ಹುಲಿ ನಿಯಂತ್ರಣ ಮಾಡುವುದು ನಮಗೆ ಗೊತ್ತು. ದಾಳಿಕೋರ ಹುಲಿಗಳನ್ನು ಬೇಟೆಯಾಡಲು ನಮಗೆ ಅನುಮತಿ ಕೊಡಿ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಆಡಳಿತಾರೂಢ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ವಿಧಾನಸಭೆ (ಫೆ.14): ಹುಲಿ ನಿಯಂತ್ರಣ ಮಾಡುವುದು ನಮಗೆ ಗೊತ್ತು. ದಾಳಿಕೋರ ಹುಲಿಗಳನ್ನು ಬೇಟೆಯಾಡಲು ನಮಗೆ ಅನುಮತಿ ಕೊಡಿ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಆಡಳಿತಾರೂಢ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಸೋಮವಾರ ಶೂನ್ಯವೇಳೆಯಲ್ಲಿ ಬೋಪಯ್ಯ ಅವರು ವಿರಾಜಪೇಟೆ ತಾಲೂಕಿನಲ್ಲಿ ನಡೆದಿರುವ ಹುಲಿ ದಾಳಿಗೆ ತಾತ ಮತ್ತು ಮೊಮ್ಮಗ ಸಾವನ್ನಪ್ಪಿರುವ ವಿಚಾರವನ್ನು ಪ್ರಸ್ತಾಪಿಸಿ, ನಾಗರಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹುಲಿ ದಾಳಿಗೆ 12 ವರ್ಷದ ಮಗು ತುತ್ತಾಗಿದೆ.
ಮಗು ಸಾವನ್ನಪ್ಪಿರುವ ವಿಚಾರ ತಿಳಿದು ಕುಟುಂಬ ಸದಸ್ಯರು ಮನೆಗೆ ಬಂದಿದ್ದ ವೇಳೆ ಮಗುವಿನ ತಾತನನ್ನು ಸಹ ಹುಲಿ ಬಲಿ ಪಡೆದಿದೆ ಎಂದು ಹೇಳಿದರು. ಮಗುವನ್ನು ಹುಲಿ ತೆಗೆದುಕೊಂಡ ಹೋದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಮತ್ತು ಅವರ ನಿರ್ಲಕ್ಷ್ಯತನಿಂದ ಮುದುಕ ಸಾವನ್ನಪ್ಪಬೇಕಾಯಿತು. ಹುಲಿ ಒಮ್ಮೆ ಮನುಷ್ಯನ ರಕ್ತ ಸೇವನೆ ಮಾಡಿದರೆ ಪದೇ ಪದೇ ಮನುಷ್ಯನ ಮೇಲೆ ದಾಳಿ ನಡೆಸಲು ಬರುತ್ತದೆ ಎಂಬುದು ಅರಣ್ಯ ಇಲಾಖೆಗೆ ತಿಳಿದಿಲ್ಲವೇ? ಸೂಕ್ತ ಕ್ರಮ ಕೈಗೊಂಡಿದ್ದರೆ ಮತ್ತೊಂದು ಪ್ರಾಣವನ್ನು ಉಳಿಸಬಹುದಾಗಿತ್ತು.
undefined
ನಿನ್ನೆ ಮೊಮ್ಮಗ, ಇಂದು ತಾತ: ನರಭಕ್ಷಕ ಹುಲಿಗೆ 24 ಗಂಟೆಯಲ್ಲಿ ಒಂದೇ ಕುಟುಂಬದ ಇಬ್ಬರ ಬಲಿ
ರಾತ್ರಿ ಹೊತ್ತಿನಲ್ಲಿ ಮಗುವಿನ ಪ್ರಾಣ ಪಡೆದ ಹುಲಿ ಮುಂಜಾನೆ ಮುದುಕನ ಪ್ರಾಣವನ್ನು ಪಡೆದಿದೆ ಎಂದು ಕಿಡಿಕಾರಿದರು. ಅರಣ್ಯ ಇಲಾಖೆಯ ನಿರ್ಲಕ್ಷ್ಯತನದಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಬೇಜವಾಬ್ದಾರಿತನ ತೋರಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಹುಲಿ ನಿಯಂತ್ರಣ ಮಾಡುವುದು ನಮಗೆ ಗೊತ್ತಿದೆ. ಬೇಟೆಯಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಬೋಪಯ್ಯ ಮಾತಿಗೆ ದನಿಗೂಡಿಸಿದ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್, ಸಂಬಂಧ ಪಟ್ಟಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯ ಎಚ್.ಪಿ.ಮಂಜುನಾಥ್, ಹುಲಿ ದಾಳಿಯಿಂದ ಮೃತರಾದವರು ನನ್ನ ತಾಲೂಕಿನವರು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನ ಕಾಣುತ್ತಿದೆ. ತಾತ, ಮೊಮ್ಮಗ ಸಾವನ್ನಪ್ಪಿದ ಸುದ್ದಿ ತಿಳಿಸಿದ ಅಜ್ಜಿಯೂ ಸಹ ಮೃತರಾಗಿದ್ದಾರೆ ಎಂದು ಸದನದ ಗಮನ ಸೆಳೆದರು.
ಯಾರ ಹಂಗಿಲ್ಲದೆ ಸರ್ಕಾರ ರಚಿಸುವ ಶಕ್ತಿ ನೀಡಿ: ನಿಖಿಲ್ ಕುಮಾರಸ್ವಾಮಿ
ಮಂಜುನಾಥ್ ಮಾತು ಕೇಳಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು. ಹುಲಿ ದಾಳಿ ಮತ್ತು ಅದರ ನಿಯಂತ್ರಣ ಕುರಿತು ಸದನದಲ್ಲಿ ವಿಶೇಷ ಚರ್ಚೆಗೆ ಅವಕಾಶ ನೀಡುವುದಾಗಿ ಆಶ್ವಾಸನೆ ನೀಡಿದರು. ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಯಾವುದೇ ಹಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ ಎಂಬುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ. ಮುಖ್ಯಮಂತ್ರಿ ಬಂದ ಬಳಿಕ ಇಲಾಖೆಯಿಂದ ಮಾಹಿತಿಯನ್ನು ತರಿಸಿ ಉತ್ತರ ಕೊಡುತ್ತೇವೆ ಎಂದರು.