
ಬೆಂಗಳೂರು (ಡಿ.7) : ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಭವಾನಿ ಪ್ರಯಾಣ ಮಾಡುತ್ತಿದ್ದ ಕಾರು ಬಿಬಿಎಂಪಿಯ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಸೇರಿದಾಗಿದೆ. ಆ ಕಾರನ್ನು ಭವಾನಿ ರೇವಣ್ಣ ಅವರಿಗೆ ಗುತ್ತಿಗೆದಾರರು ಕೊಟ್ಟಿದ್ಯಾಕೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಕಾರ್ಯದರ್ಶಿ ವಿ.ಆರ್.ಮರಾಠೆ, ಸಾಮಾಜಿಕ ಕಾರ್ಯಕರ್ತ ರೊನಾಲ್ಡ್ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಭಾನುವಾರ ಮೈಸೂರು ಬಳಿ ಭವಾನಿ ರೇವಣ್ಣ ಅವರಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಬೈಕ್ ಸವಾರರ ವಿರುದ್ಧ ಭವಾನಿ ರೇವಣ್ಣ ಕೂಗಾಡಿದ್ದರು. ಅವನ ಬೈಕ್ ಸುಟ್ಟಾಕಿ ಎಂದೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಭವಾನಿ ರೇವಣ್ಣ ಕೂಗಾಡುವ ಸಂದರ್ಭದಲ್ಲಿ ಎಲ್ಲಿಯೂ ಇದು ತಮ್ಮ ಕಾರು ಎಂದು ಹೇಳಿರಲಿಲ್ಲ ಎಂದರು.
ನಮ್ಮ ಕುಟುಂಬ ಯಾರಿಗೂ ನೋವುಂಟು ಮಾಡಲ್ಲ: ಭವಾನಿ ಕಾರು ಅಪಘಾತ ಪ್ರಕರಣಕ್ಕೆ ಕ್ಷಮೆ ಕೇಳಿದ ಎಚ್‌ಡಿ ರೇವಣ್ಣ
ಆದರೆ, ಸೂರಜ್ ರೇವಣ್ಣ ಮೊದಲು ಇದು ತಮ್ಮ ತಾಯಿಯ ಕಾರು ಎಂದು ಹೇಳಿದ್ದರು. ನಂತರ ಮಾಧ್ಯಮದವರ ಪ್ರಶ್ನೆಗೆ ಇಲ್ಲ ಇದು ತಮ್ಮ ತಾಯಿಯವರ ಸ್ನೇಹಿತರ ಕಾರು ಎಂದು ಹೇಳಿ ಗೊಂದಲಕ್ಕೆ ಎಡೆ ಮಾಡಿದ್ದರು. ಕಾರಿನ ಮಾಲೀಕತ್ವದ ಕುರಿತು ಪರಿಶೀಲನೆ ಮಾಡಿದಾಗ ಅದು ಆಫ್ರಾ ಇನ್ಫ ಎಂಜಿನಿಯರಿಂಗ್ ಕಂಪನಿ ಹೆಸರಿನಲ್ಲಿ ನೋಂದಣಿ ಆಗಿದೆ. ಆ ಕಂಪನಿಯ ನಿರ್ದೇಶಕ ಅಭಿಜಿತ್ ಅಶೋಕ್ ಎಂಬುವವರಾಗಿದ್ದು, ಅವರು ಬಿಬಿಎಂಪಿಯ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಬಿಬಿಎಂಪಿಯ ಗುತ್ತಿಗೆದಾರರರು ಭವಾನಿ ರೇವಣ್ಣ ಅವರಿಗೆ ಕಾರನ್ನು ಕೊಡುಗೆಯಾಗಿ ಬಂದಿದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಆ ಗುತ್ತಿಗೆದಾರರಿಗೂ ರೇವಣ್ಣ ಕುಟುಂಬಕ್ಕೂ ಏನು ಸಂಬಂಧ?, ಕಾಮಗಾರಿ ಪಡೆಯಲು ರೇವಣ್ಣ ಅವರ ಕುಟುಂಬದ ಸಹಾಯ ಇದೆಯಾ?, ವಾಹನ ಮಾಲೀಕರು ರೇವಣ್ಣ ಕುಟುಂಬದ ಬೇನಾಮಿಯಾ?, ಕೋಟಿ ಕೋಟಿ, ಹಣ ಇದ್ದರೂ ಭವಾನಿ ರೇವಣ್ಣ ಸ್ನೇಹಿತರ ಕಾರು ಬಳಸುತ್ತಿರುವುದು ಏಕೆ? ಎಂಬೆಲ್ಲಾ ಪ್ರಶ್ನೆಗಳು ಮೂಡಿವೆ. ಹೀಗಾಗಿ, ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಗುರಿ: ಕೈ ನಾಯಕರ ವಿರುದ್ಧ ಗುಡುಗಿದ ದೇವೇಗೌಡ
ಅಪಘಾತಕ್ಕೀಡಾದ ಕಾರು ಒಂದೂವರೆ ಕೋಟಿ ಬೆಲೆ ಬಾಳುವಂತಹದ್ದು ಎಂದು ಭವಾನಿ ರೇವಣ್ಣ ಅವರೇ ಹೇಳಿರುವುದರಿಂದ ಈ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