ಡಿಕೆಶಿ ಕೇಸ್‌ ವಾಪಸ್‌ ಅನೈತಿಕ, ಕೋರ್ಟ್‌ಗೆ ಮೊರೆ: ಬಿಜೆಪಿ

By Kannadaprabha NewsFirst Published Nov 25, 2023, 6:04 AM IST
Highlights

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಮಾಜಿ ಸಚಿವರಾದ ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶುಕ್ರವಾರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಡಿ.ಕೆ.ಶಿವಕುಮಾರ್‌ರನ್ನು ರಕ್ಷಿಸಲು ಕಾನೂನು ಬಾಹಿರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು(ನ.25):   ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಅನೈತಿಕ, ಅಕ್ಷಮ್ಯ. ಸರ್ಕಾರದ ಈ ನಿರ್ಧಾರ ವಿರುದ್ಧ ಕೋರ್ಟ್‌ ಮೆಟ್ಟಿಲೇರಲಿದ್ದೇವೆ ಎಂದಿರುವ ಮುಖಂಡರು, ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆಯೂ ಆಗ್ರಹಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಮಾಜಿ ಸಚಿವರಾದ ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶುಕ್ರವಾರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಡಿ.ಕೆ.ಶಿವಕುಮಾರ್‌ರನ್ನು ರಕ್ಷಿಸಲು ಕಾನೂನು ಬಾಹಿರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಿಡಿಕಾರಿದ್ದಾರೆ.

Latest Videos

ಡಿಕೆಶಿ ಕೇಸ್‌ ವಾಪ್ಸಿ ಕದನ: ಕಾನೂನುಬಾಹಿರವಾಗಿ ಸಿಬಿಐ ತನಿಖೆಗೆ ಕೊಟ್ಟಿದ್ದರು, ಸಿದ್ದು

ರಾಜ್ಯಪಾಲರು ಮಧ್ಯಪ್ರವೇಶಿಸಲಿ:

ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಕ್ರಮ ಸಂವಿಧಾನ ವಿರೋಧಿ. ಈ ವಿಚಾರದಲ್ಲಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.

ಜನ ಏನು ಭಾವಿಸುತ್ತಾರೆಂಬುದನ್ನು ಯೋಚಿಸದೆ ಕೆಟ್ಟ ಪರಂಪರೆಗೆ ಸಚಿವ ಸಂಪುಟ ನಾಂದಿ ಹಾಡಿದೆ. ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಎನ್ನುವ ಪ್ರಶ್ನೆಗಿಂತ ತನಿಖೆ ರದ್ದು ಎಂದರೆ ನ್ಯಾಯಾಂಗ ವ್ಯವಸ್ಥೆಯನ್ನೇ ತಿರಸ್ಕರಿಸಿದಂತಾಗುತ್ತದೆ. ಒಬ್ಬ ಭ್ರಷ್ಟ ಆರೋಪಿಯ ಸಮರ್ಥನೆಗೆ ಇಡೀ ಸಚಿವ ಸಂಪುಟ ನಿಂತಿರುವುದು ಕರ್ನಾಟಕದ ಘನತೆಗೆ ಕಪ್ಪು ಚುಕ್ಕೆ ಇಟ್ಟಂತೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.
ಇನ್ನು ಸರ್ಕಾರದ ಈ ನಡೆ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿಯೂ ತಿಳಿಸಿರುವ ಯತ್ನಾಳ್‌, ಕಾಂಗ್ರೆಸ್ ಹೈಕಮಾಂಡ್ ಒತ್ತಡದ ಕಾರಣಕ್ಕೆ ಹೀಗೆ ಮಾಡಿರಬೇಕು. 135 ಸೀಟು ಗೆದ್ದಿದ್ದೇವೆ ಎನ್ನುವ ದುರಹಂಕಾರವೂ ಕಾಂಗ್ರೆಸ್ಸಿಗರಿಗಿದೆ. ಈ ಪ್ರಕರಣ ಕೋರ್ಟ್‌ನಲ್ಲಿದೆ. ಶೇ.90ರಷ್ಟು ವಿಚಾರಣೆ ಮುಗಿದು ಆರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರ ಡಿ.ಕೆ.ಶಿವಕುಮಾರ್‌ ರನ್ನು ಉಳಿಸಿಕೊಳ್ಳಲು ಹೊರಟಿರುವುದು ನಮಗೆ ಯಾರೂ ಕೇಳುವವರಿಲ್ಲ ಎನ್ನುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೈತಿಕವಾಗಿ ಸರಿಯಲ್ಲ: 

ಸರ್ಕಾರದ ನಿರ್ಧಾರ ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಶದಲ್ಲಿ ನಾಯಾಂಗ ವ್ಯವಸ್ಥೆಯಿದೆ. ಸರ್ಕಾರದ ನಿರ್ಣಯಗಳ ವಿರುದ್ಧವಾಗಿಯೂ ನ್ಯಾಯಾಲಯಗಳು ತೀರ್ಪು ನೀಡಿವೆ. ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿ ಈ ರೀತಿ ಪ್ರಕರಣವನ್ನು ಸಿಬಿಐ ಕೈಯಿಂದ ವಾಪಸ್ ಪಡೆದಿರುವುದು ಸರಿಯಲ್ಲ. ಸಂಬಂಧಿಸಿದ ಏಜೆನ್ಸಿಗಳು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಚಿವ ಸಂಪುಟದ‌ ಈ‌ ನಿರ್ಧಾರವನ್ನು ನ್ಯಾಯಾಲಯ ತಿರಸ್ಕರಿಸಲಿದೆ ಎನ್ನುವ ವಿಶ್ವಾಸವಿದೆ ಎಂದರು.

