ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ, ಸಿದ್ದರಾಮಯ್ಯ ಅವರ ಬಜೆಟ್ ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಎಂದು ಟೀಕಿಸಿದ್ದಾರೆ. ಈ ಬಜೆಟ್ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ, ಜೆಡಿಎಸ್ ಬೆಂಬಲದೊಂದಿಗೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಕಲಬುರಗಿ (ಮಾ.24) : ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಆಗಿರೋದು ಸ್ಪಷ್ಟ. ಇದರ ವಿರುದ್ಧ ಬಿಜೆಪಿ ಸೋಮವಾರದಿಂದ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಪುನರುಚ್ಚರಿಸಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲಾಲ್ ಬಜೆಟ್ ವಿರುದ್ಧದ ಬಿಜೆಪಿಯ ಈ ಹೋರಾಟಕ್ಕೆ ಜೆಡಿಎಸ್‌ನ ಬೆಂಬಲವೂ ಇದೆ. ಈಗಾಗಲೇ ಈ ಬಗ್ಗೆ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ ಜೊತೆ ಮಾತಾಡಿರುವೆ, ಬೆಂಗಳೂರಿಗೆ ಹೋದ ನಂತರ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸುವೆ ಎಂದರು.
ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಅಲ್ಲ, ಹಾಗಂತ ನಾವು ಓಲೈಕೆ ರಾಜಕೀಯ ಮೆಚ್ಚೋದಿಲ್ಲ. ಮುಸ್ಲಿಂ ಓಲೈಕೆ ನೆಪದಲ್ಲಿ ಹಿಂದೂಗಳಿಗೆ ಅವಮಾನ ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ಹೋರಾಟ ರೂಪಿಸಿದ್ದೇವೆ. ಜೆಡಿಎಸ್ ಜೊತೆ ಸೇರಿ ಸೋಮವಾರದಿಂದ ರಾಜ್ಯದಲ್ಲಿ ಹೋರಾಟ ನಡೆಸುತ್ತೇವೆ. ಅಲ್ಪಸಂಖ್ಯಾತರ ಓಲೈಕೆ ಬಿಟ್ಟರೆ ಬಜೆಟ್‌ನಲ್ಲಿ ಬೇರೆನೂ ಇಲ್ಲ. ಸಿದ್ದರಾಮಯ್ಯ ಅವರಂತಹ ಅನುಭವಿ ಸಿಎಂರಿಂದ ಈ ರೀತಿಯ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಇದನ್ನೂ ಓದಿ: ಸಿಎಂ ಪರ ಮಾತಾಡಿದ್ರೆ ಕೆಲವರಿಗೆ ಹೊಟ್ಟೆ ಕಿಚ್ಚು, 'ಹನಿಟ್ರ್ಯಾಪ್' ಕುರಿತು ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ!
ಸಚಿವ ರಾಜಣ್ಣರಿಂದ ದಿನಕ್ಕೊಂದು ರೀತಿ ಹೇಳಿಕೆ:
ಹನಿಟ್ರ್ಯಾಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಪ್ರಕರಣ ಸದನದಲ್ಲೂ ಚರ್ಚೆ ಆಗಿದೆ, ಆಡಳಿತ ಪಕ್ಷದಲ್ಲಿ ಸಿಎಂ ಗಾದಿಗೆ ನಡೆಯುತ್ತಿರುವ ಪೈಪೋಟಿಗೆ ಸುತ್ತುವರೆದ ಪ್ರಕರಣ ಇದು. ಆದರೆ, ಇಲ್ಲಿ ಸಚಿವ ರಾಜಣ್ಣ ದಿನಕ್ಕೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರು ಏನು ದೂರು ಕೊಡ್ತಾರೋ ಕೊಡಲಿ ನೋಡೋಣ ಎಂದರು.
ಸದನದಲ್ಲಿ ಓಲೈಕೆ ರಾಜಕೀಯ, ಮಧುಬಲೆ ವಿಷಯವಾಗಿ ಪ್ರತಿಭಟನೆ ನಡೆಸಿದರೆ 18 ಶಾಸಕರನ್ನು ಆರು ತಿಂಗಳು ಅಮಾನತು ಮಾಡಲಾಗುತ್ತಿದೆ. ಇದು ಸರಿಯಾದಂತಹ ಕ್ರಮವಲ್ಲ. ಈ ಹಿಂದೆ ಕಾಂಗ್ರೆಸ್‌ನವರು ಸಭಾಧ್ಯಕ್ಷರನ್ನು ಪೀಠದ ಸಮೇತ ಆಚೆ ಕಳುಹಿಸುವ ಕೆಲಸ ಮಾಡಿದ್ದರು. ಈಗ 18 ಶಾಸಕರ ಅಮಾನತು ಮಾಡಲಾಗಿದೆ, ಇದು ಕಾನೂನು ಬಾಹಿರ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಸಿದ್ದು-ಖರ್ಗೆ ಭೇಟಿ: ಸಂಪುಟ ಪುನರ್‌ರಚನೆಗೆ ಸಿದ್ಧತೆ?
ಅಲ್ಪಸಂಖ್ಯಾತ ತುಷ್ಟಿಕರಣ ವಿರುದ್ಧ ಧರಣಿ ಮಾಡಿದ್ದೇವೆ. ಸಭಾಧ್ಯಕ್ಷರು ತಮ್ಮ ಅಧಿಕಾರ ಬಳಸಿ ಸೀಮಿತ ಅವಧಿಗೆ ಅಮಾನತು ಮಾಡಬಹುದಿತ್ತು. ಆದರೆ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ ಹಾಕುವಂತಿಲ್ಲ ಎಂಬುದೂ ಸೇರಿ ಹಲವು ಕಂಡಿಷನ್ ಹಾಕಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ. ಆರು ತಿಂಗಳು ಅಮಾನತು ಆಯಾ ಶಾಸಕರ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದಂತೆ ಎಂದು ಆರೋಪಿಸಿದರು.
ಶಾಸಕರು ಮನವಿ ಕೊಡಲಿ ಅಮಾನತು ಹಿಂಪಡೆಯುವೆ ಎಂದು ಸಭಾಧ್ಯಕ್ಷರೇ ಹೇಳಿದ್ದಾರೆ. ಅಮಾನತು ಹಿಂಪಡೆಯಲು ಸಭಾಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದೇವೆ. ಅದೇನು ಮಾಡುತ್ತಾರೋ ನೋಡೋಣ ಎಂದರು.