ಸ್ಕೇಟಿಂಗ್ ಮೂಲಕ ಜನರಿಗೆ ಜಾಗೃತಿ ಅಭಿಯಾನ

By Suvarna News  |  First Published May 7, 2022, 12:22 AM IST

ಸ್ಕೇಟಿಂಗ್‌ ತಂಡದಲ್ಲಿ 8 ರಿಂದ 18 ವರ್ಷದ ಒಳಗಿನ 40 ಮಕ್ಕಳು ಭಾಗವಹಿಸಿ ಕಾರವಾರದಿಂದ ಬೆಂಗಳೂರುವರೆಗೆ ಸುಮಾರು 610 ಕಿ.ಮೀ. ರಸ್ತೆ ಮಾರ್ಗದಲ್ಲೇ ಸ್ಕೇಟಿಂಗ್ ನಡೆಸಲಿದ್ದಾರೆ. ಇನ್ನು ಸ್ಕೇಟಿಂಗ್ ಉದ್ದಕ್ಕೂ ಸಿಗುವ ಹಳ್ಳಿಗಳಿಗೆ ಹೋಗಿ ಅಲ್ಲಿ ಸರ್ಕಾರದ ಕಾರ್ಮಿಕ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಕ್ಕಳು ಮನವಿ ಮಾಡಿಕೊಳ್ಳಲಿದ್ದಾರೆ. 


ಕಾರವಾರ (ಮೇ. 6): ಸರ್ಕಾರ ಕಾರ್ಮಿಕ ಯೋಜನೆಗಳನ್ನು ಸಮರ್ಪಕವಾಗಿ ಶ್ರಮಿಕ ವರ್ಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಮಾಡಿದರೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಕಾಣುತ್ತಿಲ್ಲ. ಯೋಜನೆಗಳ ಬಗ್ಗೆ ಮಾಹಿತಿ ಕೊರತೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದಲೋ ಶ್ರಮಿಕ ವರ್ಗಕ್ಕೆ ಪೂರ್ಣ ಪ್ರಮಾಣದಲ್ಲಿ ಯೋಜನೆಗಳ ಲಾಭ ದೊರೆಯುತ್ತಿಲ್ಲ.  ಹೀಗಾಗಿ ಕಾರವಾರದಲ್ಲಿ(Karwar) ರೋಲರ್ ಸ್ಕೇಟಿಂಗ್ ಕ್ಲಬ್ ಕೈಗಾ (Rolar Skating Club Kaiga) ವತಿಯಿಂದ ಕಾರ್ಮಿಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಮುಖಾಂತರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಚಿಕ್ಕ ಮಕ್ಕಳು ಮುಂದಾಗಿದ್ದಾರೆ. 

ಅಂದಹಾಗೆ, ಈ ಸ್ಕೇಟಿಂಗ್‌ ತಂಡದಲ್ಲಿ 8 ರಿಂದ 18 ವರ್ಷದ ಒಳಗಿನ 40 ಮಕ್ಕಳು ಭಾಗವಹಿಸಿ ಕಾರವಾರದಿಂದ ಬೆಂಗಳೂರುವರೆಗೆ ಸುಮಾರು 610 ಕಿ.ಮೀ. ರಸ್ತೆ ಮಾರ್ಗದಲ್ಲೇ ಸ್ಕೇಟಿಂಗ್ ನಡೆಸಲಿದ್ದಾರೆ. ಇನ್ನು ಸ್ಕೇಟಿಂಗ್ ಉದ್ದಕ್ಕೂ ಸಿಗುವ ಹಳ್ಳಿಗಳಿಗೆ ಹೋಗಿ ಅಲ್ಲಿ ಸರ್ಕಾರದ ಕಾರ್ಮಿಕ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಕ್ಕಳು ಮನವಿ ಮಾಡಿಕೊಳ್ಳಲಿದ್ದಾರೆ. 

Latest Videos

ಜನರಿಗೆ ಮಾಹಿತಿ ನೀಡುವಂತಹ ಮಕ್ಕಳ ಇಂತಹ ಉತ್ತಮ ಜಾಗೃತಿ ಅಭಿಯಾನಕ್ಕೆ ಕಾರವಾರದಲ್ಲಿ ಸಿಇಒ ಪ್ರಿಯಾಂಗಾ ಚಾಲನೆ ನೀಡಿದ್ದು, ಶುಭ ಹಾರೈಸಿದ್ದಾರೆ.  ಈ ವೇಳೆ ಮಕ್ಕಳು ಕಾರವಾರ ನಗರದಾದ್ಯಂತ ಸ್ಕೇಟಿಂಗ್ ನಡೆಸುತ್ತಾ ಸಾಗಿ ಬಿಣಗಾ ಸುರಂಗ ಮಾರ್ಗದ ಮೂಲಕ ತೆರಳಿ ಮತ್ತೆ ನಗರಕ್ಕೆ ಹಿಂತಿರುಗಿದ್ದಲ್ಲದೇ, ವಾಹನದ ಅಡಿಭಾಗದಲ್ಲಿ ಸ್ಕೇಟಿಂಗ್ ನಡೆಸುತ್ತಾ ನುಸುಳುವ ಮೂಲಕ ತಮ್ಮ ಪ್ರತಿಭಾ ಪ್ರದರ್ಶನ ನಡೆಸಿದರು.

click me!