ನಕಲಿ ಬಿಲ್‌ ಸೃಷ್ಟಿ: ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್‌ಗೆ 2 ವರ್ಷ ಜೈಲು

By Kannadaprabha News  |  First Published Feb 14, 2023, 4:20 AM IST

ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಅಕ್ರಮ ಎಸಗಿದ ಆರೋಪದ ಮೇಲೆ ಆಡಳಿತಾರೂಢ ಬಿಜೆಪಿ ಶಾಸಕ ನೆಹರು ಓಲೇಕಾರ್‌ ಸೇರಿದಂತೆ ಒಂಬತ್ತು ಮಂದಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ ಎರಡು ಸಾವಿರ ರು. ದಂಡ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. 


ಬೆಂಗಳೂರು (ಫೆ.14): ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಅಕ್ರಮ ಎಸಗಿದ ಆರೋಪದ ಮೇಲೆ ಆಡಳಿತಾರೂಢ ಬಿಜೆಪಿ ಶಾಸಕ ನೆಹರು ಓಲೇಕಾರ್‌ ಸೇರಿದಂತೆ ಒಂಬತ್ತು ಮಂದಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ ಎರಡು ಸಾವಿರ ರು. ದಂಡ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ಹಾವೇರಿ ನಗರಸಭೆಯ ಕಾಮಗಾರಿಗಳು ನಡೆಯದಿದ್ದರೂ ಕಾಮಗಾರಿಗಳು ನಡೆದಿವೆ ಎಂದು ನಕಲಿ ಬಿಲ್‌ ಸೃಷ್ಟಿಸಿ ಸುಮಾರು ಐದು ಕೋಟಿ ರು.ಗಿಂತ ಹೆಚ್ಚು ಅಕ್ರಮ ಎಸಗಿರುವುದು ಸಾಬೀತಾಗಿದೆ. ಸಾಮಾಜಿಕ ಕಾರ್ಯಕರ್ತ ಶಶಿಧರ್‌ ಮಹದೇವಪ್ಪ ಹಳ್ಳಿಕೆರೆ ನೀಡಿರುವ ದೂರಿನ ಮೇರೆಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರ ಒಂಬತ್ತು ಮಂದಿಗೆ ಶಿಕ್ಷೆ ವಿಧಿಸಿದೆ.

ನೆಹರು ಓಲೇಕಾರ್‌ ಅವರು ಮೊದಲ ಆರೋಪಿಯಾಗಿದ್ದು, ಅವರ ಪುತ್ರರಾದ ಮಂಜುನಾಥ್‌ ಓಲೇಕಾರ್‌, ದೇವರಾಜ್‌ ಓಲೇಕಾರ್‌ ಕ್ರಮವಾಗಿ ಎರಡನೇ ಮತ್ತು ಮೂರನೇ ಆರೋಪಿಯಾಗಿದ್ದಾರೆ. ನಿವೃತ್ತ ಅಧಿಕಾರಿಗಳಾದ ಎಚ್‌.ಕೆ.ರುದ್ರಪ್ಪ, ಎಚ್‌.ಕೆ.ಕಲ್ಲಪ್ಪ, ಕೆ.ಮಂಜುನಾಥ್‌ (ನಿಧನ), ಶಿವಕುಮಾರ್‌ ಪುಟ್ಟಯ್ಯ ಕಮದೊಡ್‌, ಚಂದ್ರಮೋಹನ್‌ ಮತ್ತು ಕೆ.ಕೃಷ್ಣ ನಾಯಕ್‌ ಕ್ರಮವಾಗಿ ನಾಲ್ಕನೇ, ಐದನೇ, ಆರನೇ, ಏಳನೇ, ಎಂಟನೇ ಮತ್ತು ಒಂಬತ್ತನೇ ಆರೋಪಿಯಾಗಿದ್ದಾರೆ.

