ಡಿಕೆಶಿ ಕೇಸ್‌ ವಾಪ್ಸಿ ಕದನ: ಕಾನೂನುಬಾಹಿರವಾಗಿ ಸಿಬಿಐ ತನಿಖೆಗೆ ಕೊಟ್ಟಿದ್ದರು, ಸಿದ್ದು

By Kannadaprabha NewsFirst Published Nov 25, 2023, 5:09 AM IST
Highlights

ಹಿಂದಿನ ಸರ್ಕಾರದ ಅವಧಿಯಲ್ಲೂ ಡಿ.ಕೆ.ಶಿವಕುಮಾರ್‌ ಅವರು ಶಾಸಕರು. ಒಬ್ಬ ವಿಧಾನಸಭೆಯ ಸದಸ್ಯರ ಮೇಲೆ ಸಿಬಿಐ ತನಿಖೆಗೆ ಅನುಮತಿ ನೀಡುವ ಕುರಿತು ವಿಧಾನಸಭಾಧ್ಯಕ್ಷರ ಪೂರ್ವಾನುಮತಿ ಹಾಗೂ ಅಡ್ವೋಕೇಟ್ ಜನರಲ್‌ ಅವರ ಅಭಿಪ್ರಾಯವನ್ನು ಪರಿಗಣಿಸಬೇಕಾಗಿತ್ತು. ಆದರೆ ಯಾವುದನ್ನೂ ಪರಿಗಣಿಸದೆ ಶಿವಕುಮಾರ್ ವಿರುದ್ಧ ಅಂದಿನ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಮೌಖಿಕ ಆದೇಶ ನೀಡಿರುವುದು ಕಾನೂನುಬಾಹಿರ ಎಂದು ಕಿಡಿಕಾರಿದ ಸಿದ್ದರಾಮಯ್ಯ 

ಬೆಂಗಳೂರು(ನ.25): ಹಿಂದಿನ ಸರ್ಕಾರವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದ ಬಗ್ಗೆ ವಿಧಾನಸಭೆ ಸ್ಪೀಕರ್‌ ಅವರ ಪೂರ್ವಾನುಮತಿ ಇಲ್ಲದೆ ಕೇವಲ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇರೆಗೆ ಕಾನೂನುಬಾಹಿರವಾಗಿ ಸಿಬಿಐ ತನಿಖೆಗೆ ನೀಡಿತ್ತು. ಇದು ಕಾನೂನು ಬಾಹಿರ ಎಂಬ ಕಾರಣಕ್ಕೆ ಸಚಿವ ಸಂಪುಟವು ತನಿಖೆ ಆದೇಶವನ್ನು ಹಿಂಪಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಪೊಲೀಸ್ ಇಲಾಖೆ ಕಾರ್ಯಕ್ರಮ ಹಾಗೂ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಕಾರ್ಯಕ್ರಮ ಸೇರಿದಂತೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆ ಕುರಿತ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದರು.

Latest Videos

ಒಲ್ಲದ ಮನಸ್ಸಿನಿಂದ ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆಯಿತಾ ಸಿದ್ದರಾಮಯ್ಯ ಸಂಪುಟ?

ಹಿಂದಿನ ಸರ್ಕಾರದ ಅವಧಿಯಲ್ಲೂ ಡಿ.ಕೆ.ಶಿವಕುಮಾರ್‌ ಅವರು ಶಾಸಕರು. ಒಬ್ಬ ವಿಧಾನಸಭೆಯ ಸದಸ್ಯರ ಮೇಲೆ ಸಿಬಿಐ ತನಿಖೆಗೆ ಅನುಮತಿ ನೀಡುವ ಕುರಿತು ವಿಧಾನಸಭಾಧ್ಯಕ್ಷರ ಪೂರ್ವಾನುಮತಿ ಹಾಗೂ ಅಡ್ವೋಕೇಟ್ ಜನರಲ್‌ ಅವರ ಅಭಿಪ್ರಾಯವನ್ನು ಪರಿಗಣಿಸಬೇಕಾಗಿತ್ತು. ಆದರೆ ಯಾವುದನ್ನೂ ಪರಿಗಣಿಸದೆ ಶಿವಕುಮಾರ್ ವಿರುದ್ಧ ಅಂದಿನ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಮೌಖಿಕ ಆದೇಶ ನೀಡಿರುವುದು ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸಿಬಿಐ ತನಿಖೆ ಆದೇಶ ಹಿಂಪಡೆಯುವ ಮೂಲಕ ಅಕ್ರಮದಲ್ಲಿ ಸಿದ್ದರಾಮಯ್ಯ ಅವರೂ ಶಾಮೀಲಾದಂತಾಗಿದೆ ಎಂಬ ಬಿ.ಎಸ್‌.ಯಡಿಯೂರಪ್ಪ ಆರೋಪಕ್ಕೆ, ‘ನನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಚಿವ ಸಂಪುಟ ಸಭೆಯ ಒಟ್ಟಾರೆ ನಿರ್ಣಯ. ಹಿಂದಿನ ಸರ್ಕಾರದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕಾನೂನು ಪ್ರಕಾರ ಶಿಫಾರಸು ಮಾಡಿಲ್ಲ. ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಹಾಗೂ ಸ್ಪೀಕರ್‌ ಅನುಮತಿ ಪಡೆದಿಲ್ಲ ಎಂಬುದು ಕಾನೂನುಬಾಹಿರ. ಈಗ ಮಾತನಾಡುವ ಯಡಿಯೂರಪ್ಪ ಕಾನೂನು ಪ್ರಕಾರ ಯಾಕೆ ತನಿಖೆಗೆ ಶಿಫಾರಸು ಮಾಡಿರಲಿಲ್ಲ?’ ಎಂದು ಪ್ರಶ್ನಿಸಿದರು.

