಿ ಪರಿಹಾರ ನೀಡಿ

ಬೆಂಗಳೂರು (ಮೇ. 7): ಕೊರೋನಾ (Coronavirus) ಸಾವಿನ ಸಂಖ್ಯೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಳ್ಳು ಲೆಕ್ಕ ನೀಡಿರುವುದನ್ನು ಕಾಂಗ್ರೆಸ್‌ (Congress) ಮೊದಲೇ ಹೇಳಿತ್ತು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯು (WHO) ಸರ್ಕಾರದ ಸುಳ್ಳನ್ನು ಬಹಿರಂಗಗೊಳಿಸಿದ್ದು, ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿರುವ ಎಲ್ಲರಿಗೂ ತಲಾ 5 ಲಕ್ಷ ರು. ಪರಿಹಾರ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್‌ (State Congress) ನಾಯಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಕೆಪಿಸಿಸಿ (KPCC) ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar), ‘ಕೊರೋನಾ ಸಮಯದಲ್ಲಿ ನಾನು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಾಲ್ಕೂವರೆ ಲಕ್ಷ ಜನ ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದೆವು. ನನ್ನ ತಾಲೂಕಿನಲ್ಲೇ 400 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೂ ಸರ್ಕಾರ ಕೇವಲ 100 ಮಂದಿ ಎಂದು ವರದಿ ಮಾಡಿದೆ. ಇದರ ಪ್ರಕಾರ ಮೃತಪಟ್ಟಿರುವ ಎಲ್ಲರ ಕುಟುಂಬದವರೂ ಅರ್ಜಿ ಸಲ್ಲಿಸಲು ತಿಳಿಸಿದಾಗ 300 ಕ್ಕೂ ಹೆಚ್ಚು ಅರ್ಜಿಗಳು ಮಾನ್ಯಗೊಂಡಿವೆ. ಆದರೆ, ಒಬ್ಬರಿಗೂ ಈವರೆಗೆ ಪರಿಹಾರ ನೀಡಿಲ್ಲ’ ಎಂದು ಕಿಡಿ ಕಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ದೇಶದಲ್ಲಿ 42 ಲಕ್ಷ ಜನ ಸತ್ತಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ವಿಶ್ವ ಆರೋಗ್ಯ ಸಂಸ್ಥೆಯೇ 47 ಲಕ್ಷ ಜನ ಸತ್ತಿರುವುದಾಗಿ ಹೇಳಿದೆ. ಬಿಜೆಪಿ ಸರ್ಕಾರಗಳು ಸುಳ್ಳು ಲೆಕ್ಕ ನೀಡಿ ಜಂಬ ಕೊಚ್ಚಿಕೊಂಡಿದ್ದವು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ವರದಿಯೇ ಸರಿಯಿಲ್ಲ ಎಂದು ಹೇಳುತ್ತಿವೆ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಇದ್ದವರು ಕೊರೋನಾ ಸೋಂಕಿನಿಂದ ಸತ್ತರೆ ಕೊರೋನಾ ಸಾವು ಎಂದು ಪರಿಗಣಿಸುತ್ತಿಲ್ಲ. ಈ ಮೂಲಕ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂದು ಕಿಡಿ ಕಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರೂ ಸಹ ಬಿಜೆಪಿ ಸರ್ಕಾರದ ಸುಳ್ಳು ಲೆಕ್ಕಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲು ಮಾಡಿದೆ. ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಭಾರತದಲ್ಲಿ 4.8 ಲಕ್ಷ ಅಲ್ಲ, 47 ಲಕ್ಷ ಕೋವಿಡ್‌ ಸಾವು: ಶಾಕ್ ಕೊಟ್ಟ WHO ವರದಿ

ಚಾಮರಾಜ ನಗರದಲ್ಲಿ ಆಮ್ಲಜನಕ ಇಲ್ಲದೆ ಮೃತಪಟ್ಟಾಗಲೂ ಸರ್ಕಾರ ಸುಳ್ಳು ಲೆಕ್ಕ ನೀಡಿತ್ತು. 34 ಮಂದಿ ಮೃತಪಟ್ಟಿದ್ದರೆ 3 ಮಂದಿ ಎಂದಿತ್ತು. ಬಳಿಕ ನ್ಯಾಯಾಲಯವೇ ಮಧ್ಯಪ್ರವೇಶಿಸಿದ್ದರಿಂದ ಸತ್ಯ ಹೊರಗಡೆ ಬಂದಿತ್ತು. ಇದೀಗ ದೇಶದಲ್ಲಿ 47 ಲಕ್ಷ ಮಂದಿ ಕೊರೋನಾದಿಂದ ಸತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ರಾಜ್ಯದಲ್ಲೂ ಸರ್ಕಾರ ತಿಳಿಸಿರುವ ಪ್ರಮಾಣಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದು, ಎಲ್ಲರ ಕುಟುಂಬಗಳಿಗೂ ಪರಿಹಾರ ನೀಡಬೇಕು. ಈ ಕುರಿತು ಕೂಡಲೇ ಮುಖ್ಯಮಂತ್ರಿಗಳು ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದರು.

ಭಾರತದಲ್ಲಿಯೇ ಗರಿಷ್ಠ ಕೋವಿಡ್ ಸಾವು ಎಂದ WHO, ಇದೆಲ್ಲವೂ ಸುಳ್ಳು ಎಂದ ಕೇಂದ್ರ ಸರ್ಕಾರ!

ಭಾರತದಲ್ಲಿ 2020ರ ಜನರಿಯಿಂದ ಡಿಸೆಂಬರ್‌ 2021ರ 2 ವರ್ಷದ ಅವಧಿಯಲ್ಲಿ ಕೋವಿಡ್‌ನಿಂದ ಬಲಿಯಾದವರು ಸರ್ಕಾರ ಹೇಳಿದಂತೆ 4.8 ಲಕ್ಷ ಅಲ್ಲ, 47 ಲಕ್ಷ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಡಬ್ಲ್ಯುಎಚ್‌ಒ ವರದಿಯನ್ನು ಗಮನಿಸಿದಾಗ ಅಧಿಕೃತ ಸಾವಿನ ಅಂಕಿ-ಅಂಶಗಳಿಗಿಂತ 10 ಪಟ್ಟು ಹೆಚ್ಚು ಕೋವಿಡ್‌ ಸಂಬಂಧಿ ಸಾವು ಸಂಭವಿಸುರುವುದು ಕಂಡುಬರುತ್ತದೆ.ಇನ್ನು ಇದೇ ಅವಧಿಯಲ್ಲಿ ವಿಶ್ವದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 60 ಲಕ್ಷ ಅಲ್ಲ. 1.5 ಕೋಟಿ ಎಂದೂ ಅದು ತಿಳಿಸಿದೆ. ಅತಿ ಹೆಚ್ಚು ಸಾವು ಸಂಭವಿಸಿದ್ದು ಆಗ್ನೇಯ ಏಷ್ಯಾ, ಯುರೋಪ್‌ ಹಾಗೂ ಅಮೆರಿಕದಲ್ಲಿ ಎಂದು ಅದು ತಿಳಿಸಿದೆ.

click me!