Latest Videos

undefined

ಅರಬಾವಿ, ಗೋಕಾಕ ಗೆಲುವಿನ ಜವಾಬ್ದಾರಿ ನಿಮ್ಮದು: ರಮೇಶ ಜಾರಕಿಹೊಳಿ

ಒಂಬತ್ತು ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ ಎರಡು ಸಾವಿರ ರು. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು. ಸಂಗ್ರಹಿಸಿದ ಒಟ್ಟಾರೆ ದಂಡದ ಮೊತ್ತದಲ್ಲಿ 10 ಸಾವಿರ ರು.ಗಳನ್ನು ದೂರುದಾರ ಶಶಿಧರ್‌ ಮಹದೇವಪ್ಪ ಹಳ್ಳಿಕೆರೆ ಅವರಿಗೆ ನೀಡಬೇಕು. ದಾಖಲೆಗಳ ಸಂಗ್ರಹಣೆಗಾಗಿ ಹಣ ವೆಚ್ಚ ಮಾಡಿದ್ದಕ್ಕೆ ಪರಿಹಾರವಾಗಿ 10 ಸಾವಿರ ರು. ಪಾವತಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

2008-13ರವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ನೆಹರು ಓಲೇಕಾರ್‌ ಅವರು ಹಾವೇರಿ ನಗರಸಭೆಯ ಕಾಮಗಾರಿಗಳನ್ನು ತಮ್ಮ ಪುತ್ರರಿಗೆ ಗುತ್ತಿಗೆ ಕೊಡಿಸಿದ್ದರು. ಕಾಮಗಾರಿಗಳನ್ನು ನಡೆಸದಿದ್ದರೂ ಕಾಮಗಾರಿಗಳು ನಡೆದಿವೆ ಎಂದು ನಕಲಿ ದಾಖಲೆ ಸೃಷ್ಟಿಸಿ 5.35 ಕೋಟಿ ರು. ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ಒಟ್ಟು ಐದು ಕಾಮಗಾರಿ ನಡೆಸಲಾಗಿದ್ದು, 1.50 ಕೋಟಿ ರು., 2.15 ಕೋಟಿ ರು., 70 ಲಕ್ಷ ರು., 80 ಲಕ್ಷ ರು. ಮತ್ತು 20 ಲಕ್ಷ ರು. ಮೊತ್ತದ ಕಾಮಗಾರಿಯಲ್ಲಿ ವಂಚನೆ ಮಾಡಲಾಗಿದೆ. ಇದಲ್ಲದೇ, ಬೇರೆ ಬೇರೆ ಕಾಮಗಾರಿಗಳಲ್ಲಿಯೂ ವಂಚನೆ ಮಾಡಲಾಗಿದೆ. ಸ್ವಜಪಕ್ಷಪಾತ ಮಾಡುವುದಲ್ಲದೇ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟವನ್ನುಂಟು ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ಜಾತಿ ಹೆಸರಲ್ಲಿ ಪ್ರಲ್ಹಾದ್ ಜೋಶಿ ಟೀಕೆ ಸರಿಯಲ್ಲ: ಲಕ್ಷ್ಮಣ ಸವದಿ

ಶಾಸಕರು ಅನರ್ಹ: ನ್ಯಾಯಾಲಯದಿಂದ ಎರಡು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟು ಶಿಕ್ಷೆಗೊಳಗಾಗುವ ಜನಪ್ರತಿನಿಧಿಗಳು ನಿಗದಿಪಡಿಸಿದ ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಶಿಕ್ಷೆಯ ಅವಧಿ ಆಧರಿಸಿ ಇಂತಿಷ್ಟುವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬುದಾಗಿ ಕಾನೂನು ಹೇಳುತ್ತದೆ. ಶಿಕ್ಷೆ ಪ್ರಕಟಿಸಿದ ದಿನದಿಂದ ಅವರ ಸದಸ್ಯತ್ವ ರದ್ದಾಗುತ್ತದೆ. ಆದರೆ ಅಧೀನ ನ್ಯಾಯಾಲಯ ನೀಡುವ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದೇ ಇರುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

click me!