ಇನ್ನು ನಾವು ಪ್ರಕರಣವನ್ನು ಹಿಂಪಡೆದಿಲ್ಲ. ಬಿಜೆಪಿ ಅವಧಿಯಲ್ಲಿ ಮಾಡಿದ್ದ ಕಾನೂನುಬಾಹಿರ ಶಿಫಾರಸನ್ನು ಮಾತ್ರ ಹಿಂಪಡೆದಿದ್ದೇವೆ. ಯಡಿಯೂರಪ್ಪ ಕಾನೂನು ಪಾಲನೆ ಮಾಡಿಲ್ಲ. ಈಗ ಬೇಕಿದ್ದರೆ ನಮ್ಮ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡಲಿ, ಬೇಡ ಎಂದವರು ಯಾರು? ಎಂದು ಹೇಳಿದರು.

ನಾನು ನ್ಯಾಯಾಲಯದ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಕಾನೂನುಬಾಹಿರವಾಗಿ ಮಂಜೂರಾತಿ ನೀಡಿರುವುದು ಸರಿಯಿಲ್ಲ. ಹಾಗಾಗಿ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದು ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಆದರೆ ನ್ಯಾಯಾಲಯದ ತೀರ್ಮಾನಗಳಿಗೆ ನಾವು ಮಧ್ಯಪ್ರವೇಶಿಸುವಂತಿಲ್ಲ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆಯೋ ಮಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾನೂನು ಚೌಕಟ್ಟಲ್ಲೇ ನಿರ್ಧಾರ ಮಾಡಿದ್ದೇವೆ.

ಕೈಪಾಳಯದಲ್ಲೇ ಭಿನ್ನ ಚರ್ಚೆ ಹುಟ್ಟು ಹಾಕಿದ ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ತೀರ್ಮಾನ!

ಡಿಕೆಶಿ ವಿರುದ್ಧದ ತನಿಖೆಯನ್ನು ಹಿಂಪಡೆವ ನಿರ್ಧಾರವನ್ನು ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ನಾವು ಹೈಕೋರ್ಟ್​ಗೆ ಸಂಪುಟ ಸಭೆ ತೀರ್ಮಾನವನ್ನು ಸಲ್ಲಿಸುತ್ತೇವೆ. ನ್ಯಾಯಾಲಯ ಹಾಗೂ ಸಿಬಿಐ ಮುಂದೆ ಏನು ಮಾಡುತ್ತವೆ ಎಂಬುದು ವ್ಯವಸ್ಥೆಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ। ಜಿ. ಪರಮೇಶ್ವರ್‌ ತಿಳಿಸಿದ್ದಾರೆ.  

ಸರ್ಕಾರದ ಸಮರ್ಥನೆ ಏನು?

- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಶಾಸಕರಾಗಿದ್ದರು
- ಶಾಸಕರ ವಿರುದ್ಧ ಸಿಬಿಐ ತನಿಖೆಗೆ ಒಪ್ಪಿಗೆ ನೀಡಲು ಸ್ಪೀಕರ್‌ ಅನುಮತಿ ಕಡ್ಡಾಯ
- ಅಡ್ವೋಕೇಟ್‌ ಜನರಲ್‌ ಅಭಿಪ್ರಾಯವನ್ನೂ ಸರ್ಕಾರ ಪರಿಗಣನೆ ಮಾಡಬೇಕಿತ್ತು
- ಇದನ್ನು ಪರಿಗಣಿಸದೆ ಅಂದಿನ ಸಿಎಂ ತನಿಖೆಗೆ ಮೌಖಿಕವಾಗಿ ಆದೇಶ ನೀಡಿದ್ದಾರೆ
- ಇದು ಕಾನೂನುಬಾಹಿರ. ಹೀಗಾಗಿ ಆದೇಶವನ್ನು ವಾಪಸ್‌ಗೆ ನಿರ್ಧಾರ ಮಾಡಿದ್ದೇವೆ
- ಅಂದಿನ ಸಿಎಂ ಯಡಿಯೂರಪ್ಪ ಏಕೆ ಕಾನೂನು ಪ್ರಕಾರ ತನಿಖೆಗೆ ಸೂಚಿಸಲಿಲ್ಲ?

click me!