ಪ್ರಜಾಪ್ರಭುತ್ವಕ್ಕೇ ಅಪಮಾನ: 

ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ಪ್ರಕರಣವನ್ನು ಸಚಿವ ಸಂಪುಟ ವಾಪಸ್‌ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ದೇಶದ ಇತಿಹಾಸದಲ್ಲಿ ಸಿಬಿಐ ಕೇಸ್‌ ಹಿಂಪಡೆದದ್ದು ಇದೇ ಮೊದಲು. ಸರ್ಕಾರ ಬೀಳಲಿದೆ ಎಂಬುದಕ್ಕೆ ಇದು ಮೊದಲ ಹೆಜ್ಜೆ. ಸಿದ್ದರಾಮಯ್ಯ ಅವರ ಸಚಿವ ಸಂಪುಟ ಕಳ್ಳರ ಗುಂಪಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರೆ, ಡಿ.ಕೆ.ಶಿವಕುಮಾರ್ ಪ್ರಾಮಾಣಿಕ, ಪಾರದರ್ಶಕವಾಗಿ ಇದ್ದಿದ್ದರೆ ಅವರ ವಿರುದ್ಧದ ಪ್ರಕರಣ ಹಿಂಪಡೆಯುವ ಅಗತ್ಯ ಇರಲಿಲ್ಲ. ಪ್ರಾಮಾಣಿಕತೆ ಇದ್ದಿದ್ದರೆ ಅವರಿಗೆ ಭಯ ಯಾಕೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದ್ದಾರೆ.

ಡಿಕೆಶಿ ಪಾದದಡಿ ಕ್ಯಾಬಿನೆಟ್ ಇದೆ:

ಬಿಜೆಪಿ ಮುಖಂಡರ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡ ಧ್ವನಿಗೂಡಿಸಿದ್ದು, ಇಡೀ ಕ್ಯಾಬಿನೆಟ್ ಡಿ.ಕೆ.ಶಿವಕುಮಾರ್ ಅವರ ಪಾದದಡಿ ಇದೆ. ಇವರೆಲ್ಲ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ ಎನ್ನುವ ಅನುಮಾನ ಮೂಡುತ್ತದೆ ಎಂದು ಕಿಡಿಕಾರಿದ್ದಾರೆ. ಜತೆಗೆ, ಸರ್ಕಾರದ ಈ ನಿರ್ಧಾರಕ್ಕೆ ಛೀಮಾರಿ ಬೀಳಬಹುದು. ಮುಂದಿನ ಅಧಿವೇಶನದಲ್ಲಿ ಈ ವಿಷಯವಾಗಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಡಿಕೆ ಶಿವಕುಮಾರ ಕೇಸ್ ವಾಪಸ್ ಪಡೆದ ಪ್ರಕರಣ; ನಮ್ಮ ನಿರ್ಧಾರ ಸರಿಯಾಗಿದೆ -ರಾಮಲಿಂಗಾರೆಡ್ಡಿ ಸಮರ್ಥನೆ

ಅಡ್ವೋಕೇಟ್‌ ಜನರಲ್‌ ಒಪ್ಪಿಗೆ ಪಡೆದೇ ಸಿಬಿಐಗೆ

ಡಿಕೆಶಿ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದಿದ್ದು ಅಕ್ಷಮ್ಯ. ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ, ಅಡ್ವೋಕೇಟ್‌ ಜನರಲ್‌ ಒಪ್ಪಿಗೆ ಪಡೆದೇ ಪ್ರಕರಣವನ್ನು ಸಿಬಿಐಗೆ ನೀಡಲಾಗಿತ್ತು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. 

ತಪ್ಪನ್ನು ಡಿಕೆಶಿ ಒಪ್ಪಿದಂತಾಗಿದೆ

ಡಿಕೆಶಿ ಅವರು ಪ್ರಾಮಾಣಿಕರಾಗಿ ಇದ್ದರೆ ಸಚಿವ ಸಂಪುಟದ ತೀರ್ಮಾನವನ್ನು ವಿರೋಧಿಸಬೇಕಿತ್ತು. ಅವರು ವಿರೋಧಿಸದೇ ಇರುವುದರಿಂದ ತಪ್ಪು ಮಾಡಿರುವುದನ್ನು ಅವರು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.  

click me!